ಮತದಾರರಿಗೆ ಲಂಚ ಪ್ರಕರಣ: ತೆಲಂಗಾಣ ಸಂಸದೆಯನ್ನು ಅಪರಾಧಿ ಎಂದು ಘೋಷಿಸಿದ ಹೈದರಾಬಾದ್ ನ್ಯಾಯಾಲಯ

Update: 2021-07-26 07:25 GMT
Photo: Facebook

ಹೈದರಾಬಾದ್: ಮತದಾರರಿಗೆ 2019 ಲೋಕಸಭಾ ಚುನಾವಣೆ ವೇಳೆ ಲಂಚ ನೀಡಿದ ಪ್ರಕರಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಸಂಸದೆ ಕವಿತಾ ಮಲೋಥ್ ಅವರಿಗೆ  ಹೈದರಾಬಾದ್‍ನ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ವಾರಂಗಲ್ ಜಿಲ್ಲೆಯ ಮಹಬುಬಾಬಾದ್ ಕ್ಷೇತ್ರದಿಂದ ಗೆದ್ದಿದ್ದ ಕವಿತಾ ಅವರು 2019ರ ಚುನಾವಣೆಯಲ್ಲಿ ಮೊದಲ ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದರು.

ಸಂಸದರು, ಶಾಸಕರ ಪ್ರಕರಣಗಳ ವಿಚಾರಣೆಗೆಂದೇ ಇರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಕವಿತಾ ಅವರ ಬೆಂಬಲಿಗ ಶೌಕತ್ ಆಲಿ ಎಂಬಾತನನ್ನೂ ದೋಷಿ ಎಂದು ಘೋಷಿಸಿದ್ದಾರೆ. ಮತದಾರರಿಗೆ  ಹಣ ವಿತರಿಸುತ್ತಿದ್ದಾಗ ಆತನನ್ನು ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ವಶಪಡಿಸಿಕೊಂಡಿತ್ತು.

ರೂ 10,000 ದಂಡ ಪಾವತಿಸಿದ ಕವಿತಾ ಹಾಗೂ ಶೌಕತ್ ಆಲಿ ಅವರನ್ನು ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಇಬ್ಬರ ವಿರುದ್ಧವೂ ಐಪಿಸಿ ಸೆಕ್ಷನ್ 171-ಬಿ (ಲಂಚ) ಹಾಗೂ 188 (ಅಧಿಕೃತ ಆದೇಶದ ಉಲ್ಲಂಘನೆ)  ಪ್ರಕರಣ ದಾಖಲಿಸಲಾಗಿತ್ತು. ಎರಡನೇ ಆರೋಪದಿಂದ ಇಬ್ಬರನ್ನೂ ಖುಲಾಸೆಗೊಳಿಸಲಾಗಿದೆ.

ತನ್ನನ್ನು ದೋಷಿ ಎಂದು ಘೋಷಿಸಿದ ನ್ಯಾಯಾಲಯದ ಆದೇಶದ ವಿರುದ್ಧ ತೆಲಂಗಾಣ ಹೈಕೋರ್ಟಿನ ಮೊರೆ ಹೋಗುವುದಾಗಿ ಕವಿತಾ ಹೇಳಿದ್ದಾರೆ. ಆಕೆ ಒಂದು ತಿಂಗಳೊಳಗೆ ಮೇಲ್ಮನವಿ ಸಲ್ಲಿಸಬಹುದು ಎಂದು ವಿಶೇಷ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News