ಕನ್ವರ್ ಯಾತ್ರೆಯನ್ನು ಮರುಪರಿಶೀಲಿಸಿ: ಉತ್ತರಪ್ರದೇಶ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ
ಹೊಸದಿಲ್ಲಿ,ಜು.16: ಆರೋಗ್ಯ ಮತ್ತು ಜೀವಿಸುವ ಹಕ್ಕು ಪರಮೋಚ್ಚವಾಗಿದೆ ಎಂದು ಶುಕ್ರವಾರ ಹೇಳಿದ ಸರ್ವೋಚ್ಚ ನ್ಯಾಯಾಲಯವು, ಕೋವಿಡ್ ಕಳವಳದ ನಡುವೆ ಈ ವರ್ಷದ ಕನ್ವರ್ ಯಾತ್ರೆಗೆ ಅನುಮತಿಯನ್ನು ನೀಡಿರುವ ತನ್ನ ನಿರ್ಧಾರವನ್ನು ಮರುಪರಿಶೀಲಿಸಲು ಉತ್ತರ ಪ್ರದೇಶ ಸರಕಾರಕ್ಕೆ ಸೋಮವಾರದವರೆಗೆ ಕಾಲಾವಕಾಶವನ್ನು ನೀಡಿತು.
‘ನಾವೆಲ್ಲ ಭಾರತದ ಪ್ರಜೆಗಳಾಗಿದ್ದೇವೆ. ಜೀವಿಸುವ ಹಕ್ಕನ್ನು ಖಾತರಿಪಡಿಸಿರುವ ಸಂವಿಧಾನ 21ನೇ ವಿಧಿಯು ನಮಗೆಲ್ಲರಿಗೂ ಅನ್ವಯವಾಗುತ್ತದೆ. ಉ.ಪ್ರದೇಶವು ನೂರಕ್ಕೆ ನೂರು ಭೌತಿಕ ಯಾತ್ರೆಯನ್ನು ನಡೆಸುವಂತಿಲ್ಲ ’ ಎಂದು ನ್ಯಾ.ಆರ್.ಎಫ್.ನಾರಿಮನ್ ಹೇಳಿದರು.
ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಗೊಳಿಸಿದ ನ್ಯಾಯಾಲಯವು,ತನ್ನ ನಿರ್ಧಾರವನ್ನು ಮರುಪರಿಶೀಲಿಸಲು ರಾಜ್ಯಕ್ಕೆ ಇನ್ನೊಂದು ಅವಕಾಶವನ್ನು ನೀಡುತ್ತಿದ್ದೇವೆ. ಅದಾಗದಿದ್ದರೆ ನಾವೇ ಆದೇಶ ಹೊರಡಿಸುತ್ತೇವೆ ಎಂದು ಸ್ಪಷ್ಟಪಡಿಸಿತು.
‘ಈ ವಿಷಯವು ನಮ್ಮೆಲ್ಲರಿಗೂ ಸಂಬಂಧಿಸಿದೆ ಮತ್ತು ಜೀವಿಸುವ ಮೂಲಭೂತ ಹಕ್ಕಿನ ಜೀವಾಳವಾಗಿದೆ ಎನ್ನುವುದು ನಮ್ಮ ಮೇಲ್ನೋಟದ ಅಭಿಪ್ರಾಯವಾಗಿದೆ. ಭಾರತೀಯ ಪ್ರಜೆಗಳ ಆರೋಗ್ಯ ಮತ್ತು ಜೀವಿಸುವ ಹಕ್ಕು ಪರಮೋಚ್ಚವಾಗಿದೆ,ಇತರ ಎಲ್ಲ ಭಾವನೆಗಳು,ಅವು ಧಾರ್ಮಿಕ ಅಥವಾ ಇತರ ಆಗಿರಲಿ,ಈ ಮೂಲಭೂತ ಹಕ್ಕಿನ ಅಧೀನದಲ್ಲಿವೆ ’ಎಂದು ನ್ಯಾಯಮೂರ್ತಿಗಳಾದ ನಾರಿಮನ್ ಮತ್ತು ಬಿ.ಆರ್.ಗವಾಯಿ ಅವರ ಪೀಠವು ಹೇಳಿತು.
