ಉತ್ತರ ಪ್ರದೇಶ: ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ್ದ 2,000ಕ್ಕೂ ಅಧಿಕ ರಾಜ್ಯ ಸರ್ಕಾರಿ ಉದ್ಯೋಗಿಗಳು ಕೋವಿಡ್ ಗೆ ಬಲಿ

Update: 2021-07-17 08:04 GMT
ಸಾಂದರ್ಭಿಕ ಚಿತ್ರ (PTI)

ಲಕ್ನೋ: ಉತ್ತರ ಪ್ರದೇಶದಲ್ಲಿ ಪಂಚಾಯತ್ ಚುನಾವಣೆಯಲ್ಲಿ ಭಾಗವಹಿಸಿದ್ದವರ ಪೈಕಿ 2,000ಕ್ಕೂ ಅಧಿಕ ರಾಜ್ಯ ಸರ್ಕಾರಿ ಉದ್ಯೋಗಿಗಳು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆಂಬ ಮಾಹಿತಿ ಬಹಿರಂಗಗೊಂಡಿದೆ. ಸೋಂಕಿನಿಂದ ಮೃತಪಟ್ಟ ಉದ್ಯೋಗಿಗಳ ಪೈಕಿ ಅರ್ಧದಷ್ಟು ಮಂದಿ ಶಿಕ್ಷಕರಾಗಿದ್ದಾರೆ. ಸರ್ಕಾರ ಬಿಡುಗಡೆಗೊಳಿಸಿದ  ಪರಿಹಾರ ಅಂಕಿಅಂಶಗಳಿಂದ ಇದು ತಿಳಿದು ಬಂದಿದೆ.

ಪಂಚಾಯತ್ ಚುನಾವಣೆಗಳು ರಾಜ್ಯದಲ್ಲಿ ಎಪ್ರಿಲ್-ಮೇ ತಿಂಗಳಲ್ಲಿ ನಡೆದಿತ್ತು. ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿ ನಂತರ ಕೋವಿಡ್ ಗೆ ಬಲಿಯಾದ ತನ್ನ 2,020 ಉದ್ಯೋಗಿಗಳ ಕುಟುಂಬಳಿಗೆ ಸರಕಾರ ತಲಾ ರೂ 30 ಲಕ್ಷ ಪರಿಹಾರ ನೀಡಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಚುನಾವಣಾ ಕರ್ತವ್ಯದಲ್ಲಿದ್ದವರ ಪೈಕಿ ಕೇವಲ ಮೂವರು ಶಿಕ್ಷಕರ ಸಹಿತ ಕೇವಲ 74 ಸರ್ಕಾರಿ ಉದ್ಯೋಗಿಗಳು  ಕೋವಿಡ್ ಗೆ ಬಲಿಯಾಗಿದ್ದರು ಎಂದು ಸರ್ಕಾರ ಈ ಹಿಂದೆ ಹೇಳಿಕೊಂಡಿತ್ತು.

ಉತ್ತರ ಪ್ರದೇಶ ಪ್ರಾಥಮಿಕ್ ಶಿಕ್ಷಕ್ ಸಂಘ್ ಕೂಡ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿ ನಂತರ ಕೋವಿಡ್ ಗೆ ಬಲಿಯಾಗಿದ್ದರೆನ್ನಲಾದ 1,621 ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಇತರ ಸಿಬ್ಬಂದಿಯ ಪಟ್ಟಿ ಬಿಡುಗಡೆಗೊಳಿಸಿತ್ತು.

"ಪರಿಹಾರಕ್ಕಾಗಿ 3,078 ಅರ್ಜಿಗಳು ಬಂದಿದ್ದವು. ಅವುಗಳ ಪೈಕಿ 2,020 ಅರ್ಜಿಗಳು ಅರ್ಹಗೊಂಡಿವೆ ಹಾಗೂ ಶೇ50ರಷ್ಟು ಮಂದಿ ಶಿಕ್ಷಕರಾಗಿದ್ದಾರೆ,'' ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಪಂಚಾಯತ್ ರಾಜ್) ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ.

ಪಂಚಾಯತ್ ಚುನಾವಣಾ ಕರ್ತವ್ಯಕ್ಕಾಗಿ ನೇಮಿಸಲಾಗಿದ್ದ 11 ಲಕ್ಷ ಸರ್ಕಾರಿ ಉದ್ಯೋಗಿಗಳ ಪೈಕಿ ಶೇ65ರಷ್ಟು ಅಥವಾ 6.5 ಲಕ್ಷಕ್ಕೂ ಹೆಚ್ಚು ಮಂದಿ ಶಿಕ್ಷಕರಾಗಿದ್ದರು.

ಕರ್ತವ್ಯದಲ್ಲಿದ್ದ ಸಂದರ್ಭ ಅಥವಾ ಕರ್ತವ್ಯಕ್ಕೆ ತೆರಳುತ್ತಿರುವ ಯಾ ಮರಳುತ್ತಿರುವ ವೇಳೆ ಕೋವಿಡ್ ಗೆ ಬಲಿಯಾದವರಿಗೆ ಮಾತ್ರ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಈ ಹಿಂದೆ ಹೇಳಿದ್ದರೂ ನಂತರ ಒತ್ತಡದ ಹಿನ್ನೆಲೆಯಲ್ಲಿ ಈ ಮಾನದಂಡವನ್ನು ಬದಲಾಯಿಸಿ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ ನಂತರದ 30 ದಿನಗಳಲ್ಲಿ ಕೋವಿಡ್‍ಗೆ ಬಲಿಯಾದವರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News