ಬಕ್ರೀದ್ ಸಂದೇಶ: ಸತ್ಯವೇ ಸರ್ವಸ್ವ, ಸತ್ಯಕ್ಕಾಗಿ ಸರ್ವಸ್ವ

Update: 2021-07-20 18:40 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಬಕ್ರೀದ್ ವಿಶೇಷ ಲೇಖನದ ಆಡಿಯೋ ಆಲಿಸಿ 

Full View

ಬೆಲೆ ಅರಿಯದಿದ್ದರೆ ಅತ್ಯಮೂಲ್ಯ ವಜ್ರ ಕೂಡಾ ಇನ್ನೊಂದು ಕಲ್ಲಷ್ಟೇ.

ಪ್ರವಾದಿ ಇಬ್ರಾಹೀಮ್ (ಅ)ರ ಬದುಕೂ ಅಷ್ಟೇ. ಅವರದ್ದು ಇನ್ನೊಂದು ಪೌರಾಣಿಕ ಪಾತ್ರವಲ್ಲ. ಕ್ರೈಸ್ತ ಮತ್ತು ಮುಸ್ಲಿಮ್ ಎಂಬ ಜಗತ್ತಿನ ಎರಡು ಅತಿದೊಡ್ಡ ಸಮುದಾಯಗಳು ಮಾತ್ರವಲ್ಲದೆ ಯಹೂದಿ ಎಂಬ ಇನ್ನೊಂದು ಸಮುದಾಯದವರು ಕೂಡಾ ಆದರ್ಶಪುರುಷರೆಂದು ಗೌರವಿಸುವ ಐತಿಹಾಸಿಕ ವ್ಯಕ್ತಿತ್ವ ಅವರದ್ದು. ಕೇವಲ ಮುಗ್ಧ ಶ್ರದ್ಧೆಯಿಂದ ಕೇಳುವ ಅಥವಾ ಓದುವವರಿಗೆ ಅವರ ಬದುಕು ಕೇವಲ ಇನ್ನೊಂದು ಒಳ್ಳೆಯ ಕಥೆಯಷ್ಟೇ. ಸ್ಫೂರ್ತಿ, ಮಾರ್ಗದರ್ಶನ ಮತ್ತು ಪಾಠಗಳನ್ನು ಹುಡುಕುತ್ತಾ ಜಿಜ್ಞಾಸೆಯಿಂದ ಇಣುಕಿದರೆ ಮಾತ್ರ ಅಲ್ಲಿ ಹಲವು ಸಾರ್ವಕಾಲಿಕ ಪಾಠಗಳ ಒಂದು ದೊಡ್ಡ ಸರಮಾಲೆಯೇ ಇದೆ.

ಇಬ್ರಾಹೀಮರ ಕಥೆಯಲ್ಲಿ ಸಿಗುವ ಕೆಲವು ಮರೆಯಲಾಗದ ಅಂಶಗಳು:

‘‘ನಿಜಕ್ಕೂ ಇಬ್ರಾಹೀಮರು ಸ್ವತಃ ತಾವೇ ಒಂದು ಸಮುದಾಯ ವಾಗಿದ್ದರು. ಅವರು ಸಂಪೂರ್ಣ ಏಕಾಗ್ರಚಿತ್ತರಾಗಿ ಅಲ್ಲಾಹನಿಗೆ ವಿಧೇಯರಾಗಿದ್ದರು. ಅವರು ಬಹುದೇವಾರಾಧಕರಾಗಿರಲಿಲ್ಲ.’’ (16;120)

