×
Ad

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಬಾವಿ ದುರಂತ ; ಮೃತರ ಸಂಖ್ಯೆ 11ಕ್ಕೆ ಏರಿಕೆ

Update: 2021-07-17 09:10 IST

ವಿದಿಶಾ : ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಬಾವಿಗೆ ಬಿದ್ದ ಮಗುವಿನ ರಕ್ಷಣಾ ಕಾರ್ಯ ವೀಕ್ಷಿಸಲು ಜನಸ್ತೋಮ ಸೇರಿದ್ದ ವೇಳೆ ಬಾವಿಕಟ್ಟೆ ಕುಸಿದು ಬಿದ್ದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೇರಿದೆ. 50 ಅಡಿ ಆಳದ ಬಾವಿಗೆ ಒಟ್ಟು 30 ಮಂದಿ ಬಿದ್ದಿದ್ದು, 11 ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಲಾಲ್ ಪತಾರ್‌ನಲ್ಲಿ ಬಾವಿಗೆ ಬಿದ್ದವರ ಪೈಕಿ 19 ಮಂದಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಗಿದೆ. ದುರಂತದಲ್ಲಿ ಮಡಿದವರಿಗೆ ಪ್ರಧಾನಿ ಕಾರ್ಯಾಲಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

"ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದ ದುರಂತದ ಬಗ್ಗೆ ತೀರಾ ಆಘಾತವಾಗಿದೆ. ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳುತ್ತಿದ್ದೇನೆ. ಮೃತರ ಕುಟುಂಬಗಳಿಗೆ ಪಿಎಂಎನ್‌ಆರ್‌ಎಫ್ ವತಿಯಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು" ಎಂದು ಪಿಎಂಓ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ.

ಇದಕ್ಕೂ ಮುನ್ನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನಿಡುವ ಭರವಸೆ ನೀಡಿದ್ದರು. ಗಾಯಾಳುಗಳಿಗೆ 50 ಸಾವಿ ರೂಪಾಯಿ ಪರಿಹಾರ ಘೋಷಿಸಿದ್ದರು.

ಸ್ಥಳೀಯರ ಪ್ರಕಾರ, ಬಾವಿಸುತ್ತಲೂ ಜನರು ಸೇರಿದ್ದ ಕಾರಣ ಬಾವಿಕಟ್ಟೆ ಕುಸಿದಿದ್ದು, 30ಕ್ಕೂ ಹೆಚ್ಚು ಮಂದಿ ಬಾವಿಗೆ ಬಿದ್ದರು. 50 ಅಡಿ ಆಳದ ಬಾವಿಯಲ್ಲಿ 20 ಅಡಿ ನೀರಿತ್ತು. ಆ ಬಳಿಕ ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಿದ್ದ ಟ್ರ್ಯಾಕ್ಟರ್ ಕೂಡಾ ಜಾರಿ ಬಾವಿಗೆ ಬಿತ್ತು. ಇದರಲ್ಲಿ ನಾಲ್ವರು ಪೊಲೀಸರು ಇದ್ದರು ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News