ಸ್ಟಾನ್ ಸ್ವಾಮಿ ಸಾವಿನ ಕುರಿತು ವಿಚಾರಣೆಯ ಮೇಲ್ವಿಚಾರಣೆಗೆ ಹೈಕೋರ್ಟ್ ಗೆ ವಕೀಲರ ಆಗ್ರಹ
ಮುಂಬೈ,ಜು.23: ‘ಪೇರೆನ್ಸ್ ಪ್ಯಾಟ್ರಿಯೆ ’ ಅಥವಾ ಸ್ವಂತ ನಿರ್ಧಾರವನ್ನು ಕೈಗೊಳ್ಳುವ ಸ್ಥಿತಿಯಲ್ಲಿಲ್ಲದ ಮೇಲ್ಮನವಿದಾರರ ಪೋಷಕನಾಗಿ ತನ್ನ ಅಧಿಕಾರವ್ಯಾಪ್ತಿಯನ್ನು ಬಳಸಿಕೊಂಡು ಕ್ರೈಸ್ತ ಧರ್ಮಗುರು ಸ್ಟಾನ್ ಸ್ವಾಮಿ ಅವರ ಸಾವಿನ ಕುರಿತು ಮ್ಯಾಜಿಸ್ಟೀರಿಯಲ್ ವಿಚಾರಣೆಯ ಮೇಲ್ವಿಚಾರಣೆಯನ್ನು ವಹಿಸಿಕೊಳ್ಳುವಂತೆ ಅವರ ಪರ ವಕೀಲ ಮಿಹಿರ ದೇಸಾಯಿ ಅವರು ಶುಕ್ರವಾರ ಬಾಂಬೆ ಉಚ್ಚ ನ್ಯಾಯಾಲಯವನ್ನು ಆಗ್ರಹಿಸಿದರು. ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಆರೋಪಿಗಳಲ್ಲೋರ್ವರಾಗಿದ್ದ ಸ್ವಾಮಿ ಜಾಮೀನಿಗಾಗಿ ಕಾಯುತ್ತಲೇ ಇತ್ತೀಚಿಗೆ ಕೊನೆಯುಸಿರೆಳೆದಿದ್ದರು.
ಸ್ವಾಮಿಯವರು ನಿಧನರಾಗಿದ್ದಾರೆ ಮತ್ತು ಅವರಿಗೆ ಜಾಮೀನು ನೀಡುವ ಪ್ರಶ್ನೆಯೇ ಇಲ್ಲವಾದರೂ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿ ಅಂತ್ಯಗೊಂಡಿದೆ ಎಂದು ಉಚ್ಚ ನ್ಯಾಯಾಲಯವು ಪರಿಗಣಿಸಬೇಕಿಲ್ಲ. ತಮ್ಮ ಸ್ವಂತ ನಿರ್ಧಾರವನ್ನು ಕೈಗೊಳ್ಳುವ ಸ್ಥಿತಿಯಲ್ಲಿಲ್ಲದ ಮೇಲ್ಮನವಿದಾರರ ಪೋಷಕನಾಗಿ ಉಚ್ಚ ನ್ಯಾಯಾಲಯವು ‘ಪೇರೆನ್ಸ್ ಪ್ಯಾಟ್ರಿಯೆ ’ಅಧಿಕಾರವನ್ನು ಬಳಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ನೀಡಿರುವ ತೀರ್ಪುಗಳಿವೆ ಎಂದು ಹೇಳಿದ ದೇಸಾಯಿ,ಸಿಆರ್ಪಿಸಿಯ ಕಲಂ 176ರಂತೆ ನಡೆಯಬೇಕಿರುವ ಸ್ವಾಮಿ ಸಾವಿನ ಕುರಿತು ವಿಚಾರಣೆಯಲ್ಲಿ ಪಾಲ್ಗೊಳ್ಳಲು ಅವರ ಸಹಾಯಕರಾಗಿದ್ದ ಫಾ.ಫ್ರೇಜರ್ ಮಸ್ಕರನ್ಹಾಸ್ ಅವರಿಗೆ ಅನುಮತಿ ನೀಡುವಂತೆ ಉಚ್ಚ ನ್ಯಾಯಾಲಯವನ್ನು ಆಗ್ರಹಿಸಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಿಚಾರಣೆಯನ್ನು ನಡೆಸಲು ಮತ್ತು ವಿಚಾರಣೆಯ ಮೇಲ್ವಿಚಾರಣೆಗಾಗಿ ವಿಚಾರಣಾ ವರದಿಯ ಪ್ರತಿಯನ್ನು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮ್ಯಾಜಿಸ್ಟ್ರೇಟ್ಗೆ ನಿರ್ದೇಶ ನೀಡುವಂತೆಯೂ ಆಗ್ರಹಿಸಿದ ದೇಸಾಯಿ,ಮೇಲ್ಮನವಿಗಳು ಬಾಕಿಯಿರುವಾಗ ಮೇಲ್ಮನವಿದಾರ ಮೃತಪಟ್ಟಿರುವುದರಿಂದ ನಾವು ಒಂದು ವಿಚಿತ್ರ ಸನ್ನಿವೇಶವನ್ನು ನೋಡುತ್ತಿದ್ದೇವೆ. ಆದರೆ ಉಚ್ಚ ನ್ಯಾಯಾಲಯವು ವ್ಯಾಪಕ ಅಧಿಕಾರಗಳನ್ನು ಹೊಂದಿದೆ ಎಂದರು. ನ್ಯಾಯಾಲಯಗಳು ತಮ್ಮ ಪೇರೆನ್ಸ್-ಪ್ಯಾಟ್ರಿಯೆ ಅಧಿಕಾರವನ್ನು ಬಳಸಿದ್ದ ಭೋಪಾಲ ಅನಿಲ ದುರಂತ ಪ್ರಕರಣ ಮತ್ತು ಕೋಮಾಸ್ಥಿತಿಯಲ್ಲಿದ್ದ ನರ್ಸ್ ಅರುಣಾ ಶಾನುಭಾಗ್ ಪ್ರಕರಣಗಳನ್ನು ಅವರು ಉಲ್ಲೇಖಿಸಿದರು.
ಫಾ.ಮಸ್ಕರನ್ಹಾಸ್ ಅವರು ವಿಚಾರಣೆಯಲ್ಲಿ ಪಾಲ್ಗೊಳ್ಳುವುದಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಆಕ್ಷೇಪವಿಲ್ಲ,ಆದರೆ ವಿಚಾರಣೆಯು ಕಾರ್ಯವಿಧಾನದ ಭಾಗವಾಗಿರುವುದರಿಂದ ಮತ್ತು ಅದನ್ನು ಅನುಸರಿಸಲಾಗುವುದರಿಂದ ಎನ್ಎಚ್ಆರ್ಸಿ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ರಿಗೆ ಯಾವುದೇ ನಿರ್ದೇಶಗಳನ್ನು ನೀಡುವ ಅಗತ್ಯವಿಲ್ಲ ಎಂದು ಎನ್ಐಎ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ತಿಳಿಸಿದರು.
ಆದರೆ ಉಚ್ಚ ನ್ಯಾಯಾಲಯವು ವಿಚಾರಣೆಯ ವರದಿಯನ್ನು ಕೇಳುವುದಕ್ಕೆ ಎನ್ಎಐ ಆಕ್ಷೇಪವನ್ನು ಹೊಂದಿದೆ ಎಂದ ಅವರು,ವೈದ್ಯಕೀಯ ಕಾರಣಗಳು ಮತ್ತು ಅರ್ಹತೆಯ ಮೇಲೆ ಆರೋಪಿಗೆ ಜಾಮೀನು ನಿರಾಕರಣೆಯನ್ನು ಪ್ರಶ್ನಿಸಿರುವ ಎರಡು ಅರ್ಜಿಗಳ ವಿಚಾರಣೆಯು ಉಚ್ಚ ನ್ಯಾಯಾಲಯದ ಮುಂದಿದೆ. ಸಿಆರ್ಪಿಸಿಯ ಕಲಂ 394ರನ್ವಯ ಆರೋಪಿಯ ನಿಧನದೊಂದಿಗೆ ಮೇಲ್ಮನವಿಗಳು ರದ್ದುಗೊಂಡಿವೆ ಎಂದು ಹೇಳಿದರು. ಮೇಲ್ಮನವಿಗಳು ರದ್ದುಗೊಂಡಿವೆಯೇ ಅಥವಾ ಈ ವಿಷಯದಲ್ಲಿ ಉಚ್ಚ ನ್ಯಾಯಾಲಯವು ನ್ಯಾಯವ್ಯಾಪ್ತಿಯನ್ನು ಮುಂದುವರಿಸುವಂತಾಗಲು ಅವುಗಳನ್ನು ತಿದ್ದುಪಡಿಗೊಳಿಸಬಹುದೇ ಎಂಬ ಬಗ್ಗೆ ಲಿಖಿತ ಹೇಳಿಕೆಯನ್ನು ಸಲ್ಲಿಸುವಂತೆ ಪೀಠವು ದೇಸಾಯಿಯವರಿಗೆ ಸೂಚಿಸಿತು.