ಇಬ್ರಾಹೀಮರು ಕ್ರಿ.ಪೂ. ಸುಮಾರು 22ನೇ ಶತಮಾನದಲ್ಲಿ ದಕ್ಷಿಣ ಇರಾಕ್‌ನಲ್ಲಿ, ವಿಗ್ರಹ ನಿರ್ಮಿಸುವ ಪುರೋಹಿತರೊಬ್ಬರ ಮನೆಯಲ್ಲಿ ಜನಿಸಿದವರು. ಆದರೆ, ತಮ್ಮ ವಂಶದ ಪರಂಪರಾಗತ ಆಚರಣೆಗಳನ್ನು ಕುರುಡಾಗಿ ಅನುಕರಿಸುವ ಬದಲು ಆ ಆಚರಣೆಗಳ ಹಿಂದಿನ ತರ್ಕವನ್ನು ಪ್ರಶ್ನಿಸುವ ಧೈರ್ಯ ತೋರಿದವರು. ತಮ್ಮ ವಂಶದವರು ಮತ್ತು ಊರಿನವರ ಮೌಢ್ಯಗಳ ವಿರುದ್ಧ, ಮಾತ್ರವಲ್ಲ ತಮ್ಮ ಕಾಲದ ದೊರೆಯ ಅಹಂಭಾವದ ವಿರುದ್ಧ ಬಂಡಾಯವೆದ್ದವರು. ತರ್ಕದ ಆಧಾರದಲ್ಲೇ ಮೌಢ್ಯವನ್ನು ತಿರಸ್ಕರಿಸಿ, ಸತ್ಯದ ಶೋಧಕ್ಕೆ ಹೊರಟವರು. ಪ್ರಕೃತಿಯನ್ನು ಸೂಕ್ಷ್ಮವಾಗಿ ವೀಕ್ಷಿಸಿ ಸ್ಪಂದಿಸಿದವರು. ಪ್ರಕೃತಿಯ ನಿಗೂಢತೆಗಳ ಮುಂದೆ ವಿಸ್ಮಿತರಾಗಿ ಅವುಗಳ ಹಿಂದಿನ ಸುಪ್ತ ಸತ್ಯಗಳನ್ನು ಅರಸಿ ಹೊರಟವರು.

ಈ ಕುರಿತು ಪವಿತ್ರ ಕುರ್‌ಆನ್‌ನ ಹೇಳಿಕೆ ಗಮನಾರ್ಹವಾಗಿದೆ: ‘‘ಅವರು ತಮ್ಮ ತಂದೆಯೊಡನೆ ಕೇಳಿದ್ದರು: ನನ್ನ ಅಪ್ಪಾ, ಏನನ್ನೂ ಕೇಳಲಾಗದ, ಏನನ್ನೂ ಕಾಣಲಾಗದ ಮತ್ತು ನಿಮಗೆ ಯಾವುದೇ ಉಪಕಾರ ಮಾಡಲಾಗದ ವಸ್ತುಗಳನ್ನು ನೀವೇಕೆ ಪೂಜಿಸುತ್ತೀರಿ?’’ (19:42)

‘‘ಅವನು (ಅವರ ತಂದೆ) ಹೇಳಿದನು: ಓ ಇಬ್ರಾಹೀಮ್, ನೀನೇನು ನನ್ನ ದೇವರುಗಳಿಂದ ದೂರವಾಗಿ ಬಿಟ್ಟೆಯಾ? ನೀನು ಈ ನಿಲುವನ್ನು ತೊರೆಯದಿದ್ದರೆ ನಾನು ನಿನ್ನನ್ನು ಕಲ್ಲೆಸೆದು ಕೊಲ್ಲುವೆನು. ನೀನು ಶಾಶ್ವತವಾಗಿ ನನನನ್ನು ಬಿಟ್ಟು ತೊಲಗು.’’ (19:46)

