ವಿಧಾನಸಭೆಯ ಸಮಿತಿಯಿಂದ ಮುಕುಲ್ ರಾಯ್ ದೂರವಿಡುವಂತೆ ರಾಜ್ಯಪಾಲರಿಗೆ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಮನವಿ

Update: 2021-07-13 13:28 GMT

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ನ ಮುಕುಲ್ ರಾಯ್ ಅವರನ್ನು ಪ್ರಮುಖ ಸಾರ್ವಜನಿಕ ಖಾತೆಗಳ ಸಮಿತಿಯ(ಪಿಎಸಿ) ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಆಕ್ಷೇಪಿಸಿರುವ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಇಂದು ಸಂಜೆ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಭೇಟಿಯಾದರು.

ಈ ವಿಚಾರದಲ್ಲಿ ರಾಜ್ಯಪಾಲರ ಹಸ್ತಕ್ಷೇಪವನ್ನು ಕೋರಿದ ಅವರು, ಈ ನೇಮಕಾತಿ ಕಾನೂನು ಉಲ್ಲಂಘನೆಯಾಗಿದೆ.  ಪ್ರತಿಪಕ್ಷದ ಶಾಸಕರನ್ನು ಯಾವಾಗಲೂ ಸಾರ್ವಜನಿಕ ಖಾತೆಗಳ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ. ತೃಣಮೂಲ ಆ ನಿಯಮವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅಧಿಕಾರಿ ವಾದಿಸಿದ್ದಾರೆ.

ಪ್ರತಿಪಕ್ಷದ ನಾಯಕ ಸುವೇಂದು  ಅಧಿಕಾರಿಯ ನೇತೃತ್ವದ ವಿರೋಧ ಪಕ್ಷದ ಶಾಸಕರ ನಿಯೋಗವು ಇಂದು ಸಂಜೆ 4 ಗಂಟೆಗೆ ಕೋಲ್ಕತ್ತಾದ ರಾಜ್ ಭವನದಲ್ಲಿ ಪಶ್ಚಿಮಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಭೇಟಿ ಮಾಡಿತು. ವಿಧಾನಸಭೆಯಲ್ಲಿ ಪಿಎಸಿ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ನಿಯಮ ಉಲ್ಲಂಘನೆಯಾಗಿದೆ ಎಂದು ಪ್ರತಿಪಕ್ಷದ ನಾಯಕ ಪತ್ರವನ್ನು ಸಲ್ಲಿಸಿದರು ಎಂದು ರಾಜಭವನ ಟ್ವೀಟಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಭರ್ಜರಿ ಜಯ ಗಳಿಸಿದ ನಂತರ ಕಳೆದ ತಿಂಗಳು ಪಕ್ಷವನ್ನು ಬದಲಾಯಿಸಿದ ರಾಯ್ ಅವರು ಬಿಜೆಪಿ ಟಿಕೆಟ್‌ನಲ್ಲಿ ಗೆದ್ದ ವಿಧಾನಸಭಾ ಕ್ಷೇತ್ರ ಕೃಷ್ಣನಗರ ಉತ್ತರಕ್ಕೆ ಇನ್ನೂ ರಾಜೀನಾಮೆ ನೀಡಿಲ್ಲ. ರಾಯ್ ಅವರು ಇನ್ನೂ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರಾಗಿದ್ದಾರೆ ಹಾಗೂ ನೇಮಕಾತಿಗೆ ಅರ್ಹರಾಗಿದ್ದಾರೆ ಎಂದು ತೃಣಮೂಲ ವಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News