ಸಂಸತ್ ವರದಿಗಾರಿಕೆಗೆ ಮಾನ್ಯತೆ ಪಡೆದ ಪತ್ರಕರ್ತರಿಗೆ ಸಾಮಾನ್ಯ ಪ್ರವೇಶ ನಿರಾಕರಣೆ ವಿರುದ್ಧ ಪ್ರತಿಭಟನೆ

Update: 2021-07-14 17:32 GMT

ಹೊಸದಿಲ್ಲಿ,ಜು.14: ಪ್ರೆಸ್ ಕ್ಲಬ್ ಆಫ್ ಇಂಡಿಯಾದ ನೇತೃತ್ವದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರವೊಂದನ್ನು ಬರೆದಿರುವ ಹಲವಾರು ಪ್ರತಿಷ್ಠಿತ ಮಾಧ್ಯಮ ಸಂಘಟನೆಗಳು,ಸಂಸತ್ ಕಲಾಪಗಳ ವರದಿಗಾರಿಕೆಗಾಗಿ ಮಾನ್ಯತೆ ಪಡೆದ ಪತ್ರಕರ್ತರಿಗೆ ಸಾಮಾನ್ಯ ಪ್ರವೇಶವನ್ನು ನಿರಾಕರಿಸಿರುವುದರ ವಿರುದ್ಧ ಪ್ರತಿಭಟನೆಯನ್ನು ವ್ಯಕ್ತಪಡಿಸಿವೆ. ಇದು ಸಂಸತ್ತು ಮತ್ತು ಸಂಸದರನ್ನು ಮಾಧ್ಯಮಗಳ ಪರಿಶೀಲನೆಯಿಂದ ಹೊರಗಿಡುವ ಮಾದರಿಯಾಗಿರುವಂತಿದೆ ಎಂದು ಅವರು ಹೇಳಿದ್ದಾರೆ.

  
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ,ಪ್ರೆಸ್ ಅಸೋಸಿಯೇಷನ್ ಸೇರಿದಂತೆ ವಿವಿಧ ಮಾಧ್ಯಮ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಹಾಲಿ ಮತ್ತು ಮಾಜಿ ಪದಾಧಿಕಾರಿಗಳು ಆಯ್ದ ಪತ್ರಕರ್ತರಿಗೆ ಸಂಸತ್ ಪ್ರವೇಶಕ್ಕೆ ಅವಕಾಶ ನೀಡುತ್ತಿರುವ ಬಗ್ಗೆಯೂ ಪತ್ರದಲ್ಲಿ ಬರೆದಿದ್ದಾರೆ. ಇದು ಸಂಸತ್ ಮತ್ತು ಅದರ ಆವರಣಗಳಿಗೆ ಪ್ರವೇಶಾವಕಾಶವನ್ನು ಕೆಲವೇ ಪತ್ರಕರ್ತರಿಗೆ ಸೀಮಿತಗೊಳಿಸುವ ಪ್ರಯತ್ನವಾಗಿರುವಂತಿದೆ ಎದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
 
ಸರ್ವೋಚ್ಚ ನ್ಯಾಯಾಲಯದ ವಕೀಲ ಸಂಜಯ ಹೆಗ್ಡೆ ಅವರೂ ಅಂಕಿತ ಹಾಕಿರುವ ಪತ್ರವು,ಲೋಕಸಭಾ ಕಲಾಪಗಳನ್ನು ವರದಿ ಮಾಡುವಲ್ಲಿ ಮಾಧ್ಯಮ ಪ್ರತಿನಿಧಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನೂ ಸ್ಪೀಕರ್ ಗಮನಕ್ಕೆ ತಂದಿದೆ.

ಮುಕ್ತ ಮತ್ತು ಸ್ವತಂತ್ರ ಮಾಧ್ಯಮ ಕ್ಷೇತ್ರವು ದೇಶದ ಪ್ರಜೆಗಳಿಗೆ ಅಗತ್ಯ ಮಾಹಿತಿಗಳನ್ನು ಒದಗಿಸುತ್ತದೆ. ಮಾಧ್ಯಮ ಪ್ರತಿನಿಧಿಗಳಿಗೆ ಸಂಸತ್ತಿಗೆ ಸಾಮಾನ್ಯ ಪ್ರವೇಶವನ್ನು ನಿರಾಕರಿಸಿದರೆ ತಮ್ಮ ಓದುಗರಿಗೆ ಮಾಹಿತಿಗಳನ್ನು ಒದಗಿಸುವ ಕರ್ತವ್ಯವನ್ನು ನಿರ್ವಹಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿರುವ ಪತ್ರವು,ಭಾರತದ ಸಂಸತ್ತು ದೇಶದಲ್ಲಿಯ ರಾಜಕೀಯ ಚಟುಟಿಕೆಗಳ ಕೇಂದ್ರ ಬಿಂದುವಾಗಿರುವುದರಿಂದ ಪತ್ರಕರ್ತರಿಗೆ ಪ್ರೆಸ್ ಗ್ಯಾಲರಿ ಮತ್ತು ಸೆಂಟ್ರಲ್ ಹಾಲ್ ಗೆ ಪ್ರವೇಶಾವಕಾಶವನ್ನು ನೀಡಬೇಕು. ಇದು ಆರಂಭದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ ಎಂದು ಸ್ಪೀಕರ್ ಗಮನಕ್ಕೆ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News