×
Ad

ಮ್ಯಾನ್ಮಾರ್: ಪದಚ್ಯುತ ನಾಯಕಿ ಸೂ ಕಿ ವಿರುದ್ಧ 4 ಹೆಚ್ಚುವರಿ ಕ್ರಿಮಿನಲ್ ಪ್ರಕರಣ ದಾಖಲು

Update: 2021-07-13 20:07 IST
photo: twiiter/@Blinkaeristay2

ಯಾಂಗಾನ್(ರಂಗೂನ್), ಜು.13: ಮ್ಯಾನ್ಮಾರ್ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂ ಕಿ ವಿರುದ್ಧ ಹೆಚ್ಚುವರಿಯಾಗಿ 4 ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಅವರ ವಕೀಲರು ಹೇಳಿದ್ದಾರೆ. ಈ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆದರೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ ಅವರ ಸರಕಾರದಲ್ಲಿ ಸಚಿವರಾಗಿದ್ದ ಮಿನ್ ಥು ವಿರುದ್ಧವೂ 2 ಪ್ರಕರಣ ದಾಖಲಾಗಿರುವ ಮಾಹಿತಿ ಲಭಿಸಿದೆ. ‌

ಭ್ರಷ್ಟಾಚಾರದ ಆರೋಪ ಇಲ್ಲದಿದ್ದರೂ ಪ್ರಕರಣ ದಾಖಲಾಗಿರುವುದು ಅಚ್ಚರಿಯಾಗಿದೆ. ಈ ಬಗ್ಗೆ ವಿವರ ಪಡೆಯುತ್ತೇವೆ ಎಂದು ಆಂಗ್ಸಾನ್ ಸೂ ಕಿ ಅವರ ಕಾನೂನು ಸಲಹೆಗಾರರ ತಂಡ ಹೇಳಿದೆ. ಈ ಪ್ರಕರಣಗಳನ್ನು ದೇಶದ 2ನೇ ಬೃಹತ್ ನಗರ ಮಂಡಾಲೇಯಲ್ಲಿ ದಾಖಲಿಸಿರುವುದರಿಂದ, 76 ವರ್ಷದ ಸೂ ಕಿ, ಈಗ ದೇಶದ 4 ನಗರಗಳಲ್ಲಿ ಕಾನೂನು ಸಮರ ಎದುರಿಸಬೇಕಾಗಿದೆ. 

ಈ ಮಧ್ಯೆ, ಹಿಂಸಾಚಾರದಿಂದ ತತ್ತರಿಸಿರುವ ಮ್ಯಾನ್ಮಾರ್ನಲ್ಲಿ ಭಿನ್ನಾಭಿಪ್ರಾಯ ಪರಿಹಾರಕ್ಕೆ ಮಾತುಕತೆ ನಡೆಸುವಂತೆ ವಿಶ್ವಸಂಸ್ಥೆ ಕರೆ ನೀಡಿದೆ. ಫೆಬ್ರವರಿ 1ರಂದು ಸೇನೆ ನಡೆಸಿದ ಕ್ಷಿಪ್ರ ಕ್ರಾಂತಿಯಿಂದ ಅಧಿಕಾರ ಕಳೆದುಕೊಂಡಿರುವ ಸೂ ಕಿ, ಅಂದಿನಿಂದ ಬಂಧನಲ್ಲಿದ್ದಾರೆ. ರಾಜಧಾನಿ ನೇಪಿಡಾವ್ಯ ನ್ಯಾಯಾಲಯದಲ್ಲಿ ಸೂ ಕಿ ವಿರುದ್ಧ ವಾಕಿಟಾಕಿ ರೇಡಿಯೋಗಳನ್ನು ಹೊಂದಿರುವುದು ಮತ್ತು ಕಾನೂನು ಬಾಹಿರವಾಗಿ ಆಮದು ಮಾಡಿಕೊಂಡಿರುವುದು, ಕೊರೋನ ಸೋಂಕಿನ ವಿರುದ್ಧದ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣ ದಾಖಲಾಗಿದೆ. 

ಯಾಂಗಾನ್ ನ್ಯಾಯಾಲಯದಲ್ಲಿ ಸರಕಾರದ ರಹಸ್ಯ ಉಲ್ಲಂಘಿಸಿದ ಪ್ರಕರಣ ಎದುರಿಸುತ್ತಿದ್ದು, ಇದರಲ್ಲಿ ಅಪರಾಧ ಸಾಬೀತಾದರೆ ಗರಿಷ್ಟ 14 ವರ್ಷದ ಜೈಲುಶಿಕ್ಷೆ ಎದುರಿಸಬೇಕಾಗುತ್ತದೆ. ಆದರೆ ನೋಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಸೂ ಕಿ ಈ ಎಲ್ಲಾ ಆರೋಪವನ್ನೂ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News