×
Ad

ಕೇಂದ್ರ ಸಚಿವ ನಿಶಿತ್ ಪ್ರಾಮಾಣಿಕ್ ಬಾಂಗ್ಲಾ ಪ್ರಜೆಯೇ? ಗೊಂದಲ ಬಗೆಹರಿಸಲು ಪ್ರಧಾನಿಗೆ ಪತ್ರ ಬರೆದ ಸಂಸದ ರಿಪುನ್ ಬೋರಾ

Update: 2021-07-17 23:26 IST

ಹೊಸದಿಲ್ಲಿ: ಇತ್ತೀಚೆಗೆ ಕೇಂದ್ರ ಸಚಿವ ಸಂಪುಟದಲ್ಲಿ ವಿದೇಶಾಂಗ ವ್ಯವಹಾರದ ರಾಜ್ಯಸಚಿವರಾಗಿ ಸೇರ್ಪಡೆಗೊಂಡಿರುವ ಪಶ್ಚಿಮಬಂಗಾಳದ ಯುವ ಸಂಸದ ನಿಶಿತ್ ಪ್ರಾಮಾಣಿಕ್ ಅವರ ಪೌರತ್ವ ಹಾಗೂ ಜನ್ಮ ಸ್ಥಳದ ಕುರಿತ  ಗಂಭೀರ ಹಾಗೂ ಸೂಕ್ಷ್ಮ ವಿಚಾರದ ಬಗ್ಗೆ ಗಮನ ಹರಿಸುವಂತೆ ರಾಜ್ಯಸಭಾ ಸಂಸದ ರಿಪುನ್ ಬೋರಾ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಬರಾಕ್ ಬಾಂಗ್ಲಾ, ರಿಪಬ್ಲಿಕ್ ಟಿವಿ ತ್ರಿಪುರದಂತಹ ಸುದ್ದಿವಾಹಿನಿಗಳು ಹಾಗೂ ಡಿಜಿಟಲ್ ನ್ಯೂಸ್ ಗಳಾದ ಇಂಡಿಯಾ ಟುಡೇ ಹಾಗೂ ಬಿಸಿನೆಸ್ ಸ್ಟ್ಯಾಂಡರ್ಡ್ ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ನಿಶಿತ್ ಪ್ರಾಮಾಣಿಕ್ ಬಾಂಗ್ಲಾದೇಶದ ಪ್ರಜೆ.  ಅವರ ಜನ್ಮ ಸ್ಥಳ ಬಾಂಗ್ಲಾದೇಶದ ಗೈಬಂಧಾ ಜಿಲ್ಲೆಯ ಹರಿನಾಥ್ ಪುರ್ . ಕಂಪ್ಯೂಟರ್ ಅಧ್ಯಯನಕ್ಕಾಗಿ ಪಶ್ಚಿಮಬಂಗಾಳಕ್ಕೆ ಆಗಮಿಸಿದ್ದರು. ಕಂಪ್ಯೂಟರ್ ಪದವಿ ಪಡೆದ ಬಳಿಕ ಮೊದಲಿಗೆ ತೃಣಮೂಲ ಕಾಂಗ್ರೆಸ್ ಗೆ ಸೇರಿಕೊಂಡರು. ಆ ನಂತರ ಬಿಜೆಪಿಗೆ ಸೇರ್ಪಡೆಯಾದರು. ಕೂಚ್ ಬಿಹಾರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು ಎಂದು ಬೋರಾ ಪತ್ರದಲ್ಲಿ ಬರೆದಿದ್ದಾರೆ.

ನಿಶಿತ್ ಚುನಾವಣೆಯ ದಾಖಲೆಗಳಲ್ಲಿ ಕೂಚ್ ಬಿಹಾರ ತನ್ನ ವಿಳಾಸವಾಗಿದೆ ಎಂದು ತಿರುಚಿ ತೋರಿಸಿದ್ದರು  ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ. ನಿಶಿತ್ ಪ್ರಾಮಾಣಿಕ್ ಕೇಂದ್ರ ಸರಕಾರದಲ್ಲಿ ರಾಜ್ಯ ಸಚಿವರಾಗಿ ಆಯ್ಕೆಯಾಗಿರುವುದಕ್ಕೆ ಬಾಂಗ್ಲಾದೇಶದಲ್ಲಿರುವ ಅವರ ಹಿರಿಯ ಸಹೋದರ ಹಾಗೂ ಹುಟ್ಟೂರಿನ ಕೆಲವು ಗ್ರಾಮಸ್ಥರು ಸಂಭ್ರಮ ವ್ಯಕ್ತಪಡಿಸಿರುವುದನ್ನು, ಸಹೋದರನ ಹೇಳಿಕೆಯನ್ನು ಸುದ್ದಿವಾಹಿನಿ ಪ್ರಸಾರ ಮಾಡಿದೆ ಎಂದು ಪತ್ರದಲ್ಲಿ ಬೋರಾ ಬರೆದಿದ್ದಾರೆ.

ವಿದೇಶಿ ಪ್ರಜೆಯೊಬ್ಬರು ಕೇಂದ್ರ ಸಚಿವರಾಗಿ ನೇಮಕವಾಗುವುದು ದೇಶದಲ್ಲಿ ಅತ್ಯಂತ ಗಂಭೀರ ವಿಚಾರವಾಗಿದೆ. ನಿಶಿತ್ ಪ್ರಾಮಾಣಿಕ್ ಅವರ ನಿಜವಾದ ಜನ್ಮಸ್ಥಳ ಹಾಗೂ ರಾಷ್ಟ್ರೀಯತೆಯನ್ನು ಪತ್ತೆ ಹಚ್ಚಲು ಅತ್ಯಂತ ಪಾರದರ್ಶಕ ರೀತಿಯಲ್ಲಿ ತನಿಖೆ ನಡೆಯಬೇಕೆಂದು ವಿನಂತಿಸುವೆ.  ದೇಶಾದ್ಯಂತ ಗೊಂದಲವನ್ನು ಸೃಷ್ಟಿಸಿರುವ ಈ ಇಡೀ ವಿಚಾರಕ್ಕೆ ಸೃಷ್ಟನೆ ನೀಡಬೇಕೆಂದು ಬೋರಾ ತಮ್ಮ ಪತ್ರದಲ್ಲಿ ಪ್ರಧಾನಿ ಯವರನ್ನುಕೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News