​ಮುಂಬೈ : ಮಹಾಮಳೆಗೆ ಬಲಿಯಾದವರ ಸಂಖ್ಯೆ 149ಕ್ಕೆ ಏರಿಕೆ

Update: 2021-07-26 03:31 GMT

ಮುಂಬೈ: ಮಹಾರಾಷ್ಟ್ರದ ಕೊಂಕಣ ಪ್ರದೇಶವಾದ ರಾಯಗಢ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಈ ಜಿಲ್ಲೆಗಳಲ್ಲಿ ಮಳೆಯಿಂದ ಮೃತಪಟ್ಟವರ ಸಂಖ್ಯೆ 83ಕ್ಕೇರಿದೆ. 50 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಆದ ಸಾವಿನ ಸಂಖ್ಯೆ 149ಕ್ಕೇರಿದ್ದು, 64 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.

ಕೆಲ ಸಂತ್ರಸ್ತ ಪ್ರದೇಶಗಳಿಗೆ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಭೇಟಿ ನೀಡಿದ್ದು, ಜನ ಆಹಾರ, ನೀರು, ಔಷಧಿ ಮತ್ತು ಪ್ರಾಣಿಗಳಿಗೆ ಆಹಾರಕ್ಕಾಗಿ ಕೇಳಿದರು ಎಂದು ತಿಳಿದುಬಂದಿದೆ.

"ಸ್ಥಳೀಯರಿಗೆ ಆಹಾರ ಮತ್ತು ನೀರಿನ ಕೊರತೆ ವ್ಯಾಪಕವಾಗಿ ಕಾಡುತ್ತಿದೆ" ಎಂದು ರತ್ನಗಿರಿಯ ಚಿಪ್ಳೂಣ್ ನಿವಾಸಿ ರಾಜೇಂದ್ರ ಶಿಂಧೆ ಹೇಳಿದರು. "ವೈದ್ಯರು ಲಭ್ಯರಿಲ್ಲ; ಆದರೆ ಆಡಳಿತ ಯಂತ್ರ ಮಾತ್ರ ವೈದ್ಯಕೀಯ ತಂಡ ಆಗಮಿಸಿದೆ ಎಂದು ಹೇಳುತ್ತಿದೆ. ಕೆಸರಿನಿಂದ ಮುಚ್ಚಿಹೋಗಿರುವ ರಸ್ತೆಗಳನ್ನೂ ಸ್ವಚ್ಛಗೊಳಿಸಿಲ್ಲ" ನಾಪತ್ತೆಯಾಗಿರುವವರ ಸಂಖ್ಯೆಯಲ್ಲೂ ಗೊಂದಲವಿದ್ದು, ಸಚಿವಾಲಯದ ನಿಯಂತ್ರಣ ಕೊಠಡಿಯ ಅಂಕಿ ಅಂಶದಂತೆ 64 ಮಂದಿ ನಾಪತ್ತೆಯಾಗಿದ್ದಾರೆ. ಆದರೆ ಸಿಎಂ ಕಚೇರಿ ಹೇಳುವಂತೆ ಕಳೆದ 72 ಗಂಟೆಗಳಲ್ಲಿ 100 ಮಂದಿ ನಾಪತ್ತೆಯಾಗಿದ್ದಾರೆ.

ರಾಯಗಢ ಜಿಲ್ಲೆಯ ತಲಿಯೆ ಗ್ರಾಮದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತರ ಸಂಖ್ಯೆ 53ಕ್ಕೇರಿದೆ. 31 ಮಂದಿ ಇನ್ನೂ ಕಣ್ಮರೆಯಾಗಿದ್ದಾರೆ. 45 ಮನೆಗಳು ಸಂಪೂರ್ಣ ನಾಶವಾಗಿದ್ದು, ಉಳಿದುಕೊಂಡಿರುವ ಸಂತ್ರಸ್ತರಿಗೆ ಆಹಾರ, ನೀರು ಹಾಗೂ ವೈದ್ಯಕೀಯ ನೆರವು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಹದಿನಾಲ್ಕು ವರ್ಷಗಳ ಹಿಂದೆ ಭೂಕಂಪದ ಸಂದರ್ಭದಲ್ಲಿ ಬೆಟ್ಟದ ಬುಡದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿತ್ತು. ಇದು ಕುಸಿತಕ್ಕೆ ಕಾರಣ ಎಂದು ಸ್ಥಳೀಯ ಬುಡಕಟ್ಟು ಜನಾಂಗದವರು ಹೇಳುತ್ತಾರೆ. ಆದರೆ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ.

ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಎನ್‌ ಡಿ ಆರ್‌ ಎಫ್, ಎಸ್‌ ಡಿ ಆರ್‌ ಎಫ್, ಸೇನೆ, ನೌಕಾಪಡೆ ಮತ್ತು ಕರಾವಳಿ ಕಾವಲುಪಡೆ ತಂಡಗಳು ಸಂತ್ರಸ್ತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಇದುವರೆಗೆ 2.29 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಎನ್‌ ಡಿ ಆರ್‌ ಎಫ್ ಇನ್‌ಸ್ಪೆಕ್ಟರ್ ರಾಮ್‌ ಯಾದವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News