ದಕ್ಷಿಣ ಆಫ್ರಿಕಾದಲ್ಲಿ ಮುಂದುವರಿದ ಹಿಂಸಾಚಾರ, ಲೂಟಿ: 70ಕ್ಕೂ ಅಧಿಕ ಜನರ ಮೃತ್ಯು, ಆಹಾರ ಕೊರತೆಯ ಭೀತಿ

Update: 2021-07-14 15:37 GMT
photo : twitter/@aip_agencepress

  ಕೇಪ್ಟೌನ್, ಜು.14 : ದಕ್ಷಿಣ ಆಫ್ರಿಕಾದಲ್ಲಿ ಮಾಜಿ ಅಧ್ಯಕ್ಷ ಜಾಕೊಬ್ ಜುಮಾಗೆ ಜೈಲುಶಿಕ್ಷೆ ವಿಧಿಸಿದ ಬಳಿಕ ಆರಂಭವಾಗಿರುವ ಹಿಂಸಾಚಾರ ಮತ್ತು ಲೂಟಿ ಸತತ 6ನೇ ದಿನವೂ ಮುಂದುವರಿದಿದ್ದು 70ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. 

ವರ್ಣಭೇದ ನೀತಿ ಕೊನೆಗೊಂಡ 27 ವರ್ಷದ ಬಳಿಕವೂ ದೇಶದಲ್ಲಿ ಅಸಮಾನತೆ ಮುಂದುವರಿದಿದೆ ಎಂಬ ಆಕ್ರೋಶ, ಮಾಜಿ ಅಧ್ಯಕ್ಷರಿಗೆ ಜೈಲುಶಿಕ್ಷೆ ವಿಧಿಸಿರುವುದಕ್ಕೆ ಪ್ರತಿಭಟನೆಯ ರೂಪದಲ್ಲಿ ಹೊರಹೊಮ್ಮಿದೆ ಎಂದು ವಿಶ್ಲೇಷಿಸಲಾಗಿದೆ. ಗೌತೆಂಗ್ ಮತ್ತು ಕ್ವಝುಲು-ನತಲ್ ಪ್ರಾಂತ್ಯಗಳಲ್ಲಿ ಅತೀ ಹೆಚ್ಚಿನ ಸಾವು ಸಂಭವಿಸಿದೆ. ಸಾವಿರಾರು ಜನ ಅಂಗಡಿಗಳಿಗೆ ನುಗ್ಗಿ, ಆಹಾರ ಸಾಮಾಗ್ರಿ, ಇಲೆಕ್ಟ್ರಾನಿಕ್ಸ್ ವಸ್ತುಗಳು, ಮದ್ಯ, ಬಟ್ಟೆಗಳನ್ನು ಲೂಟಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
  
ಪ್ರತಿಭಟನಾಕಾರರು ಸಮುದಾಯ ರೇಡಿಯೋ ಕೇಂದ್ರವನ್ನು ಧ್ವಂಸಗೊಳಿಸಿದ್ದು ಕೆಲವು ಕೊರೋನ ಲಸಿಕಾ ಕೇಂದ್ರಗಳನ್ನು ಮುಚ್ಚಲಾಗಿದೆ. ಪ್ರತಿಭಟನೆಯಲ್ಲಿ ತೊಡಗಿದ್ದ 1,200ಕ್ಕೂ ಅಧಿಕ ಜನರನ್ನು ಬಂಧಿಸಿದ್ದು ದೇಶದಲ್ಲಿ ಆಹಾರ ವಸ್ತು ಹಾಗೂ ತೈಲದ ತೀವ್ರ ಕೊರತೆ ಎದುರಾಗುವ ಭೀತಿಯಿದೆ . ಕಾನೂನು ಸುವ್ಯವಸ್ಥೆಗೆ ಪೊಲೀಸರಿಗೆ ನೆರವಾಗಲು 2,500 ಯೋಧರನ್ನು ನಿಯೋಜಿಸಿದ್ದರೂ ಇದುವರೆಗೆ ಲೂಟಿ ಮತ್ತು ದೊಂಬಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿಲ್ಲ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News