ಪೆಗಾಸಸ್ ಗೂಢಚರ್ಯೆ ಆರೋಪದ ಕುರಿತು ಸಿಟ್ ತನಿಖೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ

Update: 2021-07-22 08:01 GMT

ಹೊಸದಿಲ್ಲಿ: ಇಸ್ರೇಲ್ ಸ್ಪೈವೇರ್ ಪೆಗಾಸಸ್ ಅನ್ನು ಬಳಸಿಕೊಂಡು ಸರಕಾರಿ ಸಂಸ್ಥೆಗಳು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು ಹಾಗೂ ಇತರರ ಮೇಲೆ  ಗೂಢಚರ್ಯೆ ನಡೆಸಿವೆ ಎಂಬ ಆರೋಪದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ದಿಂದ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ವಕೀಲ ಎಂ.ಎಲ್. ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ಪೆಗಾಸಸ್ ಹಗರಣವು ಭಾರೀ ಕಳವಳಕಾರಿಯ  ವಿಷಯವಾಗಿದೆ ಹಾಗೂ  ಭಾರತದ ಪ್ರಜಾಪ್ರಭುತ್ವ, ನ್ಯಾಯಾಂಗ ಹಾಗೂ  ದೇಶದ ಭದ್ರತೆಯ ಮೇಲೆ ಗಂಭೀರವಾದ ದಾಳಿಯಾಗಿದೆ. ಕಣ್ಗಾವಲಿನ "ವ್ಯಾಪಕ ಹಾಗೂ ಲೆಕ್ಕಿಸಲಾಗದ" ಬಳಕೆಯು "ನೈತಿಕವಾಗಿ ವಿರೂಪವಾಗಿದೆ'' ಎಂದು ಹೇಳಿದ್ದಾರೆ.

ಹಗರಣವನ್ನು ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಟ್ ಮೂಲಕ ತನಿಖೆ ನಡೆಸಬೇಕು.  ಪೆಗಾಸಸ್ ಅನ್ನು ಖರೀದಿಸಿ 2017ರಿಂದ ನ್ಯಾಯಾಧೀಶರು, ವಿಪಕ್ಷ ನಾಯಕರು, ರಾಜಕೀಯ ವ್ಯಕ್ತಿಗಳು, ವಕೀಲರು ಸಹಿತ ಭಾರತದ ನಾಗರಿಕರ ಗೂಢಚರ್ಯೆ ನಡೆಸಿದ ಆರೋಪ ಎದುರಿಸುತ್ತಿರುವ  ಎಲ್ಲ ಆರೋಪಿ ಗಳು ಹಾಗೂ ಸಚಿವರುಗಳನ್ನು ವಿಚಾರಣೆಗೆ ಒಳಪಡಿಸಲು ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಗೂಢಚರ್ಯೆಗಾಗಿ ಪೆಗಾಸಸ್ ಸಾಫ್ಟ್ ವೇರ್ ಖರೀದಿಸುವುದು ಕಾನೂನುಬಾಹಿರ ಹಾಗೂ ಅಸಾಂವಿಧಾನಿಕ ಎಂದು ಘೋಷಿಸಬೇಕೆಂದೂ ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News