24 ವರ್ಷಗಳ ಹಿಂದೆ ಮೃತಪಟ್ಟಿದ್ದನೆನ್ನಲಾಗಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ!

Update: 2021-07-21 04:25 GMT

ಡೆಹ್ರಾಡೂನ್: ಇಪ್ಪತ್ತನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದ ಎನ್ನಲಾದ ವ್ಯಕ್ತಿ ಕಳೆದ ವಾರ ದಿಢೀರನೇ ಪ್ರತ್ಯಕ್ಷವಾದ ಘಟನೆ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರಾಣಿಖೇತ್- ಖೈರ್ನಾ ರಾಜ್ಯ ಹೆದ್ದಾರಿಯ ಜನೋಲಿ ಎಂಬ ಗ್ರಾಮದಿಂದ ವರದಿಯಾಗಿದೆ.

72 ವರ್ಷ ವಯಸ್ಸಿನ ಮಾಧವ್ ಸಿಂಗ್ ಮೆಹ್ರಾ 24 ವರ್ಷ ಹಿಂದೆ ಕಣ್ಮರೆಯಾಗಿದ್ದರು. ಹತ್ತು ವರ್ಷ ಕಾಲ ಮೆಹ್ರಾ ನಿರೀಕ್ಷೆಯಲ್ಲಿಯೇ ಇದ್ದ ಕುಟುಂಬದವರು, ಬಳಿಕ ಆತ ಮೃತಪಟ್ಟಿದ್ದಾಗಿ ಪುರೋಹಿತರು ಹೇಳಿದ ಬಳಿಕ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದರು.
ಇದೀಗ ವಾಪಸ್ಸಾಗಿರುವ ಮೆಹ್ರಾ ಅವರ ನಾಮಕರಣ ಶಾಸ್ತ್ರಕ್ಕೆ ಕುಟುಂಬ ಸಿದ್ಧತೆ ನಡೆಸಿದೆ. ಸಾಮಾನ್ಯವಾಗಿ ಮಗು ಹುಟ್ಟಿ 12ನೇ ದಿನಕ್ಕೆ ನಡೆಸುವ ಈ ಶಾಸ್ತ್ರವನ್ನು ಮೆಹ್ರಾ ಮನೆಗೆ ವಾಪಸ್ಸಾದ ಹನ್ನೆರಡು ದಿನಗಳ ಬಳಿಕ ನಡೆಸಲು ನಿರ್ಧರಿಸಲಾಗಿದೆ.

ಪ್ರಸ್ತುತ ಮೆಹ್ರಾ ವಸತಿಗಾಗಿ ಗ್ರಾಮದ ಹೊರಗೆ ಡೇರೆ ನಿರ್ಮಿಸಲಾಗಿದೆ. ನಾಮಕರಣ ಶಾಸ್ತ್ರ ಮುಗಿಯುವವೆಗೂ ಅವರು ಅಲ್ಲಿ ವಾಸವಿರುತ್ತಾರೆ ಎಂದು ಅವರ ಕಣ್ಮರೆಯ 

ಸಂದರ್ಭದಲ್ಲಿ 14 ವರ್ಷದ ಬಾಲಕನಾಗಿದ್ದ ರಾಮ್‍ಸಿಂಗ್ ಮೆಹ್ರಾ (38) ಹೇಳಿದರು. "ಚಿಕ್ಕಪ್ಪನನ್ನು ನೋಡಿ ನಮಗೆ ಆಘಾತವಾಯಿತು. ಮೊದಲು ನಮಗೆ ನಂಬಲು ಕೂಡಾ ಸಾಧ್ಯವಾಗಲಿಲ್ಲ. ಬಳಿಕ ಅವರು ಹೇಳಿದ್ದನ್ನು ನಂಬಬೇಕಾಯಿತು. ಅವರ ಚಹರೆ ಸಂಪೂರ್ಣ ಬದಲಾಗಿರುವುದು ಮಾತ್ರವಲ್ಲದೇ ನಿಜವಾಗಿಯೂ ಅವರೇ ಎಂಬ ಸಂದೇಹ ಮೂಡಿಸಿತು" ಎಂದು ವಿವರಿಸಿದರು.

24 ವರ್ಷಗಳ ಈ ನಿಗೂಢ ಕಣ್ಮರೆ ಬಗ್ಗೆ ವಿವರ ನೀಡಲು ಮೆಹ್ರಾ ನಿರಾಕರಿಸಿದ್ದಾರೆ. ಅವರಿಗೆ ಅನಗತ್ಯವಾಗಿ ಯಾವುದೇ ತೊಂದರೆ ನೀಡದಂತೆ ಕುಟುಂಬ ಸಾರ್ವಜನಿಕರನ್ನು ವಿನಂತಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News