ಮ್ಯಾನ್ಮಾರ್: 75 ಮಕ್ಕಳ ಹತ್ಯೆ, 1000 ಮಕ್ಕಳು ಸೆರೆಯಲ್ಲಿ; ವಿಶ್ವಸಂಸ್ಥೆ ಮಕ್ಕಳ ಹಕ್ಕು ಸಮಿತಿ ವರದಿ

Update: 2021-07-16 15:15 GMT

ಯಾಂಗಾನ್, (ರಂಗೂನ್), ಜು.16: ಮ್ಯಾನ್ಮಾರ್ನಲ್ಲಿ ಫೆಬ್ರವರಿ 1ರಿಂದ 75 ಮಕ್ಕಳನ್ನು ಹತ್ಯೆ ಮಾಡಲಾಗಿದ್ದು ಸುಮಾರು 1000 ಮಕ್ಕಳನ್ನು ಸೆರೆಯಲ್ಲಿಟ್ಟಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಲಭ್ಯವಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಹಕ್ಕು ಸಮಿತಿ ಹೇಳಿದೆ. 

ಮ್ಯಾನ್ಮಾರ್ನಲ್ಲಿ ಸೇನಾಕ್ರಾಂತಿಯ ಬಳಿಕ ಅಲ್ಲಿನ ಮಕ್ಕಳ ಜೀವಕ್ಕೆ ಅಪಾಯವಿದೆ ಎಂದು ಸಮಿತಿಯ ಅಧ್ಯಕ್ಷ ಮಿಕಿಕೊ ಒಟಾನಿ ಹೇಳಿದ್ದಾರೆ. ಆಂಗ್ ಸಾನ್ ಸೂ ಕಿ ಅವರ ಆಡಳಿತವನ್ನು ಕ್ಷಿಪ್ರ ಕ್ರಾಂತಿಯ ಮೂಲಕ ಸೇನೆ ಬುಡಮೇಲುಗೊಳಿಸಿದ ಬಳಿಕ ಆ ದೇಶದಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆಯನ್ನು ಹತ್ತಿಕ್ಕಲು ಸೇನೆ ನಿರ್ದಯ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಸಮಿತಿ ಹೇಳಿದೆ.
  
ಮಕ್ಕಳು ಸ್ವಚ್ಛಂದ ಹಿಂಸಾಚಾರಕ್ಕೆ ಗುರಿಯಾಗಿದ್ದಾರೆ. ಕುಟುಂಬ ಸದಸ್ಯರ ಸಹಿತ ಮಕ್ಕಳನ್ನು ಬಂದೂಕು ತೋರಿಸಿ ಬೆದರಿಸಲಾಗುತ್ತಿದೆ. ಮನಬಂದಂತೆ ಗುಂಡು ಹಾರಿಸುವುದು, ಸ್ವೇಚ್ಛಾಚಾರದ ಬಂಧನ ಪ್ರಕ್ರಿಯೆ ನಿರಂತರ ವಿದ್ಯಮಾನವಾಗಿದೆ. ಕೆಲವು ಸಂತ್ರಸ್ತರನ್ನು ಮನೆಗೆ ನುಗ್ಗಿ ಹತ್ಯೆ ಮಾಡಲಾಗಿದೆ. ಮಂಡಾಲೇ ನಗರದಲ್ಲಿ 6 ವರ್ಷದ ಬಾಲಕಿಯ ಹೊಟ್ಟೆಗೆ ಗುಂಡು ಹೊಡೆದು ಹತ್ಯೆ ಮಾಡಲಾಗಿದೆ. 

ಪ್ರತಿಭಟನೆ ನಡೆಸಿದ ಆರೋಪದಲ್ಲಿ ಹೆತ್ತವರನ್ನು ಬಂಧಿಸಲು ಸಾಧ್ಯವಾಗದಿದ್ದರೆ ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿ ಆ ಮೂಲಕ ಹೆತ್ತವರು ಶರಣಾಗುವಂತೆ ಒತ್ತಡ ಹೇರಲಾಗುತ್ತಿದೆ. ಮಕ್ಕಳನ್ನು ಪೊಲೀಸ್ ಠಾಣೆ, ಜೈಲು ಹಾಗೂ ಬಂಧನಕೇಂದ್ರದಲ್ಲಿ ಇರಿಸಲಾಗಿದ್ದು ಸೇನೆ ಮತ್ತು ಪೊಲೀಸರಿಂದ ಮಕ್ಕಳ ಹತ್ಯೆ ಖಂಡನೀಯ ಎಂದು ಸಮಿತಿ ಹೇಳಿದೆ.

ದೇಶದಲ್ಲಿ ಅಗತ್ಯದ ವೈದ್ಯಕೀಯ ಸಾಮಾಗ್ರಿಯ ಕೊರತೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿರುವ ಬಗ್ಗೆಯೂ ಸಮಿತಿ ಆತಂಕ ವ್ಯಕ್ತಪಡಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಆಹಾರ ಮತ್ತು ನೀರಿನ ಕೊರತೆಯಿದೆ. ಭದ್ರತಾ ಪಡೆಗಳು ಆಸ್ಪತ್ರೆ, ಶಾಲೆ, ಧಾರ್ಮಿಕ ಸಂಸ್ಥೆಗಳನ್ನು ಆಕ್ರಮಿಸಿಕೊಂಡಿವೆ. ಈ ಬಿಕ್ಕಟ್ಟು ಇದೇ ರೀತಿ ಮುಂದುವರಿದರೆ ಮಕ್ಕಳ ಪೀಳಿಗೆಗೇ ಅಪಾಯವಿದೆ. ದೈಹಿಕ,ಮಾನಸಿಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆ ಎದುರಾಗಲಿದ್ದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಸಮಿತಿ ಎಚ್ಚರಿಸಿದೆ.
  
ಮಕ್ಕಳ ಹಕ್ಕು ಒಡಂಬಡಿಕೆಯ ಅಂಶಗಳನ್ನು ಸೂಕ್ತವಾಗಿ ಜಾರಿಗೊಳಿಸುವುದನ್ನು ಖಾತರಿಪಡಿಸಲು ವಿಶ್ವಸಂಸ್ಥೆ ನೇಮಿಸಿದ 18 ಸ್ವತಂತ್ರ ತಜ್ಞರನ್ನು ಒಳಗೊಂಡ ಸಮಿತಿ ಇದಾಗಿದೆ. ಮ್ಯಾನ್ಮಾರ್ನಲ್ಲಿ ಸುಮಾರು 1 ಮಿಲಿಯನ್ ಮಕ್ಕಳು ಅಗತ್ಯದ ಲಸಿಕೀಕರಣ ಪ್ರಕ್ರಿಯೆಯಿಂದ ಹೊರಗುಳಿದಿದ್ದು, ತೀವ್ರ ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿರುವ 40,000ಕ್ಕೂ ಅಧಿಕ ಮಕ್ಕಳಿಗೆ ವೈದ್ಯಕೀಯ ನೆರವು ಲಭಿಸುತ್ತಿಲ್ಲ ಎಂಬ ಯುನಿಸೆಫ್ನ ವರದಿಯನ್ನು ಸಮಿತಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News