ವಸಾಹತುಶಾಹಿ ಯುಗದ ಐಪಿಸಿಯ ಬದಲು ಸಮಗ್ರ, ಕಠಿಣ ಕಾನೂನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆ
ಹೊಸದಿಲ್ಲಿ, ಜು.17: ಕಾನೂನಿನ ಆಡಳಿತ ಮತ್ತು ಸಮಾನತೆಯನ್ನು ಖಚಿತಪಡಿಸಲು ಅಪರಾಧ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ 1860ರ ಭಾರತೀಯ ದಂಡ ಸಂಹಿತೆ (ಐಪಿಸಿ)ಸೇರಿದಂತೆ ಪ್ರಸ್ತುತ ಶಾಸನಗಳ ಪರಿಶೀಲನೆಯ ಬಳಿಕ ‘ಸಮಗ್ರ’ ಮತ್ತು ‘ಕಠಿಣ’ ದಂಡ ಸಂಹಿತೆಯನ್ನು ರಚಿಸಲು ನ್ಯಾಯಾಂಗ ಸಮಿತಿ ಅಥವಾ ತಜ್ಞರ ಸಮಿತಿಯನ್ನು ಸ್ಥಾಪಿಸುವಂತೆ ಕೇಂದ್ರಕ್ಕೆ ನಿರ್ದೇಶವನ್ನು ಕೋರಿ ನ್ಯಾಯವಾದಿ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಸಲ್ಲಿಸಿದ್ದಾರೆ.
ಪರ್ಯಾಯವಾಗಿ, ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ಪಾಲಕ ಹಾಗೂ ಮೂಲಭೂತ ಹಕ್ಕುಗಳ ರಕ್ಷಕನಾಗಿರುವುದರಿಂದ ಅದು ಭ್ರಷ್ಟಾಚಾರ ಮತ್ತು ಅಪರಾಧಕ್ಕೆ ಸಂಬಂಧಿಸಿದ ದೇಶೀಯ ಮತ್ತು ಆಂತರಿಕ ಕಾನೂನುಗಳನ್ನು ಪರಿಶೀಲಿಸುವಂತೆ ಮತ್ತು ಆರು ತಿಂಗಳೊಳಗೆ ಕಠಿಣ ಮತ್ತು ಸಮಗ್ರ ಐಪಿಸಿಯನ್ನು ರಚಿಸುವಂತೆ ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶವನ್ನು ನೀಡಬಹುದಾಗಿದೆ ಎಂದು ಉಪಾಧ್ಯಾಯ ತನ್ನ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.
ಭ್ರಷ್ಟಾಚಾರ ಮತ್ತು ಅಪರಾಧಕ್ಕೆ ಸಂಬಂಧಿಸಿದ ಈಗಿನ ಹಳೆಯ ಕಾನೂನುಗಳ ಬದಲು ಕಠಿಣ ಮತ್ತು ಸಮಗ್ರ ಐಪಿಸಿ (ಒಂದು ರಾಷ್ಟ್ರ ಒಂದು ದಂಡ ಸಂಹಿತೆ)ಯನ್ನು ಅನುಷ್ಠಾನಿಸುವ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರಕ್ಕೆ ನಿರ್ದೇಶ ನೀಡುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಿಕೊಂಡಿರುವ ಅರ್ಜಿಯು,161 ವರ್ಷಗಳಷ್ಟು ಹಳೆಯ ವಸಾಹತುಶಾಹಿ ಐಪಿಸಿಯಿಂದ ಸಾರ್ವಜನಿಕರಿಗೆ ವ್ಯಾಪಕ ಪ್ರಮಾಣದಲ್ಲಿ ಹಾನಿಯುಂಟಾಗಿದೆ ಎಂದು ಹೇಳಿದೆ. ಅರ್ಜಿಯು ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಲಂಚ,ಅಕ್ರಮ ಹಣ ವಹಿವಾಟು,ಕಪ್ಪುಹಣ,ಲಾಭಕೋರತನ,ಕಲಬೆರಕೆ,ಅಕ್ರಮ ದಾಸ್ತಾನು,ಕಾಳಸಂತೆ,ಮಾದಕ ದ್ರವ್ಯ ಕಳ್ಳಸಾಗಣೆ,ಚಿನ್ನ ಕಳ್ಳಸಾಗಣೆ ಮತ್ತು ಮಾನವ ಕಳ್ಳಸಾಗಣೆ ಕುರಿತು ನಿರ್ದಿಷ್ಟ ಅಧ್ಯಾಯಗಳನ್ನು ಹೊಂದಿರುವ ಕಠಿಣವಾದ ಮತ್ತು ಸಮಗ್ರವಾದ ‘ಒಂದು ದೇಶ ಒಂದು ದಂಡಸಂಹಿತೆ ’ಯನ್ನು ಅನುಷ್ಠಾನಿಸದೆ ಕಾನೂನಿನ ಆಡಳಿತ ಹಾಗೂ ಜೀವಿಸುವ, ಸ್ವಾತಂತ್ರ್ಯದ ಮತ್ತು ಘನತೆಯ ಹಕ್ಕುಗಳನ್ನು ಸುರಕ್ಷಿತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಅರ್ಜಿಯು,ಈಗ ಬಳಕೆಯಾಗುತ್ತಿರುವ ಐಪಿಸಿ ಕೊಂಚವಾದರೂ ಪರಿಣಾಮಕಾರಿಯಾಗಿದ್ದಿದ್ದರೆ ಹಲವಾರು ಬ್ರಿಟಿಷ್ ಅಧಿಕಾರಿಗಳು ದಂಡಿಸಲ್ಪಡುತ್ತಿದ್ದರೇ ಹೊರತು ಸ್ವಾತಂತ್ರ್ಯ ಹೋರಾಟಗಾರರಲ್ಲ. ವಾಸ್ತವದಲ್ಲಿ 1857ರ ಸಿಪಾಯಿ ದಂಗೆಯಂತಹ ಇನ್ನೊಂದು ಬಂಡಾಯವನ್ನು ತಡೆಯುವುದು ಐಪಿಸಿ 1860 ಮತ್ತು ಪೊಲೀಸ್ ಕಾಯ್ದೆ 1861ರ ಸೃಷ್ಟಿಯ ಹಿಂದಿನ ಮುಖ್ಯ ಕಾರಣವಾಗಿತ್ತು ಎಂದು ತಿಳಿಸಿದೆ.
ವಾಮಾಚಾರ,ಮರ್ಯಾದಾ ಹತ್ಯೆ,ಗುಂಪಿನಿಂದ ಹತ್ಯೆ,ಗೂಂಡಾ ಕಾಯ್ದೆಯಡಿಯ ಅಪರಾಧ ಇತ್ಯಾದಿಗಳು ದೇಶಾದ್ಯಂತದ ಅಪರಾಧಗಳಾಗಿದ್ದರೂ ಐಪಿಸಿಯಲ್ಲಿ ಸೇರಿಸಲ್ಪಟ್ಟಿಲ್ಲ ಮತ್ತು ವಿವಿಧ ರಾಜ್ಯಗಳಲ್ಲಿ ಒಂದೇ ಅಪರಾಧಕ್ಕೆ ಶಿಕ್ಷೆಗಳು ಭಿನ್ನವಾಗಿವೆ. ಹೀಗಾಗಿ ದಂಡನೆಗಳನ್ನು ಪ್ರಮಾಣೀಕರಿಸಲು ಮತ್ತು ಏಕರೂಪಗೊಳಿಸಲು ನೂತನ ಐಪಿಸಿ ಅಗತ್ಯವಾಗಿದೆ ಎಂದು ಅರ್ಜಿಯು ಪ್ರತಿಪಾದಿಸಿದೆ.