ಅಸ್ಸಾಂ-ಮಿಜೋರಾಮ್ ಗಡಿಯಲ್ಲಿ ಗುಂಡು ಹಾರಾಟ: ಟ್ವಿಟರ್ ನಲ್ಲಿ ಉಭಯ ಮುಖ್ಯಮಂತ್ರಿಗಳ ಕಚ್ಚಾಟ

Update: 2021-07-26 17:51 GMT
Photo source: Twitter/ @ZoramthangaCM

ಗುವಾಹಟಿ,ಜು.26: ವಿವಾದಾತ್ಮಕ ಅಸ್ಸಾಂ-ಮಿಜೋರಾಮ್ ಗಡಿಯಲ್ಲಿ ಸೋಮವಾರ ಹೊಸದಾಗಿ ಹಿಂಸಾಚಾರಗಳು ಭುಗಿಲೆದ್ದಿದ್ದು, ಅಸ್ಸಾಮಿನ ಕಾಚಾರ್ ಜಿಲ್ಲೆ ಮತ್ತು ಮಿಜೋರಾಮ್ ನ ಕೊಲಾಸಿಬ್ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಗಡಿಪ್ರದೇಶದಲ್ಲಿ ಗುಂಡು ಹಾರಾಟವೂ ವರದಿಯಾಗಿದೆ. ಉದ್ರಿಕ್ತ ಗುಂಪುಗಳು ಸರಕಾರಿ ವಾಹನಗಳ ಮೇಲೂ ದಾಳಿಗಳನ್ನು ನಡೆಸಿವೆ. 

ಎರಡು ದಿನಗಳ ಹಿಂದಷ್ಟೇ ಕೇಂದ್ರ ಸಚಿವ ಅಮಿತ್ ಶಾ ಅವರು ಶಿಲ್ಲಾಂಗ್ನಲ್ಲಿ ಎಲ್ಲ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದರು.
ಅಸ್ಸಾಂ ಮತ್ತು ಮಿಜೋರಾಮ್ ಮುಖ್ಯಮಂತ್ರಿಗಳು ಟ್ವಿಟರ್ ನಲ್ಲಿ ಕಚ್ಚಾಡಿಕೊಂಡಿದ್ದು, ತಮ್ಮ ಪೋಸ್ಟ್ ಗಳಲ್ಲಿ ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿದ್ದಾರೆ.

ಜನರು ದೊಣ್ಣೆಗಳಿಂದ ಸಜ್ಜಿತರಾಗಿದ್ದ ಹಿಂಸಾಚಾರದ ವೀಡಿಯೊವೊಂದನ್ನು ಟ್ವೀಟ್ ಮಾಡಿರುವ ಮಿಜೋರಾಮ್ ಮುಖ್ಯಮಂತ್ರಿ ರೆರಾಮತಂಗ್ ಅವರು ಶಾ ಅವರ ಮಧ್ಯಪ್ರವೇಶವನ್ನು ಕೋರಿದ್ದು,ಇದನ್ನು ಈಗಲೇ ನಿಲ್ಲಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಕಾಚಾರ್ ಮೂಲಕ ಮಿಜೋರಾಮ್ಗೆ ಮರಳುತ್ತಿದ್ದ ಅಮಾಯಕ ದಂಪತಿಯ ಮೇಲೆ ಗೂಂಡಾಗಳು ಹಲ್ಲೆ ನಡೆಸಿ ದೋಚಿದ್ದಾರೆ. ಈ ಹಿಂಸಾಕೃತ್ಯಗಳನ್ನು ನೀವು ಹೇಗೆ ಸಮರ್ಥಿಕೊಳ್ಳುತ್ತೀರಿ ಎಂದು ಇನ್ನೊಂದು ಟ್ವೀಟ್ ನಲ್ಲಿ ಅವರು ಪ್ರಶ್ನಿಸಿದ್ದಾರೆ.

‘ಮಾನ್ಯ ರೆರಾಮತಂಗ್ ಅವರೇ. ನಾವು ನಮ್ಮ ನೆಲೆಯಿಂದ ಹಿಂದೆ ಸರಿಯುವವರೆಗೂ ತಮ್ಮ ಜನರು ಮಾತನ್ನು ಕೇಳುವುದಿಲ್ಲ, ಹಿಂಸಾಚಾರವನ್ನೂ ನಿಲ್ಲಿಸುವುದಿಲ್ಲ ಎಂದು ಕೊಲಾಸಿಬ್ ಎಸ್ಪಿ ಹೇಳುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ನಾವು ಸರಕಾರವನ್ನು ನಡೆಸುವುದು ಹೇಗೆ? ನೀವು ಸಾಧ್ಯವಾದಷ್ಟು ಶೀಘ್ರ ಹಸ್ತಕ್ಷೇಪ ಮಾಡುತ್ತೀರಿ ಎಂದು ಆಶಿಸಿದ್ದೇವೆ ’ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಟ್ವೀಟಿಸಿದ್ದಾರೆ.

ಮಿಜೋರಾಮ್ ನ ಐಜ್ವಾಲ್,ಕೊಲಾಸಿಬ್ ಮತ್ತು ಮಮಿತ್ ಜಿಲ್ಲೆಗಳು ಅಸ್ಸಾಮಿನ ಕಾಚಾರ್,ಹೈಲಾಕಂಡಿ ಮತ್ತು ಕರೀಮಗಂಜ್ ಜಿಲ್ಲೆಗಳೊಂದಿಗೆ 164.6 ಕಿ.ಮೀ.ಉದ್ದದ ಅಂತರರಾಜ್ಯ ಗಡಿಯನ್ನು ಹಂಚಿಕೊಂಡಿವೆ. 

ವರ್ಷಗಳಿಂದಲೂ ಗಡಿಯ ವಿವಾದಾತ್ಮಕ ಪ್ರದೇಶಗಳಲ್ಲಿ ಘರ್ಷಣೆಗಳು ನಡೆಯುತ್ತಲೇ ಇದ್ದು,ಎರಡೂ ಕಡೆಗಳ ನಿವಾಸಿಗಳು ಪರಸ್ಪರ ಅತಿಕ್ರಮಣವನ್ನು ಆರೋಪಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News