ಆರೆಸ್ಸೆಸ್ ಗೆ ಸೇರಿಕೊಳ್ಳಿ, ನಮಗೆ ನಿಮ್ಮ ಅಗತ್ಯವಿಲ್ಲ: ಭಿನ್ನಮತೀಯರಿಗೆ ರಾಹುಲ್ ಗಾಂಧಿ ಖಡಕ್ ಸಂದೇಶ
ಹೊಸದಿಲ್ಲಿ: ಕಾಂಗ್ರೆಸ್ ಗೆ ನಿರ್ಭೀತ ನಾಯಕರು ಬೇಕು ಹಾಗೂ ಪಕ್ಷದಲ್ಲಿ ಹೆದರಿಕೊಂಡು ಕುಳಿತ್ತಿರುವವರನ್ನು ಹೊರಗೆ ಹಾಕಬೇಕು ಎಂದು ಪಕ್ಷದ ಸಾಮಾಜಿಕ ಮಾಧ್ಯಮ ತಂಡದೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಪಕ್ಷಾಂತರಿಗಳಿಗೆ ಹಾಗೂ ಭಿನ್ನಮತೀಯರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
"ಹೆದರದ ಅನೇಕ ಜನರಿದ್ದಾರೆ ಹಾಗೂ ಅವರು ಕಾಂಗ್ರೆಸ್ ನಿಂದ ಹೊರಗೆ ಇದ್ದಾರೆ. ನಾವು ಅವರನ್ನು ಒಳಗೆ ಕರೆತರಬೇಕು" ಎಂದು ಕಾಂಗ್ರೆಸ್ ಸಂಸದ ಹೇಳಿದ್ದಾರೆ.
" ನಮ್ಮ ಪಕ್ಷದಲ್ಲಿ ಭಯಗ್ರಸ್ತರಿದ್ದಾರೆ. ಅವರನ್ನು ಹೊರಗೆ ಹಾಕಿರಿ. ದಯವಿಟ್ಟು ಪಕ್ಷ ಬಿಡಿ, ಆರ್ ಎಸ್ ಎಸ್ ನತ್ತ ಹೋಗಿ, ನೀವು ನಮಗೆ ಬೇಡ. ಪಕ್ಷಕ್ಕೆ ನಿಮ್ಮ ಅಗತ್ಯವಿಲ್ಲ. ನಮಗೆ ನಿರ್ಭೀತ ಜನರು ಬೇಕು. ಅದು ನಮ್ಮ ಸಿದ್ಧಾಂತ. ಅದು ನನ್ನ ಮೂಲ ಸಂದೇಶ" ಎಂದು ಹೇಳಿದರು.
ಈಗ ಬಿಜೆಪಿಯಲ್ಲಿರುವ ತನ್ನ ಮಾಜಿ ಆಪ್ತ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಜಿತಿನ್ ಪ್ರಸಾದ ಅವರನ್ನು ಗುರಿಯಾಗಿಸಿಕೊಂಡು ರಾಹುಲ್ ಈ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಅವರ ಸಂದೇಶವು ಕಾಂಗ್ರೆಸ್ ನ ಇತರ ಭಿನ್ನಮತೀಯರನ್ನು ಉದ್ದೇಶಿಸಿ ಹೇಳಿದಂತೆ ಕಂಡು ಬಂತು. ಭಿನ್ನಮತೀಯರಲ್ಲಿ ಹಲವರು ಜಿ -23 ಅಥವಾ 23 ರ ಗುಂಪಿನ ಭಾಗವಾಗಿದ್ದಾರೆ. ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಈ ಹಿಂದೆ ಪತ್ರ ಬರೆದಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಸತತ ಸೋಲು ಕಂಡ ನಂತರ ನಾಯಕತ್ವದ ಬಗ್ಗೆ ಈ ನಾಯಕರು ದೂರು ನೀಡಿದ್ದರು. ಪೂರ್ಣಾವಧಿ ನಾಯಕತ್ವ ಹಾಗೂ ಸಾಮೂಹಿಕ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ್ದರು.