ಮೃತಪಟ್ಟ ರೈತರುಗಳನ್ನು ಸ್ಮರಿಸುತ್ತಾ 'ಕಿಸಾನ್ ಸಂಸತ್ತು' ಆರಂಭಿಸಿದ ರೈತರು
ಹೊಸದಿಲ್ಲಿ: ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ದಿಲ್ಲಿ ಗಡಿಯಲ್ಲಿ ತಿಂಗಳುಗಟ್ಟಲೆ ಬೀಡುಬಿಟ್ಟಿರುವ ಪ್ರತಿಭಟನಾನಿರತ ರೈತರು ಕೃಷಿ ಕಾನೂನುಗಳ ವಿರುದ್ಧ ತಮ್ಮ ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸಲು ದಿಲ್ಲಿಯ ಜಂತರ್ ಮಂತರ್ ಗೆ ಗುರುವಾರ ತಲುಪಿದ್ದಾರೆ.
ದಿಲ್ಲಿ ಗಡಿಯಲ್ಲಿ ಸುದೀರ್ಘ ಆಂದೋಲನದ ವೇಳೆ ಪ್ರಾಣ ಕಳೆದುಕೊಂಡ 500 ರೈತರಿಗೆ ಗೌರವ ಸಲ್ಲಿಸಿದ ನಂತರ ರೈತರು ಜಂತರ್ ಮಂತರ್‌ನಲ್ಲಿ 'ಕಿಸಾನ್ ಸಂಸತ್ತು' ಆರಂಭಿಸಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕರೆದೊಯ್ಯುವ ಬಸ್ ಜಂತರ್ ಮಂತರ್ ತಲುಪಿದ್ದು, ಪ್ರತಿಭಟನೆಗೆ ಮುಂಚಿತವಾಗಿ ಬಿಗಿ ಭದ್ರತಾ ನಿಯೋಜನೆ ಮಾಡಲಾಗಿದೆ. ರಾಜಧಾನಿಯ ಸಿಂಘು ಗಡಿಯಿಂದ ಬಸ್ಸುಗಳು ಮತ್ತು ಕಾರುಗಳಲ್ಲಿ ಪೊಲೀಸರ ಬೆಂಗಾವಲಿನಲ್ಲಿ ರೈತರು ಜಂತರ್ ಮಂತರ್ ಗೆ ಆಗಮಿಸಿದರು.
ಬಿಕೆಯು ನಾಯಕ ರಾಕೇಶ್ ಟಿಕಾಯತ್ ಕೂಡ ಜಂತರ್ ಮಂತರ್ ತಲುಪಿದ್ದಾರೆ.
ಷರತ್ತಿನ ಪ್ರಕಾರ ಪ್ರತಿದಿನ 206 ರೈತರು ಬೆಳಗ್ಗೆ 11ರಿಂದ ಸಂಜೆ 5ರ ತನಕ ಕಿಸಾನ್ ಸಂಸದ್ ನಲ್ಲಿ ಭಾಗವಹಿಸಲಿದ್ದಾರೆ. ದಿಲ್ಲಿ ಸರಕಾರ ಹಾಗೂ ಪೊಲೀಸರು ಬುಧವಾರ ರೈತರ ಸಂಸದ್ ಗೆ ಅನುಮತಿ ನೀಡಿದ್ದರು.