***

ಒಂದು ಹಂತದಲ್ಲಿ ಸತ್ಯಾನ್ವೇಷಿ ಇಬ್ರಾಹೀಮರು, ನಕ್ಷತ್ರದ ಸೊಬಗಿಗೆ ಮಾರು ಹೋಗಿ ಅದುವೇ ದೇವರಿರಬಹುದೆಂದು ತರ್ಕಿಸಿದ್ದುಂಟು. ಅದು ಕಣ್ಮರೆಯಾದಾಗ, ಅದರ ಚಲನೆ ಸ್ವತಂತ್ರವಲ್ಲ, ಅದು ಯಾರದೋ ನಿಯಂತ್ರಣದಲ್ಲಿದೆ ಎಂದು ಅರಿತು, ಅಸ್ತಮಿಸುವವರು, ದೇವರಾಗಲು ಸಾಧ್ಯವಿಲ್ಲವೆಂದು ತೀರ್ಮಾನಿಸಿ ಅದನ್ನು ಬಿಟ್ಟವರು. ಸತ್ಯಾನ್ವೇಷಣೆಯ ಆವೇಶದಲ್ಲಿ ಅವರು ಚಂದ್ರನ ಬಗ್ಗೆಯೂ ಅದು ದೇವರಿರಬಹುದು ಎಂದು ತರ್ಕಿಸಿದ್ದಿದೆ. ಹಾಗೆಯೇ, ಸೂರ್ಯನ ಪ್ರತಾಪ ಕಂಡು ಕೂಡಾ ಅವರು ತುಂಬಾ ಪ್ರಭಾವಿತರಾಗಿದ್ದರು. ಆದರೆ ಅವುಗಳ ನಿಯಂತ್ರಿತ ಸ್ವರೂಪ ಕಂಡು, ತೃಪ್ತರಾಗದೆ ಅವುಗಳನ್ನೂ ತೊರೆದು, ಇವುಗಳನ್ನೆಲ್ಲ ಸೃಷ್ಟಿಸಿ ನಿಯಂತ್ರಿಸುತ್ತಿರುವವನು ಯಾರಿದ್ದರೂ ಅವನು ಮಾತ್ರ ನನಗೆ ದಾರಿ ತೋರಬಲ್ಲನೆಂದು ನಿರ್ಧರಿಸಿ ಅವನಿಗೆ ಮೊರೆ ಹೋದವರು.

ಕೊನೆಗೂ ಅವರ ಅಪೇಕ್ಷೆಯಂತೆ ಅವರಿಗೆ ದಿವ್ಯ ಮಾರ್ಗದರ್ಶನ ಪ್ರಾಪ್ತವಾಯಿತು. ಸೃಷ್ಟಿಕರ್ತನನ್ನು ಗುರುತಿಸಿ ಅವನಿಗೆ ಶರಣಾಗಿ ಅವನು ತೋರಿದ ಹಾದಿಯಲ್ಲಿ ನಡೆಯುವುದರಲ್ಲೇ ಸಾರ್ಥಕ್ಯ ಅಡಗಿದೆ ಎಂಬುದನ್ನು ಅವರು ಅರಿತರು. ಅದನ್ನು ಜಗತ್ತಿಗೆ ಉಪದೇಶಿಸಿದರು. ಮಾತ್ರವಲ್ಲ, ಅಂತಹ ಬದುಕಿನ ಪರಮೋಚ್ಚ ಮಾದರಿಯನ್ನು ಸ್ವತಃ ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟರು.

***

ಜನಪ್ರಿಯ ದೇವರುಗಳನ್ನೆಲ್ಲ ತಿರಸ್ಕರಿಸಿದ್ದಕ್ಕಾಗಿ ಇಬ್ರಾಹೀಮರನ್ನು ತನ್ನ ಮುಂದೆ ವಿಚಾರಣೆಗೆ ನಿಲ್ಲಿಸಿದ್ದ ಅವರ ಕಾಲದ ಸಾಮ್ರಾಟ ‘‘ಜೀವ ನೀಡುವವನು ಮತ್ತು ಮರಣ ನೀಡುವವನು ನಾನು’’ ಎನ್ನುವ ಮೂಲಕ ತಾನೇ ದೇವರೆಂಬಂತೆ ಅಹಂಕಾರ ಮೆರೆದಾಗ ಅವರು ಸುಮ್ಮನಿರಲಿಲ್ಲ. ‘‘ಅಲ್ಲಾಹನು ಸೂರ್ಯನನ್ನು ಪೂರ್ವದಿಂದ ಉದಯಿಸುತ್ತಾನೆ, ನೀನು ಅದನ್ನು ಪಶ್ಚಿಮದಿಂದ ಉದಯಿಸಿ ತೋರಿಸು’’ (ಕುರ್‌ಆನ್ 2:258) ಎಂದು ಅವನ ಆಸ್ಥಾನದಲ್ಲೇ ಅವನಿಗೆ ಸವಾಲೆಸೆದರು. ‘‘ನಿನ್ನನ್ನು ಕಲ್ಲೆಸೆದು ಕೊಲ್ಲುತ್ತೇನೆ’’ ಎಂದು ತನ್ನ ತಂದೆ ಹೇಳಿದಾಗ ಅವರು ಅಂಜಿರಲಿಲ್ಲ. ಹಾಗೆಯೇ, ಸಾಮ್ರಾಟನು ಬೃಹತ್ ಅಗ್ನಿಕುಂಡವನ್ನು ನಿರ್ಮಿಸಿ ‘‘ನಿನ್ನನ್ನು ಬೆಂಕಿಗೆಸೆಯುತ್ತೇನೆ’’ ಎಂದಾಗಲೂ ಅವರು ಅಳುಕಲಿಲ್ಲ. ಸತ್ಯವನ್ನು ಬಿಟ್ಟುಕೊಟ್ಟು ಗಳಿಸುವ ಜೀವ ಅವರಿಗೆ ಬೇಕಿರಲಿಲ್ಲ.

