ಅಲ್ಪಸಂಖ್ಯಾತರಿಗೆ ಕೋಟಾ ಪ್ರಶ್ನಿಸಿದ್ದ ಹಿಂದೂ ಸೇವಾಕೇಂದ್ರ ಸಂಸ್ಥೆಗೆ 25,000 ರೂ.ದಂಡ ವಿಧಿಸಿದ ಕೇರಳ ಹೈಕೋರ್ಟ್

Update: 2021-07-24 18:13 GMT

ಕೊಚ್ಚಿ, ಜು.24: ಮುಸ್ಲಿಮರು,ಲ್ಯಾಟಿನ್ ಕೆಥೋಲಿಕ್ ರು, ಕ್ರಿಶ್ಚಿಯನ್ ನಾಡಾರ್ಗಳು ಮತ್ತು ಕ್ರೈಸ್ತ ಧರ್ಮದ ಯಾವುದೇ ಪಂಗಡಕ್ಕೆ ಮತಾಂತರಗೊಂಡಿರುವ ಪರಿಶಿಷ್ಟ ಜಾತಿಗಳಿಗೆ ಸೇರಿದವರು ಹಿಂದುಳಿದ ವರ್ಗಗಳಾಗಿ ಪರಿಗಣಿಸಲು ಅರ್ಹರಲ್ಲ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಕೇರಳ ಉಚ್ಚ ನ್ಯಾಯಾಲಯವು, ಅರ್ಜಿದಾರ ಎರ್ನಾಕುಳಮ್ನ ಹಿಂದು ಸೇವಾಕೇಂದ್ರಂ ಸಂಸ್ಥೆಗೆ 25,000 ರೂ.ಗಳ ದಂಡವನ್ನು ವಿಧಿಸಿದೆ.

ರಾಜ್ಯದಲ್ಲಿ ಅಪರೂಪದ ಕಾಯಿಲೆಗಳಿಂದ ನರಳುತ್ತಿರುವ ಮಕ್ಕಳಿಗೆ ಆರ್ಥಿಕ ನೆರವು ಒದಗಿಸಲು ಆರಂಭಿಸಲಾಗಿರುವ ಬ್ಯಾಂಕ್ ಖಾತೆಗೆ ದಂಡದ ಮೊತ್ತವನ್ನು ಒಂದು ತಿಂಗಳೊಳಗೆ ಜಮಾ ಮಾಡುವಂತೆ ಸೇವಾಕೇಂದ್ರಂ ಸಂಸ್ಥೆಗೆ ಆದೇಶಿಸಿರುವ ನ್ಯಾಯಾಲಯವು,ತಪ್ಪಿದಲ್ಲಿ ಕೇರಳ ಕಂದಾಯ ವಸೂಲಿ ಕಾಯ್ದೆ 1968ರಡಿ ಕಾನೂನು ಕ್ರಮಗಳನ್ನು ಆರಂಭಿಸುವುದಾಗಿ ಎಚ್ಚರಿಕೆ ನೀಡಿದೆ.

ಹಿಂದು ಸೇವಾಕೇಂದ್ರಂ ಖಜಾಂಚಿ ಶ್ರೀಕುಮಾರ ಮಂಕುಝಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ. ರಾಜ್ಯದಲ್ಲಿ ಹೆಚ್ಚಿನ ಮುಸ್ಲಿಮರು ಮತ್ತು ಕೆಲವು ವರ್ಗಗಳ ಕ್ರೈಸ್ತರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರದಿದ್ದರೂ ಅವರನ್ನು ಹಾಗೆಂದು ಪರಿಗಣಿಸಿ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯನ್ನು ಒದಗಿಸಲಾಗಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿರುವ ಹಿಂದುಗಳು ರಾಜ್ಯದಲ್ಲಿ ನರಳುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

