ಪರಿಷ್ಕೃತ ಪ್ರವೇಶ ವೇಳಾಪಟ್ಟಿ ಪ್ರಕಟಿಸಿದ ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ

Update: 2021-07-17 15:17 GMT

ಹೈದರಾಬಾದ್ : ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ (MANUU )ವು ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2021-22ರ ಶೈಕ್ಷಣಿಕ ವರ್ಷದ ಆನ್‌ಲೈನ್ ಪ್ರವೇಶಕ್ಕಾಗಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಪ್ರವೇಶ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ಎಂ. ವನಜಾ ಅವರ ಪ್ರಕಾರ, "ಪ್ರವೇಶ ಆಧಾರಿತ ಕೋರ್ಸ್‌ ಗಳಿಗೆ ಅರ್ಜಿ ನಮೂನೆ ಸಲ್ಲಿಸಲು ಪರಿಷ್ಕೃತ ಕೊನೆಯ ದಿನಾಂಕ 9 ಆಗಸ್ಟ್ 2021 ಆಗಿದ್ದು, ಮೆರಿಟ್ ಆಧಾರಿತ ಕೋರ್ಸ್‌ ಗಳ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಮತ್ತು ಅರೆಕಾಲಿಕ ಕಾರ್ಯಕ್ರಮಗಳಿಗೆ ಕೊನೆಯ ದಿನಾಂಕ ನವೆಂಬರ್ 10 ಆಗಿದೆ" ಎಂದು ಹೇಳಿದ್ದಾರೆ.

ಪ್ರವೇಶ ಪರೀಕ್ಷೆ ಆಧಾರಿತ ಕೋರ್ಸ್‌ ಗಳಿಗೆ ಅರ್ಜಿ ಸಲ್ಲಿಸುವ ದಿನಾಂಕಗಳು ಆಗಸ್ಟ್ 10 ರಿಂದ 12 ಮತ್ತು ಮೆರಿಟ್ ಕೋರ್ಸ್‌ ಗಳಿಗೆ 1 ಮತ್ತು 2 ಅಕ್ಟೋಬರ್ ಆಗಿದೆ. ಪ್ರವೇಶ ಆಧಾರಿತ ಕೋರ್ಸ್‌ ಗಳಿಗೆ ಪ್ರವೇಶ ಪತ್ರವನ್ನು 2021 ಆಗಸ್ಟ್ 18 ರಂದು ನೀಡಲಾಗುವುದು. ಪ್ರವೇಶ ಪರೀಕ್ಷೆಯ ಹೊಸ ದಿನಾಂಕಗಳು ಆಗಸ್ಟ್ 23, 24 ಮತ್ತು 25 ಆಗಿರುತ್ತದೆ. ಪರೀಕ್ಷೆಯ ಫಲಿತಾಂಶಗಳನ್ನು ಸೆಪ್ಟೆಂಬರ್ 3 ರಿಂದ 7 ರವರೆಗೆ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಮೊದಲು, ಪ್ರವೇಶ ಆಧಾರಿತ ಕೋರ್ಸ್‌ ಗಳಿಗೆ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ವಿಸ್ತರಣೆಗೊಂಡಿದ್ದ ಕೊನೆಯ ದಿನಾಂಕ ಜುಲೈ 17 ರಂದು ಮುಗಿದಿತ್ತು ಮತ್ತು ಮೆರಿಟ್ ಆಧಾರಿತ ಪ್ರವೇಶಕ್ಕಿರುವ ಅರ್ಜಿಯ ಕೊನೆಯ ದಿನಾಂಕ ಸೆಪ್ಟೆಂಬರ್ 4 ಆಗಿತ್ತು.

ಪ್ರವೇಶ ಆಧಾರಿತ ಕೋರ್ಸ್‌ ಗಳಾದ ಬಿ.ಟೆಕ್ (ಕಂಪ್ಯೂಟರ್ ಸೈನ್ಸ್), ಎಂ.ಟೆಕ್ (ಕಂಪ್ಯೂಟರ್ ಸೈನ್ಸ್), ಎಂಬಿಎ, ಎಂಸಿಎ, ಬಿಇಡಿ, ಎಂ.ಎಡ್, ಡಿ.ಎಲ್.ಎಡ್.,ಪಾಲಿಟೆಕ್ನಿಕ್ ಡಿಪ್ಲೊಮಾ ಮತ್ತು ಪಿಎಚ್ಡಿ ಕಾರ್ಯಕ್ರಮಗಳ ಸೇರ್ಪಡೆಯ ಆನ್‌ಲೈನ್ ಅರ್ಜಿ ನಮೂನೆಗಳು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಮೆರಿಟ್ ಆಧಾರಿತ ಕಾರ್ಯಕ್ರಮಗಳ ವಿವರವಾದ ಪಟ್ಟಿಗಾಗಿ ವೆಬ್‌ಸೈಟ್ manuu.edu.in ಗೆ ಭೇಟಿ ನೀಡುವಂತೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಬಿದ್‌ ಅಬ್ದುಲ್‌ ವಾಸೇ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News