ಇಬ್ರಾಹೀಮರ ಮಟ್ಟಿಗೆ ಸತ್ಯ ಎಂಬುದು, ಕೇವಲ ಒಂದು ಆಸಕ್ತಿಯ ವಿಷಯವಾಗಿರಲಿಲ್ಲ. ಬಿಡುವಿನ ವೇಳೆ ತೊಡಗಿಕೊಳ್ಳುವ ಚಟುವಟಿಕೆಯಾಗಿರಲಿಲ್ಲ. ಅವರು ಸತ್ಯವನ್ನು ಹವ್ಯಾಸವಾಗಿಸದೆ ತಮ್ಮ ಸರ್ವಸ್ವವಾಗಿಸಿಕೊಂಡಿದ್ದರು. ತಮಗೆ ಸತ್ಯವು ಮನವರಿಕೆಯಾದ ಬಳಿಕ ಕ್ಷಣಮಾತ್ರಕ್ಕೂ ಅವರು ಅದನ್ನು ಬಿಟ್ಟುಕೊಟ್ಟವರಲ್ಲ. ತೀರಾ ಪ್ರತಿಕೂಲ ಸನ್ನಿವೇಶದಲ್ಲೂ ಸತ್ಯಕ್ಕೆ ನಿಷ್ಠರಾಗಿ ಗಟ್ಟಿ ನಿಂತವರು. ಸತ್ಯಕ್ಕಾಗಿ ನಾಡು, ಕುಟುಂಬ ಮಾತ್ರವಲ್ಲ ತಮ್ಮ ಸಾಕ್ಷಾತ್ ಜೀವವನ್ನೇ ಅರ್ಪಿಸಲು ಸದಾ ಸನ್ನದ್ಧರಾಗಿದ್ದವರು. ಏಕೆಂದರೆ ಸತ್ಯವು ಅವರಿಗೆ ಬಳುವಳಿಯಾಗಿ ಸಿಕ್ಕಿರಲಿಲ್ಲ. ಸತ್ಯಕ್ಕಾಗಿ ಭಾರೀ ಬೆಲೆ ತೆತ್ತಿದ್ದ ಅವರು ಅದರ ಮೌಲ್ಯವನ್ನು ಸರಿಯಾಗಿಯೇ ಗುರುತಿಸಿದ್ದರು. ಸತ್ಯನಿಷ್ಠೆಯ ಪರಮೋಚ್ಚ ಮಾದರಿಯಾಗಿ ಬದುಕಿದರು. ಆದ್ದರಿಂದಲೇ, ಕುರ್‌ಆನ್‌ನಲ್ಲಿ ಅವರನ್ನು ‘ಖಲೀಲುಲ್ಲಾಹ್’ (ಅಲ್ಲಾಹನ ಪರಮಾಪ್ತ) ಎಂದು ಗುರುತಿಸಲಾಗಿದೆ. (4:125)

