×
Ad

ದೇಶದ್ರೋಹ ಪ್ರಕರಣ: ಜಿಲ್ಲಾ ಪೊಲೀಸ್ ಮುಖ್ಯಸ್ಥರ ಕಚೇರಿಗೆ ಮುತ್ತಿಗೆ ಹಾಕಲು ರೈತರ ಯೋಜನೆ

Update: 2021-07-17 15:25 IST

ಸಿರ್ಸಾ( ಹರಿಯಾಣ): ಬಿಜೆಪಿ ಮುಖಂಡ ಹಾಗೂ ಹರ್ಯಾಣ ವಿಧಾನಸಭೆಯ ಉಪ ಸ್ಪೀಕರ್ ರಣಬೀರ್ ಗಂಗ್ವಾ ಅವರ ಮೇಲೆ ಜುಲೈ 11ರಂದು ಹಲ್ಲೆ ನಡೆಸಿದ ಆರೋಪದ ಮೇಲೆ 100ಕ್ಕೂ ಅಧಿಕ ರೈತರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದ್ದು, ದೇಶದ್ರೋಹ ಆರೋಪದಲ್ಲಿ ಐವರು ರೈತರ ನ್ನು ಗುರುವಾರ ಬಂಧಿಸಲಾಗಿದೆ.  ದೇಶದ್ರೋಹ ಪ್ರಕರಣ ಹಾಗೂ ರೈತರ ಬಂಧನವನ್ನು ಖಂಡಿಸಿ ಹಲವಾರು ರೈತರ ಒಕ್ಕೂಟಗಳು ಜಿಲ್ಲಾ ಪೊಲೀಸ್ ಮುಖ್ಯಸ್ಥರ ಕಚೇರಿಗೆ ಮುತ್ತಿಗೆ ಹಾಕಲು  ಕರೆ ನೀಡಿದ ನಂತರ ನೂರಾರು ರೈತರು ಶನಿವಾರ ಸಿರ್ಸಾ ಕಡೆಗೆ ಮೆರವಣಿಗೆ ನಡೆಸಿದರು.

ಇಂದು ಮಧ್ಯಾಹ್ನ ಹರ್ಯಾಣದ ಸಿರ್ಸಾದಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಉರುಳಿಸಲಾಗಿದೆ. ಅರೆಸೈನಿಕ ಪಡೆಗಳ ಬೃಹತ್ ನಿಯೋಜನೆಯ ಹೊರತಾಗಿಯೂ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮುಂದುವರೆಸಿದರು. ಬಂಧಿತರನ್ನು ಬಿಡುಗಡೆ ಮಾಡಬೇಕೆಂದು ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ. ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಘೇರಾವ್ ಮಾಡಲು  ಯೋಜಿಸುತ್ತಿದ್ದಾರೆ.

ಸಿರ್ಸಾದಲ್ಲಿ ಉಪ ಮುಖ್ಯಮಂತ್ರಿ ದುಶ್ಯಂತ್ ಚೌಟಾಲ ಹಾಗೂ  ರಾಜ್ಯ ವಿದ್ಯುತ್ ಸಚಿವ ರಂಜಿತ್ ಸಿಂಗ್ ಚೌಟಾಲ ಅವರ ನಿವಾಸಗಳ ಹೊರಗೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಸಿರ್ಸಾದಲ್ಲಿ 10,000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಹಾಗೂ  ರೈತರು ಸಿರ್ಸಾ ಎಸ್ಪಿ ಕಚೇರಿ, ಜಿಲ್ಲಾ ಪೊಲೀಸರ ಪ್ರಧಾನ ಕಚೇರಿ ಹಾಗೂ  ಮಂತ್ರಿಗಳ ನಿವಾಸಗಳಿಗೆ ತಲುಪದಂತೆ ತಡೆಯಲು ತಡೆಬೇಲಿ ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News