ದಿಲ್ಲಿಯ ರೋಹಿಂಗ್ಯ ಶಿಬಿರದಲ್ಲಿದ್ದ ಮಸೀದಿಯನ್ನು ನೆಲಸಮಗೈದ ಪೊಲೀಸರು, ಸ್ಥಳೀಯಾಡಳಿತ: ಆರೋಪ
ಹೊಸದಿಲ್ಲಿ: ರಾಜಧಾನಿ ದಿಲ್ಲಿಯ ಮದನಪುರ್ ಖಾದರ್ ಪ್ರದೇಶದಲ್ಲಿರುವ ನಿರಾಶ್ರಿತ ರೋಹಿಂಗ್ಯನ್ನರ ಶಿಬಿರದಲ್ಲಿದ್ದ ತಾತ್ಕಾಲಿಕ ಮಸೀದಿಯನ್ನು ಪೊಲೀಸರು ಮತ್ತು ಸ್ಥಳೀಯಾಡಳಿತದ ಸಿಬ್ಬಂದಿ ಗುರುವಾರ ಬೆಳಿಗ್ಗೆ ನೆಲಸಮಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಶಿಬಿರದಲ್ಲಿ ಕೆಲ ವಾರಗಳ ಹಿಂದೆ ಅಗ್ನಿ ಅನಾಹುತ ಸಂಭವಿಸಿತ್ತು ಎಂದು aljazeera.com ವರದಿ ಮಾಡಿದೆ.
ಮಸೀದಿಯನ್ನು ಟಾರ್ಪಲಿನ್ ಶೀಟುಗಳು ಹಾಗೂ ಬಿದಿರಿನ ಕೋಲುಗಳ ಸಹಾಯದಿಂದ ನಿರ್ಮಿಸಲಾಗಿತ್ತು. ಮ್ಯಾನ್ಮಾರ್ ನಲ್ಲಿ ದಬ್ಬಾಳಿಕೆ ಸಹಿಸಲಾರದೆ ಅಲ್ಲಿಂದ ಪಲಾಯನಗೈದು ಇಲ್ಲಿ ನೆಲೆಸಿರುವ ಸುಮಾರು 300 ರೋಹಿಂಗ್ಯನ್ನರ ಸತತ ಅಪೀಲುಗಳ ಹೊರತಾಗಿಯೂ ಮಸೀದಿ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ಮಸೀದಿಯಲ್ಲಿ ಗುರುವಾರ ಫಜ್ರ್ ಪ್ರಾರ್ಥನೆಗಳು ನಡೆದ ಒಂದು ಗಂಟೆ ತರುವಾಯ ನೆಲಸಮ ಕಾರ್ಯಾಚರಣೆ ನಡೆಯಿತೆಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ. "ಅವರು ಮೊದಲು ಶೌಚಾಲಯ, ವಾಶ್ ರೂಂಗಳನ್ನು ಧ್ವಂಸಗೈದರು. ನಂತರ ಕೈಪಂಪ್ ಒಂದನ್ನು ಕೂಡ ಹಾನಿಗೈದು ಕೊನೆಗೆ ಮಸೀದಿಯನ್ನು ನೆಲಸಮಗೊಳಿಸಿದರು. ಎಲ್ಲವೂ 10 ನಿಮಿಷಗಳಲ್ಲಿ ಮುಗಿದು ಹೋಯಿತು,'' ಎಂದು ಅವರು ಹೇಳಿದ್ದಾರೆ.
ನಿವಾಸಿಗಳು ಪ್ರತಿಭಟಿಸಲು ಯತ್ನಿಸಿದಾಗ "ನೀವು ಅಕ್ರಮ ವಲಸಿಗರು, ಇಲ್ಲಿ ಜಮೀನು ಅತಿಕ್ರಮಿಸಿ ವಾಸಿಸುತ್ತಿದ್ದೀರಿ.'' ಎಂದು ಅಧಿಕಾರಿಗಳು ತಿಳಿಸಿದ್ದರೆಂದು ನಿವಾಸಿಯೊಬ್ಬರು ಹೇಳಿದ್ದಾರೆ ಎಂದು aljazeera.com ವರದಿ ಮಾಡಿದೆ.
ಈ ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಪ್ರವೀರ್ ಸಿಂಗ್, ತಮಗೆ ನೆಲಸಮದ ಕುರಿತು ತಿಳಿದಿಲ್ಲ ಹಾಗೂ ಈ ಕುರಿತು ತಮಗೆ ಅಧಿಕೃತ ಹೇಳಿಕೆ ನೀಡುವ ಅಧಿಕಾರವಿಲ್ಲ ಎಂದಿದ್ದಾರೆ.
ಐವತ್ತಕ್ಕೂ ಹೆಚ್ಚು ನಿರಾಶ್ರಿತ ಕುಟುಂಬಗಳು ವಾಸಿಸುವ ಈ ಶಿಬಿರದಲ್ಲಿ ಜೂನ್ 13ರಂದು ಕಾಣಿಸಿಕೊಂಡ ಬೆಂಕಿ ವ್ಯಾಪಕ ಹಾನಿಯೆಸಗಿತ್ತು. 2018ರಿಂದೀಚೆಗೆ ಇಲ್ಲಿ ಸಂಭವಿಸಿದ ಎರಡನೇ ಅಗ್ನಿ ಅನಾಹುತ ಇದಾಗಿದೆ. ಬೆಂಕಿ ಅವಘಡದ ಸಂದರ್ಭ ಶಿಬಿರದ ಪ್ರವೇಶದ್ವಾರದ ಸಮೀಪವಿರುವ ಈ ಮಸೀದಿಯ ಒಂದು ಸಣ್ಣ ಭಾಗಕ್ಕೆ ಹಾನಿಯಾಗಿತ್ತು. ಸ್ಥಳೀಯ ಕಾರ್ಯಕರ್ತರು ಹಾಗೂ ಕೆಲ ಸಂಘಟನೆಗಳು ಒದಗಿಸಿದ ಟೆಂಟುಗಳಲ್ಲಿ ನಿರಾಶ್ರಿತ ಕುಟುಂಬಗಳು ವಾಸಿಸುತ್ತಿವೆ.