ಇಸ್ರೇಲ್ ನಲ್ಲಿ ಯುಎಇ ರಾಯಭಾರ ಕಚೇರಿ ಆರಂಭ

Update: 2021-07-14 15:40 GMT
photo : twitter/@UAEinIsrael

  ಜೆರುಸಲೇಂ, ಜು.14: ಉಭಯ ದೇಶಗಳ ನಡುವೆ ಅಧಿಕೃತ ರಾಜತಾಂತ್ರಿಕ ಸಂಬಂಧ ಸ್ಥಾಪಿಸುವುದಾಗಿ ಘೋಷಿಸಿದ 1 ವರ್ಷದೊಳಗೆ ಯುಎಇ ತನ್ನ ರಾಯಭಾರ ಕಚೇರಿಯನ್ನು ಇಸ್ರೇಲ್ನಲ್ಲಿ ಆರಂಭಿಸಿದೆ ಎಂದು ವರದಿಯಾಗಿದೆ. ಇಸ್ರೇಲ್ ಗೆ ಮಾನ್ಯತೆ ನೀಡಿರುವ ಮೂರನೇ ಪ್ರಮುಖ ಅರಬ್ ದೇಶವಾಗಿರುವ ಯುಎಇ ರಾಯಭಾರ ಕಚೇರಿ ಟೆಲ್ಅವೀವ್ನ ಸ್ಟಾಕ್ ಎಕ್ಸ್ಚೇಂಜ್ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. 

ಕಳೆದ ತಿಂಗಳು ಯುಎಇಯಲ್ಲಿ ಇಸ್ರೇಲ್ ರಾಯಭಾರ ಕಚೇರಿ ಆರಂಭವಾಗಿತ್ತು. ಇಸ್ರೇಲ್ ಅಧ್ಯಕ್ಷ ಇಸಾಕ್ ಹೆರ್ಝಾಗ್, ಯುಇಎ ರಾಯಭಾರಿ ಮುಹಮ್ಮದ್ ಅಲ್ ಖಾಜ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಉಭಯ ದೇಶಗಳ ನಡುವೆ ಅಭಿವೃದ್ಧಿಗೊಳ್ಳುತ್ತಿರುವ ಸಂಬಂಧಗಳಲ್ಲಿ ಪ್ರಮುಖ ಮೈಲುಗಲ್ಲು ಇದಾಗಿದೆ. ಯುಎಇ ಮತ್ತು ಇಸ್ರೇಲ್ ಪ್ರಗತಿಶೀಲ ದೇಶಗಳಾಗಿದ್ದು ಈ ಸೃಜನಶೀಲತೆಯನ್ನು ಉಭಯ ದೇಶಗಳ ಹಾಗೂ ಪ್ರದೇಶದ ಸುಸ್ಥಿರ ಭವಿಷ್ಯ ಮತ್ತು ಸಮೃದ್ಧಿಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಪೂರಕವಾಗಿ ಬಳಸಲಾಗುವುದು ಎಂದು ಮುಹಮ್ಮದ್ ಅಲ್ ಖಾಜ ಪ್ರತಿಕ್ರಿಯಿಸಿದ್ದಾರೆ.
   
ಯುಎಇಯೊಂದಿಗಿನ ಐತಿಹಾಸಿಕ ಒಪ್ಪಂದವನ್ನು ಇಸ್ರೇಲ್ನೊಂದಿಗೆ ಶಾಂತಿ ಬಯಸುವ ಇತರ ದೇಶಗಳಿಗೂ ವಿಸ್ತರಿಸಲಾಗುವುದು ಎಂದು ಇಸ್ರೇಲ್ ಅಧ್ಯಕ್ಷ ಹೆರ್ಝಾಗ್ ಹೇಳಿದ್ದಾರೆ. ಕಳೆದ ವರ್ಷ, ಅಮೆರಿಕಾದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ರೂಪಿಸಿದ ಅಬ್ರಹಾಂ ಒಪ್ಪಂದದ ಬಳಿಕ ಯುಎಇ -ಇಸ್ರೇಲ್ ನಡುವಿನ ಸಂಬಂಧ ಸಹಜಸ್ಥಿತಿಗೆ ಮರಳಿತ್ತು. ಬಳಿಕ ಬಹರೈನ್, ಮೊರೊಕ್ಕೊ ಮತ್ತು ಸುಡಾನ್ ಜತೆಗಿನ ಸಂಬಂಧ ಸುಧಾರಣೆಗೂ ಇಸ್ರೇಲ್ ಕ್ರಮ ಕೈಗೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News