×
Ad

ನಗರಗಳಲ್ಲಿ ಸರಕಾರಿ ಸೈನಿಕರ ವಿರುದ್ಧ ಯುದ್ಧ ಮಾಡಲು ಬಯಸುವುದಿಲ್ಲ: ತಾಲಿಬಾನ್

Update: 2021-07-13 20:29 IST

ಕಾಬೂಲ್ (ಅಫ್ಘಾನಿಸ್ತಾನ), ಜು. 13: ಅಫ್ಘಾನಿಸ್ತಾನದ ನಗರಗಳ ಒಳಗೆ ಸರಕಾರಿ ಪಡೆಗಳ ವಿರುದ್ಧ ಯುದ್ಧ ಮಾಡಲು ತಾಲಿಬಾನ್ ಬಯಸುವುದಿಲ್ಲ ಎಂದು ಗುಂಪಿನ ಹಿರಿಯ ನಾಯಕ ಅಮೀರ್ ಖಾನ್ ಮುತ್ತಾಕಿ ಮಂಗಳವಾರ ಹೇಳಿದ್ದಾನೆ. ಅದೇ ವೇಳೆ, ಅಫ್ಘಾನಿಸ್ತಾನದಲ್ಲಿ ಸೇನೆಯ ಉಪಸ್ಥಿತಿಯನ್ನು ಮುಂದುವರಿಸದಂತೆ ಟರ್ಕಿಗೆ ಎಚ್ಚರಿಕೆ ನೀಡಿದ್ದಾನೆ.

ಇತ್ತೀಚಿನ ವಾರಗಳಲ್ಲಿ ಉತ್ತರ ಅಫ್ಘಾನಿಸ್ತಾನದ ಹೆಚ್ಚಿನ ಭಾಗಗಳನ್ನು ತಾಲಿಬಾನ್ ಆಕ್ರಮಿಸಿದೆ ಹಾಗೂ ಈ ವಲಯದ ಪ್ರಾಂತಗಳ ರಾಜಧಾನಿಗಳುಹಾಗೂ ಅದರ ಸುತ್ತಮುತ್ತಲಿನ ಅಲ್ಪಸ್ವಲ್ಪ ಪ್ರದೇಶಗಳ ಮೇಲೆ ಮಾತ್ರ ಸರಕಾರ ನಿಯಂತ್ರಣ ಹೊಂದಿದೆ. ಈ ಅಳಿದುಳಿದ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯ ಸೈನಿಕರನ್ನು ನಿಯೋಜಿಸಲಾಗಿದೆ.
ತಾಲಿಬಾನ್ಗೆ ಶರಣಾಗುವ ಸರಕಾರಿ ಸೈನಿಕರ ಮೇಲೆ ನಿಗಾ ಇಡುವ ತಾಲಿಬಾನ್ ಸಮಿತಿಯೊಂದರ ಮುಖ್ಯಸ್ಥನಾಗಿರುವ ಮುತ್ತಾಕಿ, ತಾಲಿಬಾನ್ ಗೆ ಬೆಂಬಲ ನೀಡುವಂತೆ ನರಗಳ ನಿವಾಸಿಗಳನ್ನು ಮಂಗಳವಾರ ಒತ್ತಾಯಿಸಿದ್ದಾನೆ.

‘‘ಈಗ ಯುದ್ಧವು ಪರ್ವತಗಳು ಮತ್ತು ಮರುಭೂಮಿಗಳಿಂದ ನಗರಗಳ ದ್ವಾರಗಳನ್ನು ತಲುಪಿದೆ. ನಗರಗಳ ಒಳಗೆ ಯುದ್ಧ ಮಾಡಲು ಮುಜಾಹಿದೀನ್ ಗಳು ಬಯಸುವುದಿಲ್ಲ’’ ಎಂಬ ಮುತ್ತಾಕಿಯ ಹೇಳಿಕೆಯನ್ನು ತಾಲಿಬಾನ್ ವಕ್ತಾರನೋರ್ವ ಟ್ವೀಟ್ ಮಾಡಿದ್ದಾನೆ.
‘‘ನಮ್ಮೊಂದಿಗೆ ಯಾವುದಾದರೂ ಒಂದು ವಿಧಾನದ ಮೂಲಕ ಸಂಪರ್ಕ ಸಾಧಿಸುವುದು ಉತ್ತಮ. ಇದರಿಂದ ನಿಮ್ಮ ನಗರಗಳಿಗೆ ಹಾನಿಯಾಗುವುದು ತಪ್ಪುತ್ತದೆ’’ ಎಂದು ಅವನು ಹೇಳಿದ್ದಾನೆ.

ಅಮೆರಿಕದ ಪಡೆಗಳು ವಾಪಸಾದ ಬಳಿಕ ಕಾಬೂಲ್ ವಿಮಾನ ನಿಲ್ದಾಣಕ್ಕೆ ಭದ್ರತೆ ನೀಡಲು ಟರ್ಕಿ ತೆಗೆದುಕೊಂಡಿರುವ ನಿರ್ಧಾರ ಖಂಡನೀಯ ಎಂದು ಮಂಗಳವಾರ ನೀಡಿದ ಇನ್ನೊಂದು ಪ್ರತ್ಯೇಕ ಹೇಳಿಕೆಯಲ್ಲಿ ತಾಲಿಬಾನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News