ಅಸ್ಸಾಂನಲ್ಲಿ ಮುಸ್ಲಿಂ ಪ್ರಾಬಲ್ಯ ಪ್ರದೇಶಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ 'ಜನಸಂಖ್ಯಾ ಸೇನೆ'

Update: 2021-07-20 16:58 GMT

ಗುವಾಹಟಿ,ಜು.21: ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿ ಸರಕಾರದ ಜನನ ನಿಯಂತ್ರಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸುಮಾರು 10 ಸಾವಿರ ಮಂದಿ ಹೆಚ್ಚುವರಿ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗುವುದೆಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ತಿಳಿಸಿದ್ದಾರೆ.
  
ಸೋಮವಾರ ನಡೆದ ಅಸ್ಸಾಂ ವಿಧಾನಸಭಾ ಕಲಾಪದ ವೇಳೆ ಮಾತನಾಡಿದ ಅವರು, ಹಿಂದುಳಿದ ಪ್ರದೇಶಗಳಲ್ಲಿ ಜನನ ನಿಯಂತ್ರಣ ಕ್ರಮಗಳು ಹಾಗೂ ಬಾಲ್ಯ ವಿವಾಹದಂತಹ ವಿಷಯಗಳ ಬಗ್ಗೆ ಅರಿವು ಮೂಡಿಸಲು ಸುಮಾರು 1 ಸಾವಿರ ಮಂದಿ ಸ್ಥಳೀಯ ಯುವಜನರನ್ನು ನಿಯೋಜಿಸಲಾಗುವುದು ಎಂದರು.
 
ಇದೇ ವೇಳೆ ಮೂಲ ನಿವಾಸಿ ಮುಸ್ಲಿಮರು ಹಾಗೂ ಚಾರ್ಚಪೋರಿ ಪ್ರಾಂತಗಳ ಮುಸ್ಲಿಂ ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ ಕುರಿತ ಚರ್ಚೆಗಳನ್ನು ಪ್ರತ್ಯೇಕವಾಗಿ ನಡೆಸಲಾಗುವುದ ಎಂದು ಮುಖ್ಯಮಂತ್ರಿ ತಿಳಿಸಿದರು. ಅಸ್ಸಾಂನ ನಿವಾಸಿಗಳೆಲ್ಲರನ್ನೂ ಒಳಗೊಂಡಂತಹ ಅಭಿವೃದ್ಧಿಯನ್ನು ಖಾತರಿಪಡಿಸಲು ರಾಜ್ಯ ಸರಕಾರವು ವಿವಿಧ ಅಲ್ಪಸಂಖ್ಯಾತ ಸಮುದಾಯಗಳ ಜೊತೆ ಸಮಾಲೋಚನೆ ನಡೆಸುವ ಯೋಜನೆಗಳನ್ನು ಸರಕಾರ ಹೊಂದಿರುವುದಾಗಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಚಂದ್ರ ಮೋಹನ್ ಪಾತೊವರಿ ತಿಳಿಸಿದ್ದಾರೆ.
   
2001ರಿಂದ 2011ರ ನಡುವೆ ಅಸ್ಸಾಂನಲ್ಲಿ ಹಿಂದುಗಳ ಜನಸಂಖ್ಯಾ ಬೆಳವಣಿಗೆ ದರವು ಶೇ.10ರಷ್ಟಿದ್ದರೆ, ಮುಸ್ಲಿಮರಲ್ಲಿ ಶೇ.29 ಆಗಿದೆ ಎಂದು ಶರ್ಮಾ ತಿಳಿಸಿದ್ದಾರೆ. ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯಾ ಏರಿಕೆಯು ಅವರ ಬಡತನಕ್ಕೆ ಕಾರಣವಾಗಿದೆ ಹಾಗೂ ಆ ಸಮುದಾಯದಲ್ಲಿ ಜಮೀನಿಗೆ ಸಂಬಂಧಿಸಿದಂತೆ ಒತ್ತಡವುಂಟಾಗಿದೆ ಎಂದರು.
  
