ಕೋಳಿ ತ್ಯಾಜ್ಯದಿಂದ ಬಯೋ ಡೀಸೆಲ್ ಗೆ ಪೇಟೆಂಟ್ ಪಡೆದ ಕೇರಳದ ಪಶುವೈದ್ಯ

Update: 2021-07-25 16:38 GMT

ವಯನಾಡ್,ಜು.25: ಏಳೂವರೆ ವರ್ಷಗಳ ಕಾಯುವಿಕೆಯ ಬಳಿಕ ಕೊನೆಗೂ ಪಶುವೈದ್ಯ-ಸಂಶೋಧಕ ಜಾನ್ ಅಬ್ರಹಾಂ ಅವರು ಹತ್ಯೆಯಾದ ಕೋಳಿಗಳ ತ್ಯಾಜ್ಯದಿಂದ ಬಯೊಡೀಸೆಲ್ ತಯಾರಿಕೆಯ ತನ್ನ ತಂತ್ರಜ್ಞಾನಕ್ಕೆ ಪೇಟೆಂಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಲೀ.ಗೆ 38 ಕಿ.ಮೀ.ಮೈಲೇಜ್ ನೀಡುವ ಈ ಇಂಧನವು ಡೀಸೆಲ್ ನ ಈಗಿನ ದರದ ಶೇ.40ರಷ್ಟು ಬೆಲೆಯಲ್ಲಿ ಲಭ್ಯವಾಗುವ ಜೊತೆಗೆ ವಾಯುಮಾಲಿನ್ಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ. ಅವರು ಬಳಸುವ ಕೋಳಿತ್ಯಾಜ್ಯವು ಸ್ಥಳೀಯವಾಗಿ ಪ್ರತಿ ಕೆಜಿಗೆ ಏಳು ರೂ.ದರದಲ್ಲಿ ಲಭ್ಯವಿದೆ.

 ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿವಿ ಅಧೀನದ ಇಲ್ಲಿಯ ಪಶುವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಅಬ್ರಹಾಂ ಅವರ ಸಂಶೋಧನೆಗೆ ಭಾರತೀಯ ಪೇಟೆಂಟ್ ಕಚೇರಿಯು 2021,ಜು.7ರಂದು ಪೇಟೆಂಟ್ ನೀಡಿದೆ. ಅವರ ಈ ಆವಿಷ್ಕಾರವು ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿವಿ ಅಧೀನದ ನಾಮಕ್ಕಲ್ ಪಶುವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ್ದ ಡಾಕ್ಟರಲ್ ಸಂಶೋಧನೆಯ ಫಲಶ್ರುತಿಯಾಗಿದೆ.
ಸ್ಥಳೀಯವಾಗಿ ಲಭ್ಯ ಜೈವಿಕ ವಸ್ತು ತನ್ನ ಆವಿಷ್ಕಾರದ ಮುಖ್ಯ ಕಚ್ಚಾ ವಸ್ತುವಾಗಿದ್ದರಿಂದ ರಾಷ್ಟ್ರಿಯ ಜೀವವೈವಿಧ್ಯ ಪ್ರಾಧಿಕಾರದ ಅನುಮತಿ ಅಗತ್ಯವಾಗಿದ್ದು ಪೇಟೆಂಟ್ ನೀಡಿಕೆಗೆ ವಿಳಂಬವನ್ನುಂಟು ಮಾಡಿತ್ತು ಎಂದು ಅಬ್ರಹಾಂ ತಿಳಿಸಿದರು.

 2009-12ರ ಅವಧಿಯಲ್ಲಿ ದಿ.ಪ್ರೊ.ರಮೇಶ್ ಶರವಣಕುಮಾರ್ ಅವರ ಮಾರ್ಗದರ್ಶನದಲ್ಲಿ ಅಬ್ರಹಾಂ ವಧೆ ಮಾಡಲಾದ ಬ್ರಾಯ್ಲರ್ ಕೋಳಿಗಳ ತ್ಯಾಜ್ಯ ಮತ್ತು ಪೌಲ್ಟ್ರಿಗಳಲ್ಲಿ ಸತ್ತ ಕೋಳಿಗಳನ್ನು ಕಚ್ಚಾವಸ್ತುವನ್ನಾಗಿಸಿಕೊಂಡು ಬಯೊಡೀಸೆಲ್ ಉತ್ಪಾದನೆಯ ಕುರಿತು ಸಂಶೋಧನೆಯನ್ನು ನಡೆಸಿದ್ದರು. ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿವಿಯ ಪರವಾಗಿ ಪೇಟೆಂಟ್ಗಳಿಗೆ ಅರ್ಜಿ ಸಲ್ಲಿಸಿದ್ದ ಶರವಣಕುಮಾರ್ ಪೇಟೆಂಟ್ ಗಾಗಿ ಕಾಯುತ್ತಲೇ 2020,ನವೆಂಬರ್ ನಲ್ಲಿ ನಿಧನರಾಗಿದ್ದರು.