***

ಇಬ್ರಾಹೀಮರು, ತಾನು ಅರಿತುಕೊಂಡ ಸತ್ಯವನ್ನು ತನ್ನ ಸಮಕಾಲೀನರಿಗೆ ಮನವರಿಕೆ ಮಾಡಿಸಲಿಕ್ಕಾಗಿ ಅವರ ಜೊತೆ ಸಂವಾದ ನಡೆಸಿದವರು. ತನ್ನ ನಂಬಿಕೆಗಳ ಪರವಾಗಿ ತರ್ಕಬದ್ಧ ವಾದಗಳನ್ನು ಮಂಡಿಸಿದವರು. ಏಕದೇವತ್ವವನ್ನು ಪರಮ ಸತ್ಯವೆಂದು ಅಂಗೀಕರಿಸಿದ ಬಳಿಕ, ಆ ಏಕದೇವರ ಎಲ್ಲ ಸೂಚನೆಗಳನ್ನೂ ಆದೇಶವೆಂದು ಪಾಲಿಸಿದವರು. ಸತ್ಯದ ಹಾದಿಯಲ್ಲಿ ತಮ್ಮ ಕುಟುಂಬ ಹಾಗೂ ನಾಡನ್ನು ತೊರೆದು ವಲಸೆ ಹೋದವರು. ತೀರಾ ನಿರ್ಜನ ಮರುಭೂಮಿ ಪ್ರದೇಶದಲ್ಲಿ ತಮ್ಮ ಸಂಸಾರವನ್ನು ನೆಲೆಸಿದವರು.

ಇಂದು ಪ್ರತಿದಿನ ಸಾವಿರಾರು ಮಂದಿ ಸಂದರ್ಶಿಸುವ ಪವಿತ್ರ ‘ಕಅಬಾ’ ಮಸೀದಿಯನ್ನು ದೇವಾದೇಶಕ್ಕನುಸಾರ, ನಿರಾಕಾರನಾದ ಏಕದೇವನ ಉಪಾಸನೆಗೆ ಮೀಸಲಾಗಿರುವ ಆರಾಧನಾ ಕೇಂದ್ರವಾಗಿ ನಿರ್ಮಿಸಿದವರು ಇಬ್ರಾಹೀಮರು. ಮಾತ್ರವಲ್ಲ, ಆ ಮಸೀದಿ ಇರುವ ‘ಮಕ್ಕಾ’ ಎಂಬ ಆಧುನಿಕ ಜಗತ್ತಿನ ಒಂದು ಪ್ರಮುಖ ನಗರದ ಸ್ಥಾಪಕರು ಕೂಡಾ ಇಬ್ರಾಹೀಮರೇ. ಆ ನಗರದ ಸ್ಥಾಪನೆಯ ಪ್ರಕ್ರಿಯೆಯನ್ನು ಆರಂಭಿಸುವ ವೇಳೆ ಅವರು ಮಾಡಿದ ಒಂದು ಪ್ರಾರ್ಥನೆಯನ್ನು ಕುರ್‌ಆನ್‌ನಲ್ಲಿ ದಾಖಲಿಸಲಾಗಿದೆ:

‘‘ನನ್ನೊಡೆಯಾ, ಈ ನಾಡನ್ನು ಶಾಂತಿಯ ನಾಡಾಗಿ ಮಾಡು ಹಾಗೂ ನನ್ನನ್ನು ಮತ್ತು ನನ್ನ ಸಂತತಿಯನ್ನು ಮೂರ್ತಿ ಪೂಜೆಯಿಂದ ದೂರವಿಡು.’’ (ಕುರ್‌ಆನ್ - 14:35)

ಆದ್ದರಿಂದಲೇ, ತಾವಿರುವ ಮತ್ತು ತಾವಿಲ್ಲದ ಎಲ್ಲ ನಾಡುಗಳನ್ನು ಶಾಂತಿಯ ನಾಡಾಗಿಡುವುದು ತಮ್ಮ ಕರ್ತವ್ಯ ಎಂದು ಅವರ ಎಲ್ಲ ಪ್ರಾಮಾಣಿಕ ಅನುಯಾಯಿಗಳು ನಂಬುತ್ತಾರೆ.

