ಅಕ್ರಮ ಔಷಧಿ ದಾಸ್ತಾನು: ಗೌತಮ್ ಗಂಭೀರ್ ಫೌಂಡೇಶನ್ ವಿರುದ್ಧ ಕ್ರಮಕ್ಕೆ ತಡೆಯಾಜ್ಞೆ ವಿಧಿಸಲು ನಿರಾಕರಿಸಿದ ಸುಪ್ರೀಂ

Update: 2021-07-26 11:28 GMT

ಹೊಸದಿಲ್ಲಿ: ಕೋವಿಡ್ 2ನೇ ಅಲೆ ಸಂದರ್ಭ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿದ್ದ ಔಷಧಿಗಳನ್ನು ಅಕ್ರಮವಾಗಿ ದಾಸ್ತಾನಿರಿಸಿ ವಿತರಿಸಿದ ಆರೋಪವೆದುರಿಸುತ್ತಿರುವ ಗೌತಮ್ ಗಂಭೀರ್ ಫೌಂಡೇಶನ್ ವಿರುದ್ಧ ದಿಲ್ಲಿಯ ಔಷಧ ನಿಯಂತ್ರಕರು ಕೈಗೊಳ್ಳಬಹುದಾದ ಕ್ರಮಕ್ಕೆ  ತಡೆಯಾಜ್ಞೆ ವಿಧಿಸಲು ಇಂದು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

"ಜನರು ಔಷಧಿಗಾಗಿ ಅಲೆದಾಡುತ್ತಿದ್ದರು. ಆ ಸಂದರ್ಭ ಈ   ಟ್ರಸ್ಟ್ ದಿಢೀರನೇ ಪ್ರತ್ಯಕ್ಷವಾಗಿ ನಾವು ನಿಮಗೆ ಔಷಧಿಗಳನ್ನು ನೀಡುತ್ತೇನೆ ಎಂದು ಹೇಳಿದೆ. ಇದು ಸರಿಯಲ್ಲ" ಎಂದು ಪ್ರಕರಣದ ವಿಚಾರಣೆ ನಡೆಸಿದ ಜಸ್ಟಿಸ್ ಡಿ ವೈ ಚಂದ್ರಚೂಡ್ ಹಾಗೂ ಎಂ ಆರ್ ಶಾ ಅವರ ಪೀಠ ಹೇಳಿದೆ.

ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಒಡೆತನದ ಈ ಫೌಂಡೇಶನ್ ಅಪೀಲನ್ನು ಪರಿಗಣಿಸಲು ನಿರಾಕರಿಸಿದ ನ್ಯಾಯಾಲಯ, ಅಗತ್ಯವಿದ್ದರೆ ದಿಲ್ಲಿ ಹೈಕೋರ್ಟ್ ಗೆ ಅಪೀಲು ಸಲ್ಲಿಸುವಂತೆ ಹೇಳಿದೆ.

ಸಾಂಕ್ರಾಮಿಕದ ಸಂದರ್ಭ ಔಷಧಿಗಳನ್ನು ಅಕ್ರಮ ದಾಸ್ತಾನಿರಿಸಿ ಕೆಲವು ರಾಜಕಾರಣಿಗಳು ಮತ್ತು ಇತರರು ಕಾಳಸಂತೆಯಲ್ಲಿ  ಒದಗಿಸುತ್ತಿದ್ದಾರೆಂದು ದೂರಿ ಹಾಗೂ ಅಂತಹವರ ವಿರುದ್ಧ ಕ್ರಮ ಆಗ್ರಹಿಸಿ ಅಪೀಲು ಸಲ್ಲಿಸಲಾಗಿತ್ತು.

ಮುಂದೆ ನ್ಯಾಯಾಲಯ ಇಂತಹ ಪದ್ಧತಿಗಳಿಗೆ ಆಕ್ಷೇಪಿಸಿ ದಿಲ್ಲಿ ಔಷಧ ನಿಯಂತ್ರಕರಿಗೆ ತನಿಖೆಗೆ ಸೂಚಿಸಿತ್ತು. ಆದರೆ ನಡೆಸಲಾದ ತನಿಖೆ ಸಮಾಧಾನಕರವಾಗಿಲ್ಲ ಎಂದು ಮೇ 31ರಂದು ನ್ಯಾಯಾಲಯವು ದಿಲ್ಲಿ ಔಷಧಿ ನಿಯಂತ್ರಕರನ್ನು ತರಾಟೆಗೆ ತೆಗೆದುಕೊಂಡಿತ್ತು. ಕೊನೆಗೆ ಔಷಧ ನಿಯಂತ್ರಕರು ತನಿಖೆ ಪೂರ್ಣಗೊಳಿಸಿ ಗೌತಮ್ ಗಂಭೀರ್ ಫೌಂಡೇಶನ್ ಅಕ್ರಮವಾಗಿ ಫ್ಯಾಬಿಫ್ಲೂ ಮತ್ತು ಆಕ್ಸಿಜನ್  ಪಡೆದುಕೊಂಡಿದೆ ಎಂದು ಹೇಳಿ ಅದನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು. ಫೌಂಡೇಶನ್ ಹಾಗೂ ಅದಕ್ಕೆ ಅಕ್ರಮವಾಗಿ ಔಷಧಿ ಪೂರೈಸಿದವರ ವಿರುದ್ಧ ಕ್ರಮಕ್ಕೆ ನ್ಯಾಯಾಲಯ ಸೂಚಿಸಿತ್ತು.

ಈ ಪ್ರಕರಣದ  ವಿಚಾರಣೆ ದಿಲ್ಲಿ ಹೈಕೋರ್ಟಿನಲ್ಲಿ ಜುಲೈ 29ರಂದು  ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News