ಇನ್ನೊಂದೆಡೆ ಹಿಂದೂಗಳಲ್ಲಿ ಜನಸಂಖ್ಯಾ ಬೆಳವಣಿಗೆಯಲ್ಲಿ ಕುಸಿತವಾಗಿದ್ದು ಇದರಿಂದಗಿ ಅವರ ಜೀವನಮಟ್ಟದಲ್ಲಿ ಸುಧಾರಣೆಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಆದರೆ ಜಮೀನಿನ ಕೊರತೆಯ ಒತ್ತಡದಿಂದಾಗಿ ಹಲವಾರು ಮುಸ್ಲಿಮರು ಅರಣ್ಯಗಳಲ್ಲಿ ಹಾಗೂ ಸರಕಾರಿ ಜಮೀನಿನಲ್ಲಿ ನೆಲೆಸುವಂತಾಗಿದೆ. ಹೀಗಾಗಿ ಮುಸ್ಲಿಮರಲ್ಲಿ ಜನಸಂಖ್ಯಾ ನಿಯಂತ್ರಣವು ಅತ್ಯಂತ ಗಂಭೀರವಾದ ಅಗತ್ಯವಾಗಿದೆ ಎಂದವರು ಹೇಳಿದರು.

ಮುಸ್ಲಿಂ ಜನಸಂಖ್ಯಾ ಬೆಳವಣಿಗೆಯಲ್ಲೂ ಕುಸಿತ

ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿದೆಯೆಂದು ಸಂಘಪರಿವಾರದ ಸಂಘಟನೆಗಳು ಆರೋಪಿಸುತ್ತಿದ್ದರೂ, ಜನಗಣತಿಯ ದತ್ತಾಂಶಗಳು ತೀರಾ ವಿಭಿನ್ನವಾದ ಚಿತ್ರಣವನ್ನು ಮುಂದಿಡುತ್ತವೆ.
     
1991ರಿಂದ 2001ರವರೆಗೆ ಭಾರತದಲ್ಲಿ ಮುಸ್ಲಿಮ್ ಜನಸಂಖ್ಯೆಯಲ್ಲಿ ಶೇ.29.3ರಷ್ಟು ಏರಿಕೆಯಾಗಿತ್ತು. ಆದರೆ 2001ರಿಂದ 2011ರ ಅವಧಿಯಲ್ಲಿ ಮುಸ್ಲಿಂ ಜನಸಂಖ್ಯಾ ಬೆಳವಣಿಗೆ ದರವು ಶೇ.24.4 ಶೇಕಡವಾಗಿದ್ದು, ಹಿಂದಿನ ದಶಕಕ್ಕಿಂತ ಹೆಚ್ಚು ಕಡಿಮೆ ಶೇ.5ರಷ್ಟು ಕುಸಿತವನ್ನು ಕಂಡಿದೆ. ಅಷ್ಟೇ ಅಲ್ಲದೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯಾ ಬೆಳವಣಿಗೆಯು ಹಿಂದೂ ಜನಸಂಖ್ಯೆಯ ಬೆಳವಣಿಗೆಗಿಂತ ಹೆಚ್ಚು ನಿಧಾನಗತಿಯನ್ನು ಕಾಣತೊಡಗಿದೆ ಎಂದು ಜನಗಣತಿಯ ದತ್ತಾಂಶಗಳು ಬಹಿರಂಗಪಡಿಸಿವೆ.

ಮುಸ್ಲಿಂ ಜನಸಂಖ್ಯಾ ಬೆಳವಣಿಗೆಯು ಹಿಂದೂ ಜನಸಂಖ್ಯೆಗಿಂತ ಹೆಚ್ಚು ವೇಗದಲ್ಲಿ ಬೆಳೆದಿದೆಯಾದರೂ ಎರಡು ಸಮುದಾಯಗಳ ಜನಸಂಖ್ಯಾ ಬೆಳವಣಿಗೆ ದರದ ಅಂತರದಲ್ಲಿ ಕಡಿಮೆಯಾಗತೊಡಗಿದೆ. ಭಾರತದಲ್ಲಿ ಹಿಂದೂಗಳು ಒಟ್ಟು ಜನಸಂಖ್ಯೆಯ ಶೇ.79.8ರಷ್ಟಿದ್ದರೆ, ಮುಸ್ಲಿಮರು ಶೇ.14.2 ರಷ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News