ಅಕ್ರಮ ಹಣ ಸಂಪಾದನೆ, ನಕಲಿ ದಾಖಲೆ ಸೃಷ್ಟಿ ಆರೋಪ: ಬೋಸ್ನಿಯಾದ ಗುಪ್ತಚರ ಮುಖ್ಯಸ್ಥರ ಬಂಧನ
ಸರಜೆವೊ, ಜು.14: ಅಕ್ರಮ ಹಣ ಸಂಪಾದನೆ ಮತ್ತು ನಕಲಿ ದಾಖಲೆ ಸೃಷ್ಟಿಸಲು ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಆರೋಪದಲ್ಲಿ ಬೋಸ್ನಿಯಾದ ಗುಪ್ತಚರ ವಿಭಾಗದ ಮುಖ್ಯಸ್ಥರನ್ನು ಬಂಧಿಸಿರುವುದಾಗಿ ಅಲ್ಲಿನ ಪೊಲೀಸರು ಹೇಳಿದ್ದಾರೆ.
ನ್ಯಾಯಾಲಯದ ಅಭಿಯೋಜಕರ ಕೋರಿಕೆಯಂತೆ ಗುಪ್ತಚರ ಭದ್ರತಾ ಏಜೆನ್ಸಿ(ಒಎಸ್ಎ)ಯ ಮುಖ್ಯಸ್ಥ ಒಸ್ಮಾನ್ ಮೆಹ್ಮೆಡಜಿಕ್ರನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ವಕ್ತಾರರು ಹೇಳಿದ್ದಾರೆ. ಅಕ್ರಮ ಹಣ ಸಂಪಾದಿಸಲು ನಕಲಿ ದಾಖಲೆ ಸೃಷ್ಟಿಸುವ ಮೂಲಕ ಅಧಿಕಾರ ದುರುಪಯೋಗ ಪಡಿಸಿದ ಆರೋಪ ಒಸ್ಮಾನ್ ಮೇಲಿದೆ ಎಂದು ಅಭಿಯೋಜಕರ ಕಚೇರಿಯ ಹೇಳಿಕೆ ತಿಳಿಸಿದೆ.
ಶಿಕ್ಷಣ, ಆರೋಗ್ಯ, ನ್ಯಾಯಾಂಗ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿರುವ ಬೋಸ್ನಿಯಾ ಮತ್ತು ಹರ್ಝೆಗೊವಿನಾದಲ್ಲಿ ಕಾನೂನು ಪ್ರಕ್ರಿಯೆ ಸುದೀರ್ಘವಾಗಿರುತ್ತದೆ. ಒಸ್ಮಾನ್ ಮೆಹ್ಮೆಡಜಿಕ್ ಗೆ ಕಾನೂನುಬಾಹಿರವಾಗಿ ಡಿಪ್ಲೊಮಾ ಪದವಿ ನೀಡಿದ ಪ್ರಕರಣದಲ್ಲಿ ಕಳೆದ ತಿಂಗಳು ಸರಜೆವೊದ ಅಮೆರಿಕನ್ ವಿವಿಯ ನಿರ್ದೇಶಕರು ಹಾಗೂ ಇಬ್ಬರು ಸಹಾಯಕ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಅಕ್ಟೋಬರ್ನಲ್ಲಿ ಮೆಹ್ಮೆಡಜಿಕ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ತನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದ ವ್ಯಕ್ತಿಯ ಮೇಲೆ ಬೇಹುಗಾರಿಕೆ ನಡೆಸಲು ಗುಪ್ತಚರ ಸಮಿತಿಯ ಹಣ ದುರ್ಬಳಕೆ ಮಾಡಿರುವ ಆರೋಪ ಇದಾಗಿದ್ದು, ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.