ಮಹಿಳೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ಕಸಿದುಕೊಳ್ಳಲಾಗಿದೆ: ಆದಿತ್ಯನಾಥ್ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

Update: 2021-07-17 11:13 GMT

ಲಕ್ನೊ (ಉತ್ತರ ಪ್ರದೇಶ): ಭಾರತದ ಪ್ರತಿಯೊಬ್ಬ ಮಹಿಳೆಗೂ ಚುನಾವಣೆಯಲ್ಲಿ ಸ್ಪರ್ಧಿಸುವ  ಸಾಂವಿಧಾನಿಕ ಹಕ್ಕಿದೆ ಎಂದಿರುವ ಕಾಂಗ್ರೆಸ್ ನಾಯಕಿ  ಪ್ರಿಯಾಂಕಾ ಗಾಂಧಿ ವಾದ್ರಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿನ ಹಿಂಸಾಚಾರದ ಬಗ್ಗೆ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ನಾಮಪತ್ರ ಸಲ್ಲಿಸಲು ಹೋದಾಗ ಹಲ್ಲೆಗೊಳಗಾದ ಸಮಾಜವಾದಿ ಪಕ್ಷದ ಕಾರ್ಯಕರ್ತೆಯೊಂದಿಗಿನ ಭೇಟಿಯ ನಂತರ  ಪ್ರಿಯಾಂಕಾ ಈ ಹೇಳಿಕೆ ನೀಡಿದರು.

ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ಸಮಾಜವಾದಿ ಪಕ್ಷದ ಕಾರ್ಯಕರ್ತೆಯನ್ನು ಎಳೆದಾಡಿದ್ದಲ್ಲದೆ  ಆಕೆಯ  ಸೀರೆಯನ್ನು ಎಳೆಯುತ್ತಿರುವ  ದೃಶ್ಯವಿರುವ ವಿಡಿಯೋವು ಉತ್ತರ ಪ್ರದೇಶದಲ್ಲಿ  ಕಾನೂನು ಹಾಗೂ  ಸುವ್ಯವಸ್ಥೆ ಕುರಿತು ವಿರೋಧ ಪಕ್ಷಗಳ ನಾಯಕರುಗಳ  ತೀಕ್ಷ್ಣವಾದ ಟೀಕೆಗಳಿಗೆ ಕಾರಣವಾಗಿತ್ತು.

ಘಟನೆ ನಡೆದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಮತ್ತೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ "ಚುನಾವಣೆಯಲ್ಲಿ ಸ್ಪರ್ಧಿಸುವುದು ಆಕೆಯ (ಎಸ್‌ಪಿ ಕಾರ್ಯಕರ್ತೆ) ಸಾಂವಿಧಾನಿಕ ಹಕ್ಕು. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗಿದೆ. ಆಕೆ  ನಾಮಪತ್ರ ಸಲ್ಲಿಸಲು ಹೋಗಿದ್ದಳು. ಆಕೆಯ  ಮೇಲೆ ಹಲ್ಲೆ ನಡೆಸಲಾಯಿತು. ಆಕೆಯ ಸೀರೆಯನ್ನು ಎಳೆಯಲಾಯಿತು. ಮಹಿಳೆಯ  ಮಗ ಆಕೆಯೊಂದಿದ್ದ. ಆಕೆಯ  ಮೇಲೆ ಹಲ್ಲೆ ನಡೆಸಿದವರನ್ನು ಯಾರೂ ತಡೆಯಲಿಲ್ಲ. ಇದನ್ನು ತಡೆಯಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಘಟನೆಯ ಕುರಿತು ಆಡಳಿತವು ಮೌನವಾಗಿದೆ'' ಎಂದರು.

ಹಿಂಸಾಚಾರವಾದ ಸಂದರ್ಭದಲ್ಲಿ ಸಾಮಾನ್ಯವಾಗಿ ಚುನಾವಣೆಯನ್ನು ರದ್ದುಪಡಿಸಲಾಗುತ್ತದೆ. ಆದರೆ ಚುನಾವಣೆಯು ಈಗಲೂ ನಡೆಯುತ್ತಿದೆ. ಮಹಿಳೆಯೊಬ್ಬರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿಲ್ಲವೇ?ಇದು ಪ್ರಜಾಪ್ರಭುತ್ವವೇ?ನೀವು ಇಂತಹ ರಾಜ್ಯವನ್ನು ಬಯಸುತ್ತೀರಾ?. ಹಲವಾರು ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯ  ಸರಕಾರವನ್ನು ಪ್ರಶಂಸಿಸಿದ್ದಾರೆ. ನಿಮ್ಮೊಂದಿಗೆ ದೇಶದ ಎಲ್ಲ ಮಹಿಳೆಯರೂ ನಿಲ್ಲುತ್ತಾರೆ ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತೆಗೆ ನಾನು ಹೇಳಿದ್ದೇನೆ. ಮಹಿಳೆಯರು ಸುರಕ್ಷಿತವಾಗಿ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವ ಪರಿಸ್ಥಿತಿಯನ್ನು ನಾವು ಬಯಸುವುದಿಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರವು ಉತ್ತರಪ್ರದೇಶದ ಅಯೋಧ್ಯೆ, ಪ್ರಯಾಗ್ ರಾಜ್, ಅಲಿಗಢ ಸಹಿತ ಕನಿಷ್ಟ 17 ಜಿಲ್ಲೆಗಳಲ್ಲಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News