ಮಹಾರಾಷ್ಟ್ರದ ಮಾಜಿ ಗೃಹ ಸಚಿವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ: 4 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಈಡಿ

Update: 2021-07-16 11:39 GMT

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಹಾಗೂ ಇತರರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಅಥವಾ ಈಡಿ ಸುಮಾರು  4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತಾತ್ಕಾಲಿಕ ಜಪ್ತಿ  ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದರು.

72 ವರ್ಷದ ಅನಿಲ್ ದೇಶ್ ಮುಖ್ ಅವರು ಕನಿಷ್ಠ ಮೂರು ಜಾರಿ ನಿರ್ದೇಶನಾಲಯ (ಈಡಿ) ಸಮನ್ಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ.

ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ 100 ಕೋಟಿ ರೂ. ಲಂಚ-ಕಮ್-ಸುಲಿಗೆ ದಂಧೆಗೆ ಸಂಬಂಧಿಸಿದಂತೆ ಪಿಎಂಎಲ್‌ಎ ಅಡಿಯಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸಮನ್ಸ್ ಜಾರಿಗೊಳಿಸಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿ ಈ ವರ್ಷದ ಎಪ್ರಿಲ್‌ನಲ್ಲಿ ಅನಿಲ್ ದೇಶ್ ಮುಖ್ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News