ಕೇಜ್ರಿವಾಲ್ ಮಾಜಿ ಪಿಎ, ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಯ ದೂರವಾಣಿ ಸಂಖ್ಯೆ ಪೆಗಾಸಸ್ ಪಟ್ಟಿಯಲ್ಲಿ

Update: 2021-07-26 18:42 GMT

ಹೊಸದಿಲ್ಲಿ,ಜು.26: ಇಸ್ರೇಲಿನ ಎನ್ಎಸ್ಒ ಗ್ರೂಪ್  ಪೆಗಾಸಸ್ ಸ್ಪೈ ವೇರ್ ನ ಸೋರಿಕೆಯಾಗಿರುವ ಡಾಟಾಬೇಸ್ ನಲ್ಲಿ ದಿಲ್ಲಿ ಮುಖ್ಯಮಂತ್ರಿಅರವಿಂದ ಕೇಜ್ರಿವಾಲ್ ಅವರ ಮಾಜಿ ಆಪ್ತ ಸಹಾಯಕ ಮತ್ತು ಹಲವಾರು ಉನ್ನತ ತನಿಖೆಗಳಲ್ಲಿ ಭಾಗಿಯಾಗಿರುವ ಜಾರಿ ನಿರ್ದೇಶನಾಲಯ (ಈ.ಡಿ)ದ ಅಧಿಕಾರಿಯೋರ್ವರು ಸಂಭಾವ್ಯ ಗುರಿಗಳಾಗಿದ್ದು ಬೆಳಕಿಗೆ ಬಂದಿದೆ ಎಂದು ಬೇಹುಗಾರಿಕೆ ಹಗರಣ ಕುರಿತು ಇನ್ನಷ್ಟು ವಿವರಗಳನ್ನು ಬಹಿರಂಗಗೊಳಿಸಿರುವ ಸುದ್ದಿಜಾಲತಾಣ ‘ದಿ ವೈರ್’ ತಿಳಿಸಿದೆ.

  ಹಿರಿಯ ಈ.ಡಿ.ಅಧಿಕಾರಿ ರಾಜೇಶ್ವರ ಸಿಂಗ್ ಅವರ ಎರಡು ದೂರವಾಣಿ ಸಂಖ್ಯೆಗಳು ಮತ್ತು ಅವರ ಕುಟುಂಬದ ಮೂವರು ಮಹಿಳೆಯರ ನಾಲ್ಕು ದೂರವಾಣಿ ಸಂಖ್ಯೆಗಳು ಸೋರಿಕೆಯಾಗಿರುವ ಪಟ್ಟಿಯಲ್ಲಿವೆ. ಕೇಜ್ರಿವಾಲ್ ಅವರ ಆಪ್ತ ಸಹಾಯಕನಾಗಿ ಕರ್ತವ್ಯ ನಿರ್ವಹಿಸಿದ್ದ ಮಾಜಿ ಐಎಎಸ್ ಅಧಿಕಾರಿ ವಿ.ಕೆ.ಜೈನ್ ಅವರನ್ನೂ ‘ಆಸಕ್ತಿಯ ವ್ಯಕ್ತಿ ’ಎಂದು ಪಟ್ಟಿಯಲ್ಲಿ ಗುರುತಿಸಲಾಗಿದೆ. 

ಸೋರಿಕೆಯಾಗಿರುವ ದಾಖಲೆಗಳಲ್ಲಿ ಪ್ರಧಾನಿ ಕಚೇರಿ ಮತ್ತು ನೀತಿ ಆಯೋಗದ ತಲಾ ಕನಿಷ್ಠ ಓರ್ವ ಅಧಿಕಾರಿಯ ದೂರವಾಣಿ ಸಂಖ್ಯೆಗಳೂ ಸೇರಿವೆ. ಪ್ರಧಾನಿ ಕಚೇರಿಯ ಅಧಿಕಾರಿ 2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸ ಕಾರ್ಯಕ್ರಮಗಳ ಉಸ್ತುವಾರಿಯಾಗಿದ್ದಾಗ ಎನ್ಎಸ್ಒ ಕಂಪನಿಯ ಭಾರತೀಯ ಗ್ರಾಹಕ ಅವರಲ್ಲಿ ಆಸಕ್ತಿಯನ್ನು ತೋರಿಸಿದ್ದಾಗಿ ಸುದ್ದಿಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

ಉತ್ತರ ಪ್ರದೇಶದ ಅಧಿಕಾರಿಯಾಗಿರುವ ರಾಜೇಶ್ವರ ಸಿಂಗ್ 2009ರಿಂದಲೂ ಈ.ಡಿ.ಯಲ್ಲಿ ಸೇವೆ ಸಲ್ಲಿಸುತ್ತಿದ್ದು,2ಜಿ ಸ್ಪೆಕ್ಟ್ರಂ ಮತ್ತು ಏರ್ಸೆಲ್- ಮ್ಯಾಕ್ಸಿಸ್ನಂತಹ ಹಲವಾರು ಪ್ರಮುಖ ಪ್ರಕರಣಗಳ ತನಿಖೆಗಳಲ್ಲಿ ಭಾಗಿಯಾಗಿದ್ದರು. ಅವರನ್ನು ಪಟ್ಟಿಯಲ್ಲಿ 2017-2019ರ ಅವಧಿಗೆ ಗುರಿಯನ್ನಾಗಿ ಹೆಸರಿಸಲಾಗಿದೆ.
ಸೋರಿಕೆಯಾಗಿರುವ ದಾಖಲೆಗಳಲ್ಲಿಯ ಒಂದು ದೂರವಾಣಿ ಸಂಖ್ಯೆ ಸಿಂಗ್ ಸೋದರಿ ಆಭಾ ಸಿಂಗ್ ಅವರದಾಗಿದೆ. ಮುಂಬೈನಲ್ಲಿ ನೆಲೆಸಿರುವ ಆಭಾ ಐಎಎಸ್ ಅಧಿಕಾರಿಯಾಗಿದ್ದು,ನಂತರ ವಕೀಲಿ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. 

ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಹಲವಾರು ಪ್ರತಿಷ್ಠಿತ ಪ್ರಕರಣಗಳನ್ನು ನಿರ್ವಹಿಸಿರುವ ಆಭಾ ತನ್ನ ಮೊಬೈಲ್ ಫೋನ್ ನ್ನು ವಿಧಿವಿಜ್ಞಾನ ವಿಶ್ಲೇಷಣೆಗೊಳಪಡಿಸಲು ಒಪ್ಪಿಕೊಂಡಿದ್ದು,ಅದು ಅಪೂರ್ಣವಾಗಿದೆ ಎಂದು ದಿ ವೈರ್ ತಿಳಿಸಿದೆ. ಅವರು ಫೋನ್ ನ್ನು 2018-2019ರ ನಡುವೆ ಬಳಸಿದ್ದು,ಬಳಿಕ ತಮ್ಮ ಪುತ್ರನಿಗೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News