ಕೆಲವು ಷರತ್ತುಗಳೊಂದಿಗೆ ನವಜೋತ್ ಸಿಧು ಅಧ್ಯಕ್ಷ ಪಟ್ಟಕ್ಕೇರಲು ಅಮರಿಂದರ್ ಸಿಂಗ್ ಒಪ್ಪಿಗೆ: ವರದಿ
ಚಂಡೀಗಡ /ಹೊಸದಿಲ್ಲಿ: ಪ್ರತಿಸ್ಪರ್ಧಿ ನವಜೋತ್ ಸಿಂಗ್ ಸಿಧು ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಭಡ್ತಿ ನೀಡುವ ಕಾಂಗ್ರೆಸ್ ಯೋಜನೆಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶನಿವಾರ ಒಪ್ಪಿಗೆ ನೀಡಿದ್ದಾರೆ. ಆದರೆ ಅವರು ಕೆಲವು ಷರತ್ತುಗಳ ಪಟ್ಟಿಯನ್ನು ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಂಡೀಗಡದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಲು ದಿಲ್ಲಿಯಿಂದ ಹೆಲಿಕಾಪ್ಟರ್‌ನಲ್ಲಿ ತೆರಳಿದ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರೊಂದಿಗಿನ ಸಭೆಯ ನಂತರ ಕ್ಯಾಪ್ಟನ್ ಸಿಂಗ್ ಅವರು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಸ್ವೀಕರಿಸಲು ಕ್ಯಾಪ್ಟನ್ ಸಿಂಗ್ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ, ಕ್ಯಾಪ್ಟನ್ ಸಿಂಗ್ ಅವರು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪಕ್ಷದ ನಾಯಕತ್ವದಲ್ಲಿ ತಾನೂ ಭಾಗಿಯಾಗಬೇಕು ಹಾಗೂ ಸಿಧು ಅವರ ನೇಮಕವು ಮುಂದಿನ ವರ್ಷದ ಚುನಾವಣೆಯಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು ಸಹಾಯ ಮಾಡುವಲ್ಲಿ ತಮ್ಮ ಪ್ರಯತ್ನಗಳಿಗೆ ಪೂರಕವಾಗಿರಬೇಕು ಎಂಬ ಷರತ್ತುಗಳನ್ನು ಇಟ್ಟಿದ್ದಾರೆ ಮೂಲಗಳು ತಿಳಿಸಿವೆ.
79 ರ ಹರೆಯದ ಕ್ಯಾಪ್ಟನ್ ಸಿಂಗ್ ತಮ್ಮ ಸಂಪುಟವನ್ನು ಪುನರ್ರಚಿಸಲು ಹಾಗೂ ಸಿಧು ಅವರ ಅಡಿಯಲ್ಲಿ ಕಾರ್ಯನಿರ್ವಹಿಸಲಿರುವ ಕಾರ್ಯಾಧ್ಯಕ್ಷರ ನೇಮಕದಲ್ಲಿ ಮುಕ್ತ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು ಅಂತ್ಯಕ್ಕೆ ಪಕ್ಷದ ರಾಜಿಸೂತ್ರವು ಸಂಪೂರ್ಣ ವ್ಯತ್ಯಾಸವುಂಟು ಮಾಡಿಲ್ಲ ಎಂಬ ಸಂಕೇತವನ್ನು ರಾವತ್ ಅವರಿಗೆ ನೀಡಿರುವ ಅಮರಿಂದರ್ ಸಿಂಗ್ ಅವರು ಸಿಧು ಅವರು ತನ್ನ ವಿರುದ್ದ ಮಾಡಿರುವ ಟ್ವೀಟ್ ಗಳಿಗೆ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸುವವರೆಗೆ ಅಥವಾ ಅದಕ್ಕೆ ಕ್ಷಮೆಯಾಚಿಸುವವರೆಗೂ ತಾವು ಅವರನ್ನು ಭೇಟಿಯಾಗುವುದಿಲ್ಲ ಎಂದು ಹೇಳಿದ್ದಾಗಿ ತಿಳಿದುಬಂದಿದೆ.