ಉತ್ತರ ಪ್ರದೇಶ:ದಲಿತ ಯುವಕನ ಗಡ್ಡ ಬೋಳಿಸಿ ಹಲ್ಲೆ: ದೂರು ದಾಖಲಿಸಿಕೊಂಡ ಪೊಲೀಸರು

Update: 2021-07-24 09:36 GMT
photo: twitter

ಮೀರತ್: ಉತ್ತರಪ್ರದೇಶದ ಸಹರಾನ್ಪುರ್ ಗ್ರಾಮದಲ್ಲಿ  ಠಾಕೂರ್ ಜಾತಿಗೆ ಸೇರಿದ ಗುಂಪೊಂದು ದಲಿತ ಯುವಕನ ಗಡ್ಡವನ್ನು ಬೋಳಿಸಿದ್ದಲ್ಲದೆ ಚೆನ್ನಾಗಿ ಥಳಿಸಿರುವ ಘಟನೆ ವರದಿಯಾಗಿದೆ.

ದಲಿತ ಸಮುದಾಯದ ರಜತ್ ಕುಮಾರ್ (20) ಅವರನ್ನು ತಡೆದ ಠಾಕೂರ್ ಜಾತಿಯ ಗುಂಪೊಂದು ನೀನು  ಗಡ್ಡ ಬಿಡುವ "ಧೈರ್ಯ" ಮಾಡಬಾರದು. ಇದು "ಠಾಕೂರ್ ಗಳ ಹೆಮ್ಮೆ" ಎಂದು ಎಚ್ಚರಿಸಿದೆ.

ರಜತ್‌  ಘಟನೆ ನಡೆದು ಐದು ದಿನಗಳ ಬಳಿಕ ದೂರು ದಾಖಲಿಸುವ ಧೈರ್ಯ ತೋರಿದ ಎಂದು ಅವರ ಕುಟುಂಬ ತಿಳಿಸಿದೆ. ಠಾಕೂರ್ ಜಾತಿಯ ಯುವಕರು  ದಲಿತ ಯುವಕನನ್ನು ಥಳಿಸಿದ ಘಟನೆಯ ವಿಡಿಯೋವೊಂದನ್ನು ಆನ್‌ಲೈನ್‌ನಲ್ಲಿ ಹಾಕಿದ ನಂತರ ಅದು ವೈರಲ್ ಆಗಿದೆ. ಆ ನಂತರ ಪೊಲೀಸರು   ಗಲಭೆ, ಗಾಯ, ಕ್ರಿಮಿನಲ್ ಬೆದರಿಕೆ ಹಾಗೂ  ಎಸ್‌ಸಿ / ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳ ಅಡಿ ಕ್ಷೌರಿಕ ಸೇರಿದಂತೆ ಆರು ಮಂದಿ  ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

"ಏಳು ಮಂದಿ ಪುರುಷರನ್ನು ಇನ್ನಷ್ಟೇ ಬಂಧಿಸಬೇಕಾಗಿದೆ. ಇನ್ನೂ ಯಾವುದೇ ಬಂಧನವಾಗಿಲ್ಲ. ಆದರೆ ಭಾಗಿಯಾಗಿರುವವರನ್ನು ನಾವು ಪತ್ತೆ ಮಾಡುತ್ತಿದ್ದೇವೆ" ಎಂದು ಸಹರಾನ್ಪುರ್ ಎಸ್ಎಸ್ಪಿ ಶಿವಸಿಂಪಿ ಚಾನಪ್ಪ ಹೇಳಿದರು.

ರವಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ರಜತ್ ತನ್ನ ಗ್ರಾಮವಾದ ಶಿಮ್ಲಾನಾದಲ್ಲಿ ಬೀದಿಯಲ್ಲಿ ಹಾದುಹೋಗುತ್ತಿದ್ದಾಗ ನೀರಜ್ ರಾಣಾ, ಸತ್ಯ ರಾಣಾ, ಮೋಕಂ ರಾಣಾ, ರಿಪಂತು ರಾಣಾ, ಮಾಂಟಿ ರಾಣಾ ಹಾಗೂ  ಸಂದೀಪ್ ರಾಣಾ ಅವರು ನೀರಜ್ ನನ್ನು  ಸುತ್ತುವರೆದರು.

 "ಅವರು ನನ್ನನ್ನು ನಿಂದಿಸಲು ಆರಂಭಿಸಿದರು ಹಾಗೂ  ಜಾತಿನಿಂದನೆ ಮಾಡಿದರು. ಅವರ ಬಳಿ  ಚಾಕುಗಳು ಹಾಗೂ  ಇತರ ಚೂಪಾದ ಆಯುಧಗಳು ಇದ್ದವು. ಅವರು ನನ್ನನ್ನು ಕ್ಷೌರಿಕನ ಅಂಗಡಿಗೆ ಎಳೆದುಕೊಂಡು ಹೋಗಿ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಅವರು ನನ್ನ ಮೀಸೆ-ಗಡ್ಡವನ್ನು ಬಲವಂತವಾಗಿ ಕತ್ತರಿಸಿದರು. ನನ್ನನ್ನು ಹೊಡೆದರು ಹಾಗೂ  ಎಲ್ಲವನ್ನೂ ಚಿತ್ರೀಕರಿಸಿದರು’’ ಎಂದು  ರಜತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News