1993 ಸೆಪ್ಟೆಂಬರ್ 10ರ ಗೆಝೆಟ್ ಅಧಿಸೂಚನೆಯನ್ನು ಉಲ್ಲೇಖಿಸಿದ ಅಡ್ವೋಕೇಟ್ ಜನರಲ್ ಕೆ.ಗೋಪಾಲಕೃಷ್ಣ ಕುರುಪ್ ಅವರು, ಕೆಲವು ಸಮುದಾಯಗಳನ್ನು ಹಿಂದುಳಿದ ವರ್ಗಗಳಾಗಿ ಮತ್ತು ರಾಜ್ಯವಾರು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಎಂದು ಗುರುತಿಸಲಾಗಿದೆ ಮತ್ತು ಅದರಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆದೇಶಗಳಿಗೆ ಅನುಗುಣವಾಗಿ ಮೀಸಲಾತಿಯನ್ನು ಒದಗಿಸಲಾಗಿದೆ. ಅಧಿಸೂಚನೆಯಂತೆ ಮಾಪಿಳ್ಳಾ ಮತ್ತು ಲ್ಯಾಟಿನ್ ಕೆಥೋಲಿಕರನ್ನು ಈಗಾಗಲೇ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳೆಂದು ಗುರುತಿಸಿ ಮೀಸಲಾತಿಯನ್ನು ಒದಗಿಸಲಾಗಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳೆಂದು ನಿರ್ದಿಷ್ಟಪಡಿಸುವ ಅಧಿಕಾರ ರಾಷ್ಟ್ರಪತಿಗಳದ್ದಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಾಯ್ದೆಯ ಪ್ರಕಾರ ಕೇಂದ್ರ ಸರಕಾರವು ಮುಸ್ಲಿಂ,ಕ್ರೈಸ್ತ,ಬೌದ್ಧ,ಪಾರ್ಸಿ,ಸಿಖ್ ಮತ್ತು ಜೈನ ಧಾರ್ಮಿಕ ಸಮುದಾಯಗಳನ್ನು ಅಲ್ಪಸಂಖ್ಯಾತರೆಂದು ಗುರುತಿಸಿದೆ, ಹೀಗಾಗಿ ಸಾಂವಿಧಾನಿಕ ಮತ್ತು ಶಾಸನಬದ್ಧ ನಿಬಂಧನೆಗಳ ಹಿನ್ನೆಲೆಯಲ್ಲಿ ಕೆಲವು ಸಮುದಾಯಗಳನ್ನು ಅಲ್ಪಸಂಖ್ಯಾತರು, ಎಸ್ಸಿ/ಎಸ್ಟಿಗಳು, ಹಿಂದುಳಿದ ಮತ್ತು ಇತರ ಹಿಂದುಳಿದ ಸಮುದಾಯಗಳೆಂದು ಗುರುತಿಸಲಾಗಿದೆ ಎನ್ನುವುದು ಸ್ಪಷ್ಟವಾಗಿದೆ ಮತ್ತು ಅದರಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅವುಗಳಿಗೆ ಮೀಸಲಾತಿ ಒದಗಿಸಿವೆ ಎಂದು ಬೆಟ್ಟು ಮಾಡಿದ ನ್ಯಾಯಾಲಯವು, ಮುಸ್ಲಿಮರು, ಲ್ಯಾಟಿನ್ ಕೆಥೋಲಿಕ್ರು, ಕ್ರಿಶ್ಚಿಯನ್ ನಾಡಾರ್ಗಳು ಮತ್ತು ಕ್ರೈಸ್ತ ಧರ್ಮದ ಯಾವುದೇ ಪಂಗಡಕ್ಕೆ ಮತಾಂತರಗೊಂಡಿರುವ ಪರಿಶಿಷ್ಟ ಜಾತಿಗಳಿಗೆ ಸೇರಿದವರು ಹಿಂದುಳಿದ ವರ್ಗಗಳಾಗಿ ಪರಿಗಣಿಸಲು ಅರ್ಹರಲ್ಲ ಎಂದು ಘೋಷಿಸುವಂತೆ ಅರ್ಜಿದಾರರು ಕೋರಿದ್ದು ಹೇಗೆ ಎನ್ನುವುದು ನಮಗೆ ಅರ್ಥವಾಗಿಲ್ಲ ಎಂದು ಹೇಳಿತು.

ಸಾಚಾರ್ ಮತ್ತು ಪಾಳೋಲಿ ಸಮಿತಿಗಳ ವರದಿಗಳ ಆಧಾರದಲ್ಲಿ ಈ ಸಮುದಾಯಗಳಿಗೆ ಶೈಕ್ಷಣಿಕ ಮತ್ತು ಇತರ ಸಮಾಜ ಕಲ್ಯಾಣ ಚಟುವಟಿಕೆಗಳಿಗಾಗಿ ನೀಡಲಾಗಿರುವ ಎಲ್ಲ ಹಣಕಾಸು ನೆರವನ್ನು ಸ್ಥಗಿತಗೊಳಿಸಬೇಕೆಂಬ ಕೋರಿಕೆಯನ್ನೂ ನ್ಯಾಯಾಲಯವು ತಿರಸ್ಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News