ಪ್ರತಿವರ್ಷ ಲಕ್ಷಾಂತರ ಜನರು ಭಾಗವಹಿಸುವ ‘ಹಜ್’ ಎಂಬ, ಸತ್ಯ ನಿಷ್ಠ, ಏಕದೇವಾರಾಧಕರ ಜಾಗತಿಕ ಸಮ್ಮೇಳನಕ್ಕೆ ಪ್ರಥಮ ಬಾರಿ ಕರೆ ನೀಡಿದವರು ಅವರು. ಆ ಕರೆ ಇಂದಿಗೂ ಜೀವಂತವಿದೆ. ಪ್ರಭಾವಶಾಲಿಯಾಗಿದೆ. 2019ರಲ್ಲಿ 160 ದೇಶಗಳ, 25 ಲಕ್ಷಕ್ಕೂ ಹೆಚ್ಚು ಮಂದಿ ಇಲ್ಲಿ ಹಜ್ ಯಾತ್ರೆ ಮಾಡಿದ್ದರು. (ಇವರಲ್ಲಿ 11 ಲಕ್ಷಕ್ಕೂ ಹೆಚ್ಚು ಮಹಿಳೆಯರು). ಹಜ್, ವರ್ಷಕ್ಕೆ ಒಮ್ಮೆ ಮಾತ್ರ, ದುಲ್ಹಜ್ ಎಂಬ, ವರ್ಷದ ಕೊನೆಯ ತಿಂಗಳಲ್ಲಿ ನಡೆಯುತ್ತದೆ. ಪ್ರಯಾಣಕ್ಕೆ ಬೇಕಾಗುವಷ್ಟು ಆರ್ಥಿಕ ಮತ್ತು ಆರೋಗ್ಯ ಸಾಮರ್ಥ್ಯ ಉಳ್ಳ ಎಲ್ಲ ಮುಸ್ಲಿಮರ ಮಟ್ಟಿಗೆ ಜೀವನದಲ್ಲೊಮ್ಮೆ ಹಜ್ ಯಾತ್ರೆಯು ಕಡ್ಡಾಯವಾಗಿದೆ. ಉಳಿದಂತೆ, ವರ್ಷವೆಲ್ಲಾ ‘ಉಮ್ರಾ’ ಎಂಬ ಐಚ್ಛಿಕ ಯಾತ್ರೆಗಾಗಿ ಲಕ್ಷಾಂತರ ಜನ ಜಗತ್ತಿನ ಹೆಚ್ಚಿನೆಲ್ಲಾ ದೇಶಗಳಿಂದ ಮಕ್ಕಾ ಪಟ್ಟಣಕ್ಕೆ ಬರುತ್ತಲೇ ಇರುತ್ತಾರೆ. ಅಲ್ಲಿ ನಿತ್ಯವೂ ಜಗತ್ತಿನ ನಾನಾ ಮೂಲೆಗಳಿಂದ ಬಂದ ಯಾತ್ರಿಕರ ಜನಜಂಗುಳಿ ಇರುತ್ತದೆ. ಕಅಬಾ ಮಸೀದಿ, ಮಕ್ಕಾ ಪಟ್ಟಣ. ಅಲ್ಲಿನ ಪರಿಸರ, ಅಲ್ಲಿಯ ಐತಿಹಾಸಕ ಸ್ಥಳಗಳು, ಸ್ಮಾರಕಗಳು- ಇವೆಲ್ಲಾ ಯಾತ್ರಿಕರಿಗೆ ಪ್ರವಾದಿ ಮುಹಮ್ಮದ್ (ಸ) ಮತ್ತವರ ಮುತ್ತಾತ ಇಬ್ರಾಹೀಮರ ಬದುಕು, ಆದರ್ಶ ಮತ್ತು ಭವ್ಯ ಪರಂಪರೆಯನ್ನು ನೆನಪಿಸಿ ಸತ್ಯವೇ ಸರ್ವಸ್ವ ಮತ್ತು ಸತ್ಯಕ್ಕಾಗಿ ಸರ್ವಸ್ವ ಎಂಬ ಧ್ಯೇಯಕ್ಕೆ ಬದ್ಧರಾಗಲು ಅವರಿಗೆ ಅದಮ್ಯ ಪ್ರೇರಣೆ ಒದಗಿಸುತ್ತವೆ.

