ಮೂರನೇ ಅಲೆ ತಡೆಗೆ ಕೇಂದ್ರದ ಆದ್ಯತೆ: ಮೋದಿ
ಹೊಸದಿಲ್ಲಿ, ಜು.16: ಕೋವಿಡ್-19 ಮೂರನೇ ಅಲೆಯನ್ನು ತಡೆಯುವುದು ಸರಕಾರದ ಪ್ರಥಮ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರು ರಾಜ್ಯಗಳ ಮುಖ್ಯಮಂತ್ರಿಗಳ ವಿಡಿಯೋಕಾನ್ಫರೆನ್ಸ್ ಸಭೆಯಲ್ಲಿ ಹೇಳಿದ್ದಾರೆ. ವೈರಸ್ ತಡೆಗಟ್ಟಲು ಕೇಂದ್ರ ಸರಕಾರದ ‘ಟೆಸ್ಟ್,ಟ್ರಾಕ್, ಟ್ರೀಟ್ ಹಾಗೂ ಟೀಕಾ (ಪರೀಕ್ಷೆ, ಪತ್ತೆಹಚ್ಚು, ಚಿಕಿತ್ಸೆ ಹಾಗೂ ಲಸಿಕೆ ) ವ್ಯವಸ್ಥೆಯನ್ನು ಅನುಸರಿಸಲು ತೀವ್ರವಾಗಿ ಪ್ರಯತ್ನಿಸುವಂತೆ ಅವರು ಕರೆ ನೀಡಿದ್ದಾರೆ.
ಗರಿಷ್ಠ ಸಂಖ್ಯೆಯ ಕೋವಿಡ್19 ಪ್ರಕರಣಗಳು ವರದಿಯಾಗುತ್ತಿರುವ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದರು.ಕಳೆದ ಒಂದು ವಾರದಲ್ಲಿ ಶೇ.80ರಷ್ಟು ಕೋವಿಡ್19 ಹೊಸ ಪ್ರಕರಣಗಳು ಹಾಗೂ ಶೇ.84ರಷ್ಟು ಸಾವುಗಳು ಈ ರಾಜ್ಯಗಳಲ್ಲಿ ಸಂಭವಿಸಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ.
‘‘ಕೋವಿಡ್19ನ ಮೂರನೆ ಅಲೆಯನ್ನು ತಡೆಗಟ್ಟುವುದು ಅತ್ಯಂತ ಅಗತ್ಯವಾಗಿದೆ. ಒಂದು ವೇಳೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದೆ ಇದ್ದಲ್ಲಿ, ಮುಂದೆ ಭಾರೀ ತೊಂದರೆ ಕಾದಿದೆ’’ ಎಂದು ಪ್ರಧಾನಿ ಎಚ್ಚರಿಸಿದರು. ವೈರಸ್ನ ಹರಡುವಿಕೆಯನ್ನು ಗುರುತಿಸಲು ಹಾಗೂ ನಿಯಂತ್ರಿಸಲು ಆರ್ಟಿ-ಪಿಸಿಆರ್ ಟೆಸ್ಟಿಂಗ್ ಅತ್ಯಂತ ಮುಖ್ಯವಾಗಿದೆ ಎಂದರು.
ತೀರಾ ಇತ್ತೀಚೆಗೆ ಕೇಂದ್ರ ಸರಕಾರವು ಘೋಷಿಸಿದ 23 ಸಾವಿರ ಕೋಟಿ ರೂ.ಗಳ ಕೊರೋನ ಪ್ಯಾಕೇಜ್ ನಿಧಿಯ ಬಗ್ಗೆ ಪ್ರಧಾನಿಯವರು ಸಭೆಯಲ್ಲಿ ಪ್ರಸ್ತಾವಿಸಿದರು. ಎಲ್ಲಾ ರಾಜ್ಯಗಳು ಈ ನಿಧಿಯನ್ನು ಬಳಸಿಕೊಂಡು, ತಮ್ಮ ಆರೋಗ್ಯಪಾಲನಾ ಮೂಲಸೌಕರ್ಯದಲ್ಲಿನ ಕುಂದುಕೊರತೆಗಳನ್ನು ನೀಗಿಸಬೇಕೆಂದು ಅವರು ಕರೆ ನೀಡಿದರು.
ವೈದ್ಯಕೀಯ ಆಕ್ಸಿಜನ್ನ ಅಬಾಧಿತ ಪೂರೈಕೆಯನ್ನು ಖಾತರಿಪಡಿಸುವ ಅಗತ್ಯವನ್ನು ಕೂಡಾ ಪ್ರಧಾನಿ ಸಭೆಯಲ್ಲಿ ಪ್ರತಿಪಾದಿಸಿದರು. ಎಲ್ಲಾ ರಾಜ್ಯಗಳಲ್ಲಿ ಪಿಎಸ್ಎ ಆಕ್ಸಿಜನ್ ಘಟಕಗಳ ಸ್ಥಾಪನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಅವುಗಳ ಸ್ಥಾಪನೆಯ ಮೇಲ್ವಿಚಾರಣೆಯನ್ನು ಖುದ್ದಾಗಿ ನೋಡಿಕೊಳ್ಳುವಂತಹ ಹಿರಿಯ ಅಧಿಕಾರಿಯನ್ನು 15-20 ದಿನಗಳ ಒಳಗೆ ನೇಮಿಸುವಂತೆ ಸೂಚಿಸಿದರು.
ಮಾಸ್ಕ್ ಧಾರಣೆ ಹಾಗೂ ಸುರಕ್ಷಿತ ಅಂತರ ಸೇರಿದಂತೆ ಕೋವಿಡ್19 ಶಿಷ್ಟಾಚಾರಗಳನ್ನು ಸಾರ್ವಜನಿಕರು ಪಾಲಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಮೋದಿ ಮುಖ್ಯಮಂತ್ರಿಗಳಿಗೆ ಸೂಚಿಸಿದರು. ಪ್ರವಾಸಿ ಗಿರಿಧಾಮಗಳಲ್ಲಿ ಹಾಗೂ ಮಾರುಕಟ್ಟೆ ಸ್ಥಳಗಳಲ್ಲಿ ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಸೂಚನೆ ಹೆಚ್ಚಿನ ಮಹತ್ವ ಪಡೆದಿದೆ.
ಮಂಗಳವಾರಂದು ಪ್ರಧಾನಿಯವರು ಈಶಾನ್ಯ ಭಾರತ ರಾಜ್ಯಗಳ ಎಂಟು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದರು.