2011-20ರ ಅವಧಿಯಲ್ಲಿ ಅರೆ ಸೇನಾಪಡೆಗಳ 81 ಸಾವಿರಕ್ಕೂ ಅಧಿಕ ಸಿಬ್ಬಂದಿ ಸ್ವಯಂ ನಿವೃತ್ತಿ
ಹೊಸದಿಲ್ಲಿ: ಕಳೆದ ದಶಕದಲ್ಲಿ ಸಿಆರ್ ಪಿಎಫ್ ಹಾಗೂ ಬಿಎಸ್ ಎಫ್ ಸೇರಿದಂತೆ ಆರು ಅರೆ ಸೇನಾ ಪಡೆಗಳಿಂದ 81,000ಕ್ಕೂ ಅಧಿಕ ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದು, ಈ ಪೈಕಿ 2017ರಲ್ಲಿ ಗರಿಷ್ಠ 11,000 ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆದಿದ್ದಾರೆ ಎಂದು ಕೇಂದ್ರ ಗೃಹಸಚಿವಾಲಯವು ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯದ ದತ್ತಾಂಶದ ಪ್ರಕಾರ 2011-2020ರ ಅವಧಿಯಲ್ಲಿ 15,904 ಸಿಬ್ಬಂದಿ ತಮಗೆ ಸಂಬಂಧಪಟ್ಟ ಸೇನಾಪಡೆಗೆ ರಾಜೀನಾಮೆ ನೀಡಿದ್ದು, 2013ರಲ್ಲಿ ಗರಿಷ್ಠ 2,332 ಯೋಧರು ರಾಜೀನಾಮೆ ಸಲ್ಲಿಸಿದ್ದರು.
ಇಂತಹ ನಿವೃತ್ತಿಗಳು ಅಥವಾ ರಾಜೀನಾಮೆಗಳಿಗೆ ನಿಖರ ಕಾರಣವನ್ನು ಪ್ರತಿಪಾದಿಸುವ ನಿರ್ದಿಷ್ಟ ಅಧ್ಯಯನವನ್ನು ಈ ಅವಧಿಯಲ್ಲಿ ಗೃಹ ಸಚಿವಾಲಯ ನಡೆಸಿಲ್ಲ. ಆದರೆ ಅರೆ ಸೇನಾ ಪಡೆಗಳು ಸ್ವಯಂ ಆಗಿ ನಡೆಸಿರುವ ವಿಶ್ಲೇಷಣೆಯ ಪ್ರಕಾರ ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳು, ಆರೋಗ್ಯಸಂಬಂಧಿ ಕಾರಣಗಳು ಹಾಗೂ ಉತ್ತಮ ಅವಕಾಶಗಳನ್ನುಅರಸುವ ಧೋರಣೆಗಳೇ ಹುದ್ದೆ ತ್ಯಜಿಸಲು ಕೆಲವು ಪ್ರಮುಖ ಕಾರಣವಾಗಿವೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಎಲ್ಲಾ ಅಂಕಿ-ಅಂಶಗಳು ಆರು ಅರೆ ಸೇನಾಪಡೆಗಳಾಗಿರುವ ಸಿಆರ್ ಪಿಎಫ್, ಬಿಎಸ್ ಎಫ್, ಐಟಿಬಿಪಿ(ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್), ಎಸ್ ಎಸ್ ಬಿ(ಸಶಸ್ತ್ರ ಸೀಮಾ ದಳ), ಸಿಐಎಸ್ ಎಫ್(ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಹಾಗೂ ಅಸ್ಸಾಂ ರೈಫಲ್ಸ್ ಗೆ ಸಂಬಂಧಿಸಿದ್ದಾಗಿದೆ.
ಈ ಎಲ್ಲ ಪಡೆಗಳಿಂದ 2011ರಿಂದ ಒಟ್ಟು 81,007 ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆದಿದ್ದಾರೆ ಎಂದು ದತ್ತಾಂಶದಿಂದ ತಿಳಿದುಬಂದಿದೆ.
ಕಳೆದ ದಶಕದಲ್ಲಿ ಎಲ್ಲ ಪಡೆಗಳ ಪೈಕಿ ಬಿಎಸ್ ಎಫ್ ನಿಂದ ಗರಿಷ್ಠ 36,768 ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಉಳಿದಂತೆ ಸಿಆರ್ ಪಿಎಫ್ (26,164)ಸಿಐಎಸ್ ಎಫ್ (6,705), ಅಸ್ಸಾಂ ರೈಫಲ್ಸ್ (4,947) , ಐಟಿಬಿಪಿ(3,193) ಹಾಗೂ ಎಸ್ ಎಸ್ ಬಿ(3,230) ಸಿಬ್ಬಂದಿಗಳು ಸ್ವಯಂ ನಿವೃತ್ತಿ ಪಡೆದಿದ್ದಾರೆ.
2017ರಲ್ಲಿ ಗರಿಷ್ಠ 11,728 ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆದಿದ್ದರು. 2011ರಲ್ಲಿ 11,260 ಸಿಬ್ಬಂದಿ, 2012ರಲ್ಲಿ 10,859, 2013ರಲ್ಲಿ 9,355, 2014ರಲ್ಲಿ 5,931, 2015ರಲ್ಲಿ 1,686, 2016ರಲ್ಲಿ 6,981 , 2018ರಲ್ಲಿ 8,132, 2019ರಲ್ಲಿ 7,611 ಹಾಗೂ 2020ರಲ್ಲಿ 5,935 ಸಿಬ್ಬಂದಿ ಸ್ವಯಂ ನಿವೃತ್ತಿಯಾಗಿದ್ದರು.
ಎಲ್ಲ ಆರು ಪ್ಯಾರಾ ಮಿಲಿಟರಿ ಪಡೆಗಳ ಒಟ್ಟು ಸಿಬ್ಬಂದಿ ಬಲ ಸುಮಾರು 10 ಲಕ್ಷ ಇದೆ.