ಕನ್ವರ್ ಯಾತ್ರೆಯ ವಿಷಯವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಸರ್ವೋಚ್ಚ ನ್ಯಾಯಾಲಯವು ಯಾತ್ರೆಯ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ಉ.ಪ್ರದೇಶಕ್ಕೆ ಸೂಚಿಸಿತ್ತು. ಉತ್ತರಾಖಂಡವು ಈಗಾಗಲೇ ಯಾತ್ರೆಯನ್ನು ರದ್ದುಗೊಳಿಸಿದೆ. ಸರಕಾರವು ಸಾಂಕೇತಿಕ ಯಾತ್ರೆಗೆ ಅವಕಾಶ ನೀಡುತ್ತದೆ ಮತ್ತು ಕೋವಿಡ್ ಲಸಿಕೆಯ ಸಂಪೂರ್ಣ ಡೋಸ್ಗಳನ್ನು ತೆಗೆದುಕೊಂಡವರು ಮಾತ್ರ ಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ನಿಗದಿತ ಸ್ಥಳಗಳಲ್ಲಿ ಟ್ಯಾಂಕರ್ಗಳಲ್ಲಿ ಗಂಗಾಜಲವನ್ನು ಇರಿಸಲಾಗುವುದು ಎಂಬ ಉ.ಪ್ರದೇಶದ ಪರ ವಕೀಲ ಸಿ.ಎಸ್.ವೈದ್ಯನಾಥನ್ ಹೇಳಿದರಾದರೂ ನ್ಯಾಯಾಲಯವು ಅದಕ್ಕೆ ಒಲವು ವ್ಯಕ್ತಪಡಿಸಲಿಲ್ಲ.
ಕನ್ವರ್ ಯಾತ್ರೆಯನ್ನು ವಿರೋಧಿಸಲಿಲ್ಲವಾದರೂ ಧಾರ್ಮಿಕ ಭಾವನೆಗಳ ಕುರಿತು ಮಾತನಾಡಿದ ಕೇಂದ್ರವು,ಇದು ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿದೆ ಮತ್ತು ಧಾರ್ಮಿಕ ಭಾವನೆಗಳನ್ನು ಪರಿಗಣಿಸಿ ರಾಜ್ಯಗಳು ಟ್ಯಾಂಕರ್ಗಳ ಮೂಲಕ ಪವಿತ್ರ ಗಂಗಾಜಲ ಲಭ್ಯವಾಗುವ ವ್ಯವಸ್ಥೆಯನ್ನು ರೂಪಿಸಬೇಕು. ಸುರಕ್ಷಿತ ಅಂತರ ಮತ್ತು ಇತರ ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಭಕ್ತರಿಗೆ ಗಂಗಾಜಲ ವಿತರಣೆಯಾಗುವಂತೆ ರಾಜ್ಯಗಳು ನೋಡಿಕೊಳ್ಳಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿತು.
ಕೋವಿಡ್ ಮೊದಲ ಅಲೆಯಿಂದಾಗಿ ಕಳೆದ ವರ್ಷವೂ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು.
ತಮ್ಮ ಪ್ರದೇಶಗಳಲ್ಲಿಯ ಶಿವಮಂದಿರಗಳಲ್ಲಿ ಅಭಿಷೇಕಕ್ಕಾಗಿ ಗಂಗಾನದಿಯ ನೀರನ್ನು ಸಂಗ್ರಹಿಸಲು ಪ್ರತಿವರ್ಷವೂ ಉ.ಪ್ರದೇಶ, ಹರ್ಯಾಣ,ಪಂಜಾಬ,ದಿಲ್ಲಿ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಸುಮಾರು ಮೂರು ಕೋಟಿ ಕನ್ವರಿಯಾಗಳು (ಶಿವಭಕ್ತರು) ಕಾಲ್ನಡಿಗೆ ಅಥವಾ ಇತರ ವಿಧಾನಗಳ ಮೂಲಕ ಉತ್ತರಾಖಂಡದ ಹರಿದ್ವಾರಕ್ಕೆ ಯಾತ್ರೆಯನ್ನು ಕೈಗೊಳ್ಳುತ್ತಾರೆ.
ಶ್ರಾವಣ ತಿಂಗಳು ಆರಂಭಗೊಳ್ಳುವುದರೊಂದಿಗೆ ಜುಲೈ 25ರ ಸುಮಾರಿಗೆ ಶುರುವಾಗುವ ಯಾತ್ರೆಯು ಆಗಸ್ಟ್ ಮೊದಲ ವಾರದವರೆಗೂ ನಡೆಯುತ್ತದೆ.