***

ಕೆಲವರಿಗೆ ಇಬ್ರಾಹೀಮರ ಚರಿತ್ರೆಯನ್ನೆಲ್ಲಾ ಓದಿದ ಬಳಿಕ ಇಬ್ರಾಹೀಮರು ಮರೆತು ಹೋಗಿ ಅವರು ಬಲಿಕೊಟ್ಟ ಆಡು ಮಾತ್ರ ನೆನಪಿನಲ್ಲಿ ಉಳಿಯುವುದುಂಟು. ಅವರ ಇತಿಹಾಸದಲ್ಲಿ, ನಿಜವಾಗಿ, ಆಡಿನ ಬಲಿಯ ಘಟನೆಯ ಹಿಂದಿರುವ ಕಥೆ ಅವಿಸ್ಮರಣೀಯವಾಗಿದೆ. ಕುರ್‌ಆನ್ ಪ್ರಕಾರ, ‘‘ನಿಮ್ಮ ಪುತ್ರನನ್ನು ನನಗೆ ಬಲಿ ನೀಡಿರಿ’’ ಎಂದು ದೇವರು ಯಾವ ಹಂತದಲ್ಲೂ ಇಬ್ರಾಹೀಮರಿಗೆ ಆದೇಶಿಸಿದ್ದಿಲ್ಲ. ಹಾಗೆಯೇ, ಅವರು ತಮ್ಮ ಪುತ್ರನನ್ನು ದೇವರಿಗೆ ಬಲಿ ನೀಡಲೂ ಇಲ್ಲ. ಕುರ್‌ಆನ್‌ನಿಂದ ಸ್ಪಷ್ಟವಾಗಿ ತಿಳಿಯುವಂತೆ, ತನ್ನ ಪುತ್ರನನ್ನು ಬಲಿ ಅರ್ಪಿಸುತ್ತಿರುವುದಾಗಿ ಇಬ್ರಾಹೀಮರು ಸ್ವಪ್ನದಲ್ಲಿ ಮಾತ್ರ ಕಂಡಿದ್ದರು. ಆ ಕನಸನ್ನು ಪುತ್ರನಿಗೆ ತಿಳಿಸಿದ್ದರು. ಇದು ದೇವಾದೇಶವಿರಬಹುದೆಂದು ತರ್ಕಿಸಿದ ಪುತ್ರ, ಬಲಿಯಾಗುವುದಕ್ಕೆ ತಯಾರಾದರು. ಇಬ್ರಾಹೀಮರು, ತಮಗೆ ದೇವರು ಆದೇಶಿಸದೆ ಇದ್ದರೂ, ಕೇವಲ ತಾನು ಕನಸಿನಲ್ಲಿ ಕಂಡದ್ದನ್ನೇ ದೇವಾದೇಶವಿರಬಹುದೆಂದು ನಂಬಿ ಅದರ ಅನುಷ್ಠಾನಕ್ಕೆ ಸಿದ್ಧರಾದರು. ದೇವರಿಗೆ ಬೇಕಿದ್ದದ್ದೂ ಅವರ ಸನ್ನದ್ಧತೆ ಮಾತ್ರ.

‘‘ಅದೊಂದು ಸ್ಪಷ್ಟ ಪರೀಕ್ಷೆಯಾಗಿತ್ತು. ಮತ್ತು ನಾವು ಅವರಿಗೆ ಪರಿಹಾರವಾಗಿ ಒಂದು ಶ್ರೇಷ್ಠ ಬಲಿಪಶುವನ್ನು ನೀಡಿದೆವು. ಮತ್ತು ನಾವು ಅದರ (ಆ ಘಟನೆಯ) ನೆನಪನ್ನು ಮುಂದಿನವರಲ್ಲಿ ಉಳಿಸಿದೆವು.’’ (ಕುರ್‌ಆನ್ - 37:106 - 108)

ಇಂದು ಬಕ್ರೀದ್ ಸಂದರ್ಭದಲ್ಲಿ ಜಗತ್ತಿನ ಎಲ್ಲೆಡೆ ನೀಡಲಾಗುವ ಪ್ರಾಣಿ ಬಲಿಯು ಇಬ್ರಾಹೀಮ್ ಮತ್ತವರ ಪುತ್ರನ ತ್ಯಾಗ ಸನ್ನದ್ಧತೆಯ ಸ್ಫೂರ್ತಿಯನ್ನು ನವೀಕರಿಸುತ್ತದೆ.

