ಕೋವಿಡ್ ಸಂದರ್ಭ ದೇಶದಲ್ಲಿ ಹೆಚ್ಚುವರಿ ಸಾವು ಅಧಿಕೃತ ಸಾವಿನ ಸಂಖ್ಯೆಗಿಂತ 10 ಪಟ್ಟು ಅಧಿಕ: ವರದಿ
Update: 2021-07-20 22:21 IST
ಹೊಸದಿಲ್ಲಿ, ಜು. 20: ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭ ಅಧಿಕೃತ ಸಾವಿನ ಸಂಖ್ಯೆಗಿಂತ 10 ಪಟ್ಟು ಹೆಚ್ಚು ಸಾವು ಸಂಭವಿಸಿದೆ ಎಂದು ವರದಿಯೊಂದು ತಿಳಿಸಿದೆ. ದೇಶದಲ್ಲಿ ಕೋವಿಡ್ನಿಂದಾದ ಅಧಿಕೃತ ಸಾವಿನ ಸಂಖ್ಯೆ 414,000ಕ್ಕಿಂತಲೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಹೆಚ್ಚಿನ ತಜ್ಞರು ಅಭಿಪ್ರಾಯಿಸಿದ್ದಾರೆ. ಆದರೆ, ಇದು ಉತ್ಪ್ರೇಕ್ಷಿತ ಹಾಗೂ ದಾರಿ ತಪ್ಪಿಸುವ ಹೇಳಿಕೆ ಎಂದು ಕೇಂದ್ರ ಸರಕಾರ ಹೇಳಿದೆ.
ಅಮೆರಿಕ ಮೂಲದ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಸಂಪೂರ್ಣ ಚಿತ್ರವನ್ನು ಪಡೆಯಲು ಮೂರು ವಿಭಿನ್ನ ಮೂಲದ ದತ್ತಾಂಶಗಳನ್ನು ಪರಿಶೀಲನೆ ನಡೆಸಿ ಈ ವರದಿ ನೀಡಿದೆ. 2020 ಜನವರಿ ಹಾಗೂ ಜೂನ್ 2021 ಜೂನ್ ನಡುವೆ ದಾಖಲಾದ ಹಾಗೂ ನಿರೀಕ್ಷಿಸಲಾದ ಹೆಚ್ಚುವರಿ ಸಾವಿನ ಸಂಖ್ಯೆ ಅಂತರ 30 ಲಕ್ಷ ಹಾಗೂ 47 ಲಕ್ಷದ ನಡುವೆ ಇದೆ ಎಂದು ಮಂಗಳವಾರ ಬಿಡುಗಡೆ ಮಾಡಲಾದ ವರದಿ ಹೇಳಿದೆ.