ಮಹಾರಾಷ್ಟ್ರ: ಭಾರೀ ಮಳೆಗೆ ಮಾರ್ಗ ಮಧ್ಯೆ ಸಿಲುಕಿಕೊಂಡ 6,000 ರೈಲು ಪ್ರಯಾಣಿಕರು
ಮುಂಬೈ: ಸತತ ಮಳೆಯಿಂದಾಗಿ ಮಹಾರಾಷ್ಟ್ರ ರಾಜ್ಯದ ಕೊಂಕಣ ಪ್ರದೇಶದಾದ್ಯಂತ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿವೆ.
ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕೊಂಕಣ ಪ್ರದೇಶದ ರತ್ನಗಿರಿ ಹಾಗೂ ರಾಯಗಡ್ ಜಿಲ್ಲೆಗಳಲ್ಲಿನ ಪ್ರಮುಖ ನದಿಗಳು ಅಪಾಯದ ಮಟ್ಟವನ್ನು ಮೀರಿ ಉಕ್ಕಿ ಹರಿಯುತ್ತಿವೆ.
ಕೊಂಕಣ ರೈಲ್ವೆ ಮಾರ್ಗದಲ್ಲಿ ಹಲವಾರು ದೂರದ-ರೈಲುಗಳನ್ನು ನಿಲ್ಲಿಸಲಾಗಿದೆ, ರದ್ದುಪಡಿಸಲಾಗಿದೆ ಅಥವಾ ಮರು ನಿಗದಿಪಡಿಸಲಾಗಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಕೊಂಕಣ ರೈಲ್ವೆ ಮಾರ್ಗದ ವಿವಿಧ ನಿಲ್ದಾಣಗಳಲ್ಲಿ ನಿಯಂತ್ರಿಸಲ್ಪಟ್ಟ ರೈಲುಗಳಲ್ಲಿ ಸುಮಾರು 6,000 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.
ರೈಲು ಮಾರ್ಗದಲ್ಲಿ ಈವರೆಗೆ ಒಂಬತ್ತು ರೈಲುಗಳನ್ನು ನಿಯಂತ್ರಿಸಲಾಗಿದೆ. ಈ ರೈಲುಗಳು ವಿವಿಧ ನಿಲ್ದಾಣಗಳಲ್ಲಿ ಸುರಕ್ಷಿತ ಸ್ಥಳಗಳಲ್ಲಿವೆ ಹಾಗೂ ಅವುಗಳಲ್ಲಿ ಪ್ರಯಾಣಿಕರು ಸಹ ಸುರಕ್ಷಿತರಾಗಿದ್ದಾರೆ ಹಾಗೂ ಅವರಿಗೆ ಆಹಾರ ಮತ್ತು ನೀರು ನೀಡಲಾಗುತ್ತಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲು ಸೇವೆಗಳನ್ನು ಗುರುವಾರ ಬೆಳಿಗ್ಗೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ರತ್ನಗಿರಿಯ ಚಿಪ್ಲುನ್ ಹಾಗೂ ಕಾಮಥೆ ನಿಲ್ದಾಣಗಳ ನಡುವಿನ ವಶಿಷ್ಠ ನದಿ ಸೇತುವೆಯಲ್ಲಿನ ನೀರಿನ ಮಟ್ಟವು ಭಾರಿ ಮಳೆಯ ನಂತರ ಅಪಾಯದ ಮಟ್ಟ ದಾಟಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಈ ವಿಭಾಗದಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ" ಎಂದು ಕೊಂಕಣ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.
ಮುಂಬೈನಿಂದ 240 ಕಿ.ಮೀ ದೂರದಲ್ಲಿರುವ ಚಿಪ್ಲೂನ್ ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಿಕ್ಕಿಬಿದ್ದ ಸ್ಥಳೀಯರನ್ನು ಭಾರತೀಯ ಕೋಸ್ಟ್‌ಗಾರ್ಡ್ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ. ಪಟ್ಟಣದಲ್ಲಿ ತೀವ್ರ ಪ್ರವಾಹದಿಂದಾಗಿ ಮುಂಬೈ-ಗೋವಾ ಹೆದ್ದಾರಿ ಕೂಡ ಮುಚ್ಚಲಾಗಿದೆ.
ಪ್ರವಾಹದಿಂದಾಗಿ ಮಹಾರಾಷ್ಟ್ರದ ಚಿಪ್ಲುನ್‌ನಲ್ಲಿ ಛಾವಣಿಯ ತನಕ ಮನೆಗಳು ಮುಳುಗಿದ್ದವು. ಬಸ್ ನಿಲ್ದಾಣದಲ್ಲಿ ನಿಲ್ಲಿಸಿರುವ ಬಸ್ ಗಳು ಮುಳುಗಿಹೋಗಿವೆ. ಕೋಸ್ಟ್ ಗಾರ್ಡ್ ಪ್ರತಿ ಪೀಡಿತ ಪ್ರದೇಶದಲ್ಲೂ ವಿಪತ್ತು ಪರಿಹಾರ ತಂಡವನ್ನು ನಿಯೋಜಿಸಿದೆ. 35 ಅಧಿಕಾರಿಗಳ ತಂಡವು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ.