ಆಕ್ಸಿಜನ್ ಕೊರತೆಯಿಂದ ಸಂಭವಿಸಿದ ಕೋವಿಡ್ ಸಾವುಗಳ ಕುರಿತು ಕೇಂದ್ರ ಯಾವತ್ತೂ ಮಾಹಿತಿ ಕೇಳಿಲ್ಲ: ಚತ್ತೀಸಗಢ ಆರೋಗ್ಯ ಸಚಿವ

Update: 2021-07-24 12:24 GMT

ರಾಯಪುರ್ : "ಆಕ್ಸಿಜನ್ ಕೊರತೆಯಿಂದ ಸಂಭವಿಸಿದ ಕೋವಿಡ್ ಸಾವುಗಳ ಕುರಿತಾದ ಅಂಕಿಅಂಶಗಳನ್ನು ಕೇಂದ್ರ ಸರಕಾರ ಯಾವತ್ತೂ ಕೇಳಿಲ್ಲ. ಕೇಂದ್ರವು ಉದ್ದೇಶಪೂರ್ವಕವಾಗಿ ಸಂಸತ್ತನ್ನು ತಪ್ಪುದಾರಿಗೆಳೆದಿದೆ" ಎಂದು ಕಾಂಗ್ರೆಸ್ ಆಡಳಿತದ ಚತ್ತೀಸಗಢ ಆರೋಗ್ಯ ಸಚಿವ ಟಿ ಎಸ್ ಸಿಂಗ್ ದಿಯೋ ಹೇಳಿದ್ದಾರೆ. ಇಂತಹ ಸಾವುಗಳ ಕುರಿತಾದ ದಾಖಲೆಯೂ ರಾಜ್ಯದಲ್ಲಿಲ್ಲ ಎಂದು ಅವರು ಹೇಳಿದ್ದಾರೆ.

ಆದರೆ ಆಕ್ಸಿಜನ್ ಕೊರತೆಯಿಂದ ಯಾರಾದರೂ ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆಯೇ ಎಂದು ದೃಢಪಡಿಸಲು ರಾಜ್ಯದಲ್ಲಿ ಎರಡನೇ ಅಲೆ ವೇಳೆ ಸಂಭವಿಸಿದ  ಸಾವುಗಳ ಮರು ಆಡಿಟ್ ಅನ್ನು ರಾಜ್ಯ ಸರಕಾರ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.

ಆಕ್ಸಿಜನ್ ಕೊರತೆಯಿಂದ ಸಾವುಗಳು ಸಂಭವಿಸಿದ ಕುರಿತು ರಾಜ್ಯಗಳಿಂದ ಯಾವುದೇ ನಿರ್ದಿಷ್ಟ ವರದಿಗಳು ದೊರಕಿಲ್ಲ ಎಂದು ಕೇಂದ್ರ ಸರಕಾರ ಜುಲೈ 20ರಂದು ರಾಜ್ಯಸಭೆಗೆ ತಿಳಿಸಿರುವ ಹಿನ್ನೆಲೆಯಲ್ಲಿ ಸಿಂಗ್ ಅವರ ಹೇಳಿಕೆ ಮಹತ್ವ ಪಡೆದಿದೆ.

ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವು ಸಂಭವಿಸಿದೆಯೇ ಎಂಬ ಕುರಿತು ಮಾಹಿತಿಯಿದ್ದಲ್ಲಿ ಎನ್‍ಜಿಒಗಳು, ನಾಗರಿಕರು ಹಾಗೂ ಪತ್ರಕರ್ತರು ಸರಕಾರಕ್ಕೆ ತಿಳಿಸಬಹುದು ಎಂದು ಅವರು ಹೇಳಿದ್ದಾರೆ.

ಕೇಂದ್ರ ಕೂಡ ಕೋವಿಡ್ ಸಾವುಗಳ ಆಡಿಟ್ ನಡೆಸಿ ಮುಂದೆ ಆಕ್ಸಿಜನ್ ಕೊರತೆಯಿಂದ ಯಾವುದೇ ರೋಗಿ ಸಾವನ್ನಪ್ಪದಂತೆ ನೋಡಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.

ಚತ್ತೀಸಗಢದಲ್ಲಿ ಬೇಡಿಕೆಗಿಂತ ಹೆಚ್ಚು ಆಕ್ಸಿಜನ್ ಇದೆ ಎಂದು ಹೇಳಿದ ಅವರು ರಾಜ್ಯದ ಉತ್ಪಾದನಾ ಸಾಮರ್ಥ್ಯ 388.87 ಮೆಟ್ರಿಕ್ ಟನ್ ಆಗಿದ್ದರೆ ಎಪ್ರಿಲ್ 26ರಂದು ರಾಜ್ಯದಲ್ಲಿ ಗರಿಷ್ಠ 180 ಮೆಟ್ರಿಕ್ ಟನ್ ಆಕ್ಸಿಜನ್ ಬಳಕೆಯಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News