‘‘ಅವುಗಳ ಮಾಂಸವಾಗಲಿ ಅವುಗಳ ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ. ನಿಮ್ಮಿಂದ ಅವನಿಗೆ ತಲುಪುವುದು (ನಿಮ್ಮ) ಧರ್ಮನಿಷ್ಠೆ ಮಾತ್ರ.’’ (ಕುರ್‌ಆನ್ - 22:37)

ಬಲಿನೀಡಲಾದ ಪ್ರಾಣಿಯ ಮಾಂಸವನ್ನು ಮೂರು ಪಾಲುಗಳಾಗಿಸಿ, ಒಂದನ್ನು, ಬಲಿಕೊಟ್ಟವರ ಕುಟುಂಬದವರಿಗೆ, ಇನ್ನೊಂದನ್ನು ಬಂಧು ಮಿತ್ರರಿಗೆ ಮತ್ತು ಮೂರನೆಯದನ್ನು ಸಮಾಜದ ಬಡವರಿಗೆ ಹಂಚಲಾಗುತ್ತದೆ.

ದುಲ್ಹಜ್ ತಿಂಗಳ 10ರಂದು ಈದ್ ಅಥವಾ ಹಬ್ಬ ಆಚರಿಸುವ ಜಗತ್ತಿನೆಲ್ಲ ಮುಸಲ್ಮಾನರು ತಿಂಗಳ ಮೊದಲ ದಿನವೇ ತಯಾರಿ ಆರಂಭಿಸುತ್ತಾರೆ. ಅನೇಕರು ಒಂದನೇ ತಾರೀಕಿನಿಂದಲೇ ಆರಂಭಿಸಿ 9ನೇ ತಾರೀಕಿನ ತನಕ ಪ್ರತಿದಿನ ಉಪವಾಸ ಆಚರಿಸು ತ್ತಾರೆ. ಹಜ್ ಯಾತ್ರಿಕರ ಎಲ್ಲ ಚಟುವಟಿಕೆಗಳು ಉತ್ತುಂಗಕ್ಕೆ ತಲುಪುವುದು 9ನೇ ದಿನ. ಅಂದು ಅವರೆಲ್ಲಾ ‘ಅರಫಾ’ ಎಂಬ ಒಂದೇ ಸ್ಥಳದಲ್ಲಿ ಒಟ್ಟು ಸೇರುತ್ತಾರೆ. ಎಲ್ಲರೂ ಒಕ್ಕೊರಲಿನಿಂದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾರೆ. ಮಾನವೀಯ ಏಕತೆ ಮತ್ತು ಸಮಾನತೆಯನ್ನು ಮೆರೆಯುತ್ತಾರೆ. ಜಗತ್ತಿನ ಎಲ್ಲರ ಸುಖ, ಸುಭೀಕ್ಷೆಗಾಗಿ ಪ್ರಾರ್ಥಿಸುತ್ತಾರೆ. ಹಜ್‌ನಲ್ಲಿ ಭಾಗವಹಿಸಲು ಸಾಧ್ಯವಾಗದ, ಜಗತ್ತಿನ ಎಲ್ಲ ಭಾಗಗಳ ಮುಸ್ಲಿಮರು, ಹಾಗೆ ಅರಫಾದಲ್ಲಿ ಒಟ್ಟು ಸೇರುವ ಜಾಗತಿಕ ಹಾಜಿಗಳ ಜೊತೆ ಭಾವೈಕ್ಯ ಪ್ರದರ್ಶಿಸುತ್ತಾ, ಆ ದಿನ ಉಪವಾಸ ಆಚರಿಸುತ್ತಾರೆ. ಹಬ್ಬದ ದಿನ ಸೂರ್ಯೋದಯದ ಬಳಿಕ ಒಂದು ವಿಶೇಷ ಸಾಮೂಹಿಕ ನಮಾಝ್ ನಡೆಯುತ್ತದೆ. ಬದುಕಿಗೆ ಸಂಬಂಧಿಸಿದ ಮೂಲಭೂತ ಸತ್ಯಗಳನ್ನು, ಇತಿಹಾಸದ ಪಾಠಗಳನ್ನು ಮತ್ತು ಸಮಕಾಲೀನ ಕರ್ತವ್ಯಗಳನ್ನು ನೆನಪಿಸುವ ಉಪನ್ಯಾಸ ನಡೆಯುತ್ತದೆ.

Writer - ಯೂಸುಫ್ ಶುಕೂರ್, ಪುತ್ತಿಗೆ

contributor

Editor - ಯೂಸುಫ್ ಶುಕೂರ್, ಪುತ್ತಿಗೆ

contributor

Similar News