ಎನ್‌ಸಿಇಆರ್‌ಟಿ ಪಠ್ಯ ಬದಲಾವಣೆ ರಾಜಕೀಯ ಉದ್ದೇಶದ್ದು: ಐಎಚ್‌ಸಿ ಟೀಕೆ

Update: 2021-07-17 04:46 GMT
ಸಾಂದರ್ಭಿಕ ಚಿತ್ರ

ಆಗ್ರಾ: ಶಾಲಾ ಪಠ್ಯಪುಸ್ತಕಗಳ ಬದಲಾವಣೆ ಕುರಿತ ಎನ್‌ಸಿಇಆರ್‌ಟಿ ಪ್ರಸ್ತಾವವನ್ನು ದೇಶದ ಅತಿದೊಡ್ಡ ಇತಿಹಾಸಕಾರರ ಸಂಘವಾದ ಇಂಡಿಯನ್ ಹಿಸ್ಟರಿ ಕಾಂಗ್ರೆಸ್ (ಐಎಚ್‌ಸಿ) ಟೀಕಿಸಿದೆ. ಇದು ಶೈಕ್ಷಣಿಕ ಉದ್ದೇಶಕ್ಕಿಂತ ಹೆಚ್ಚಾಗಿ ರಾಜಕೀಯ ಉದ್ದೇಶ ಹೊಂದಿದೆ ಎಂದು ಲೇವಡಿ ಮಾಡಿದೆ.

ಶಾಲಾ ಪಠ್ಯಪುಸ್ತಕದ ಬದಲಾವಣೆ ವಿಚಾರವನ್ನು ಸಂಸದೀಯ ಸ್ಥಾಯಿ ಸಮಿತಿ ಚರ್ಚಿಸಲಿದೆ ಎಂದು ಈ ವರ್ಷದ ಆರಂಭದಲ್ಲಿ ರಾಜ್ಯಸಭಾ ಕಚೇರಿ ಹೇಳಿಕೆ ನೀಡಿತ್ತು. ಇದನ್ನು "ಸುಧಾರಣೆ" ಎಂದು ಬಣ್ಣಿಸಿದ ಸರ್ಕಾರ "ಐತಿಹಾಸಿಕವಲ್ಲದ ಅಂಶಗಳನ್ನು" ಮತ್ತು "ನನ್ನ ರಾಷ್ಟ್ರೀಯ ಹೀರೊಗಳ ಬಗೆಗಿನ ಅಸ್ಪಷ್ಟತೆ" ಅಂಶಗಳನ್ನು ಕಿತ್ತು ಹಾಕಲಾಗುವುದು ಎಂದು ಹೇಳಿತ್ತು. ಜತೆಗೆ ಭಾರತೀಯ ಇತಿಹಾಸದ ಎಲ್ಲ ಕಾಲಘಟ್ಟದ ಬಗ್ಗೆ ಸಮಾನ ಅಥವಾ ಪ್ರಮಾಣಾನುಗುಣ ಉಲ್ಲೇಖ ಮಾಡಲಾಗುವುದು" ಎಂದು ಹೇಳಿತ್ತು.

ಜೂನ್ 30ರವರೆಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಕೇಳಲಾಗಿತ್ತು. ಬಳಿಕ ಜುಲೈ 15ರವರೆಗೆ ಇದನ್ನು ವಿಸ್ತರಿಸಲಾಗಿದೆ. ಐಎಚ್‌ಸಿ ಇದಕ್ಕೆ ಕಳುಹಿಸಿದ ಪ್ರತಿಕ್ರಿಯೆಯನ್ನು ತನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸಿದೆ. 1935ರಲ್ಲಿ ಆರಂಭವಾದ ಐಎಚ್‌ಸಿ 35 ಸಾವಿರ ಸದಸ್ಯರನ್ನು ಹೊಂದಿದೆ.

"ಹಾಲಿ ಇರುವ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಿಗೆ ಸುಧಾರಣೆ ಹೆಸರಿಲ್ಲಿ ತಪ್ಪು ಮಾಹಿತಿ ಮತ್ತು ಪಕ್ಷಪಾತದ ನಿಲುವನ್ನು ಬಿಂಬಿಸಿರುವ ಬಗ್ಗೆ ಐಎಚ್‌ಸಿಗೆ ತೀರಾ ಬೇಸರವಿದೆ" ಎಂದು ಪತ್ರದಲ್ಲಿ ವಿವರಿಸಲಾಗಿದೆ.

’ಸುಧಾರಣೆ’ಯಲ್ಲಿ ಮಾಡಿರುವ ಹಾಲಿ ಪಠ್ಯಪುಸ್ತಕದ ವಿಮರ್ಶೆ ಅಥವಾ ಅವಲೋಕನವನ್ನು ಯಾವುದೇ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಇತಿಹಾಸಕಾರರು ಮಾಡಿಲ್ಲ; ಬದಲಾಗಿ ಶಿಕ್ಷಣಕ್ಕೆ ಸಂಬಂಧವೇ ಇಲ್ಲದ ಪಕ್ಷಪಾತದಿಂದ ಕೂಡಿದ ರಾಜಕೀಯ ನಿಲುವುಗಳನ್ನು ಒಳಗೊಂಡಿದೆ" ಎಂದು ಪತ್ರದಲ್ಲಿ ಅಭಿಪ್ರಾಯಪಟ್ಟಿದೆ.

"ಎನ್‌ಸಿಇಆರ್‌ಟಿ ಪಠ್ಯಗಳನ್ನು ದೇಶದ ಅತ್ಯುನ್ನತ ಚಿಂತಕರು ಬರೆದಿದ್ದರು. ಇವುಗಳನ್ನು ಕಿತ್ತುಹಾಕಿ ಆ ಜಾಗದಲ್ಲಿ ಸ್ಪಷ್ಟವಾಗಿ ವಿಭಜಕಾರಿ, ಬಹುಸಂಖ್ಯಾತರ ಪರ ಇರುವ ಪುಸ್ತಕಗಳು ಬಂದಿವೆ" ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News