ಸಂಶೋಧನೆಯ ಬಳಿಕ ವಯನಾಡ್ ಸಮೀಪದ ಕಲ್ಪಟ್ಟಾದ ಪೂಕೊಡೆ ಪಶುವೈದ್ಯಕೀಯ ಕಾಲೇಜನ್ನು ಸೇರಿದ್ದ ಅಬ್ರಹಾಂ 2014ರಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅನುದಾನದೊಂದಿಗೆ ಕಾಲೇಜಿನ ಆವರಣದಲ್ಲಿ 18 ಲಕ್ಷ ರೂ.ವೆಚ್ಚದಲ್ಲಿ ಪ್ರಾಯೋಗಿಕ ಸ್ಥಾವರವನ್ನು ಸ್ಥಾಪಿಸಿದ್ದರು. 2015 ಎಪ್ರಿಲ್‌ನಲ್ಲಿ ಭಾರತ್ ಪೆಟ್ರೋಲಿಯಮ್ ನ ಕೊಚ್ಚಿ ರಿಫೈನರಿಯು ಆವಿಷ್ಕರಿಸಿದ್ದ ಬಯೋ ಡೀಸೆಲ್ ಗೆ ಗುಣಮಟ್ಟ ಪ್ರಮಾಣಪತ್ರವನ್ನು ನೀಡಿತ್ತು ಮತ್ತು ಆಗಿನಿಂದ ಕಾಲೇಜು ವಾಹನವು ಇದೇ ಇಂಧನವನ್ನು ಬಳಸಿ ಸಂಚರಿಸುತ್ತಿದೆ.

  ಚಿಕನ್ ತ್ಯಾಜ್ಯವನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಬ್ರಹಾಂ,ಪಕ್ಷಿಗಳು ಮತ್ತು ಹಂದಿಗಳು ಒಂದೇ ಜಠರವನ್ನು ಹೊಂದಿದ್ದು,ಅದು ಅಧಿಕ ಪ್ರಮಾಣದಲ್ಲಿ ಪರ್ಯಾಪ್ತ ಕೊಬ್ಬನ್ನು ಒಳಗೊಂಡಿರುತ್ತದೆ. ಇದರಿಂದಾಗಿ ಬಯೊಡೀಸೆಲ್ ತಯಾರಿಕೆಗೆ ಅಗತ್ಯವಾದ ಕೋಳಿ ಎಣ್ಣೆಯನ್ನು ಕೋಣೆಯ ತಾಪಮಾನದಲ್ಲಿ ಪಡೆಯಲು ಸುಲಭವಾಗುತ್ತದೆ ಎಂದು ತಿಳಿಸಿದರು.

ಅಬ್ರಹಾಂ ಈಗ ತನ್ನ ಮೂವರು ವಿದ್ಯಾರ್ಥಿಗಳೊಂದಿಗೆ ಹಂದಿಯ ತ್ಯಾಜ್ಯದಿಂದ ಬಯೋ ಡೀಸೆಲ್ ನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ವಾಣಿಜ್ಯ ಉತ್ಪಾದನೆ ಕುರಿತಂತೆ ಅಬ್ರಹಾಂ,ಹಿಂದುಸ್ಥಾನ ಪೆಟ್ರೋಲಿಯಮ್ ನ ತಂಡವೊಂದು ಕಳೆದ ಶುಕ್ರವಾರ ತನ್ನನ್ನು ಭೇಟಿಯಾಗಿತ್ತು. ಪೇಟೆಂಟ್ ತಮಿಳುನಾಡು ಪಶುವೈದ್ಯಕೀಯ ವಿವಿಗೆ ಲಭಿಸಿರುವುದರಿಂದ ವಾಣಿಜ್ಯ ಉತ್ಪಾದನೆಯ ಬಗ್ಗೆ ಚರ್ಚಿಸಲು ಕೋವಿಡ್ ಲಾಕ್ಡೌನ್ ಬಳಿಕ ತಾನು ತಂಡದೊಂದಿಗೆ ವಿವಿಗೆ ಭೇಟಿ ನೀಡುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News