ಬಿಎಸ್‌ಪಿಯು ಅಯೋಧ್ಯೆಯಲ್ಲಿ ʼಬ್ರಾಹ್ಮಣ ಸಮ್ಮೇಳನʼವನ್ನು ಆಯೋಜಿಸಲಿದೆ: ಮಾಯಾವತಿ

Update: 2021-07-18 16:46 GMT

ಲಕ್ನೋ,ಜು.18: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಅಭಿಯಾನಕ್ಕೆ ರವಿವಾರ ಚಾಲನೆ ನೀಡಿದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ರಾಜ್ಯದಲ್ಲಿಯ ಬಿಜೆಪಿ ಸರಕಾರವು ಜನರನ್ನು ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಬ್ರಾಹ್ಮಣ ಸಮುದಾಯವನ್ನು ಸಂಪರ್ಕಿಸುವ ಪ್ರಯತ್ನವನ್ನೂ ಮಾಡಿದರು. ಇದಕ್ಕಾಗಿ ಪಕ್ಷವು ಜ.23ರಂದು ಅಯೋಧ್ಯೆಯಲ್ಲಿ ‘ಬ್ರಾಹ್ಮಣ ಸಮ್ಮೇಳನ ’ವನ್ನು ಆಯೋಜಿಸಲಿದೆ ಎಂದರು.

ಬಿಎಸ್ಪಿ ಅಧಿಕಾರಕ್ಕೆ ಬಂದಾಗ ಬ್ರಾಹ್ಮಣ ಸಮುದಾಯದ ಹಿತಾಸಕ್ತಿಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲಿದೆ ಎಂದ ಮಾಯಾವತಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣರು ಬಿಜೆಪಿಗೆ ಮತ ಚಲಾಯಿಸುವುದಿಲ್ಲ ಎಂದು ಆಶಿಸಿದ್ದೇನೆ. ಬ್ರಾಹ್ಮಣ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಬಿಎಸ್ಪಿ ಆಡಳಿತದಲ್ಲಿ ಮಾತ್ರ ಅವರ ಹಿತಾಸಕ್ತಿಗಳು ಸುರಕ್ಷಿತವಾಗಿರುತ್ತವೆ ಎಂದು ಅವರಿಗೆ ಭರವಸೆ ನೀಡಲು ಜು.23ರಂದು ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಮಿಶ್ರಾ ಅವರ ನೇತೃತ್ವದಲ್ಲಿ ಅಯೋಧ್ಯೆಯಿಂದ ಅಭಿಯಾನವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ದಲಿತ ಸಮುದಾಯದಂತೆ ಬ್ರಾಹ್ಮಣ ಸಮುದಾಯವೂ ತನ್ನ ಪಕ್ಷವನ್ನು ಬೆಂಬಲಿಸಬೇಕು ಎಂದ ಅವರು,ಬಿಜೆಪಿಯ ಹಣಬಲ ಮತ್ತು ತಮ್ಮ ಮೇಲೆ ಪ್ರಭಾವ ಬೀರಲು ಇತರ ವಿಧಾನಗಳ ಹೊರತಾಗಿಯೂ ದಲಿತ ಸಮುದಾಯವು ಬಿಎಸ್ಪಿಗೆ ನಿಷ್ಠವಾಗಿಯೇ ಉಳಿದಿದೆ. ದಲಿತರ ಮೇಲೆ ಪ್ರಭಾವ ಬೀರಲು ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ ಮಾರ್ಗಗಳನ್ನೂ ಬಳಸಿದ್ದವು. ಹಣಬಲದ ಬಳಕೆ,ಸುಳ್ಳು ಭರವಸೆಗಳು ಅಷ್ಟೇ ಅಲ್ಲ,ದಲಿತ ಸಮುದಾಯದ ಮೆಲೆ ಪ್ರಭಾವ ಬೀರಲು ಮಾಧ್ಯಮಗಳನ್ನೂ ಅವರು ಬಳಸಿಕೊಂಡಿದ್ದರು. ಆದರೆ ದಲಿತರು ಈ ಸುಳ್ಳು ಭರವಸೆಗಳಿಗೆ ಮರುಳಾಗಿರಲಿಲ್ಲ ಎನ್ನುವುದು ಒಳ್ಳೆಯ ವಿಷಯ.ಕಳೆದ ವಿಧಾನಸಭಾ ಚುನಾವಣೆಯಲಿ ನಾವು ಸೋತೆವಾದರೂ ಪಕ್ಷಕ್ಕೆ ದಲಿತ ಸಮುದಾಯದ ಮತಗಳು ಕಡಿಮೆಯಾಗಿರಲಿಲ್ಲ. ದಲಿತರು ಬಿಎಸ್ಪಿಗೂ ಮತಗಳನ್ನು ಹಾಕಿರಲಿಲ್ಲ ಎಂದರು.

ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಕ್ಕಾಗಿ ಬ್ರಾಹ್ಮಣ ಸಮುದಾಯವು ಪಶ್ಚಾತ್ತಾಪ ಪಡುತ್ತಿದೆ. ಬಿಜೆಪಿ ಜನರನ್ನು ಹಾದಿತಪ್ಪಿಸಲು ಮತ್ತೆ ಪ್ರಯತ್ನಗಳನ್ನು ನಡೆಸಲಿದೆ ಎಂದ ಮಾಯಾವತಿ,ಆದರೆ 2007ರಲ್ಲಿ ಮಾಡಿದಂತೆ ಬ್ರಾಹ್ಮಣ ಸಮುದಾಯವು ತನ್ನ ಪಕ್ಷವನ್ನು ಬೆಂಬಲಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಯೋಗಿ ಆದಿತ್ಯನಾಥ ಸರಕಾರವು ತಮ್ಮನ್ನು ಕಡೆಗಣಿಸುತ್ತಿದೆ ಎಂಬ ಭಾವನೆ ಬ್ರಾಹ್ಮಣ ಸಮುದಾಯದಲ್ಲಿ ಬೆಳೆಯುತ್ತಿದೆ ಎಂಬ ವರದಿಗಳ ನಡುವೆಯೇ ಬ್ರಾಹ್ಮಣರಿಗೆ ಮಾಯಾವತಿ ಈ ವಿನಂತಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News