ಪೆಗಾಸಸ್:ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆಗೆ ತರೂರ್ ಆಗ್ರಹ

Update: 2021-07-26 14:59 GMT

ಹೊಸದಿಲ್ಲಿ,ಜು.26: ಪೆಗಾಸಸ್ ಬೇಹುಗಾರಿಕೆ ಆರೋಪಗಳ ಕುರಿತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆಗೆ ಸೋಮವಾರ ಆಗ್ರಹಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು,ಈ ಬಗ್ಗೆ ಚರ್ಚೆಗೆ ಸರಕಾರವು ಒಪ್ಪುವವರೆಗೆ ಪ್ರತಿಪಕ್ಷಗಳು ಸಂಸತ್ ಕಲಾಪಗಳಿಗೆ ವ್ಯತ್ಯಯವನ್ನು ಮುಂದುವರಿಸಲಿವೆ ಎಂದು ಸುಳಿವು ನೀಡಿದರು.

ಸರಕಾರವು ತನ್ನ ಸ್ವಾರ್ಥ ರಾಜಕೀಯ ಹಿತಾಸಕ್ತಿಗಳಿಗಾಗಿ ಸಾರ್ವಜನಿಕರ ಹಣವನ್ನು ಬಳಸಿರುವಂತಿದೆ ಎಂದು ಅವರು ಆರೋಪಿಸಿದರು.
 
ಲೋಕಸಭೆಯ ಮುಂದೂಡಿಕೆಯ ಬಳಿಕ ಸಂಸತ್ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್,‘ಪೆಗಾಸಸ್ ವಿಷಯದಲ್ಲಿ ಚರ್ಚೆಗೆ ಸರಕಾರವು ಒಪ್ಪಬೇಕೆಂದು ನಾವು ಬಯಸಿದ್ದೇವೆ,ಆದರೆ ಚರ್ಚೆಗೆ ಅದು ಸಿದ್ಧವಿಲ್ಲ. ಚರ್ಚೆಗೆ ಮತ್ತು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸರಕಾರವು ಒಪ್ಪದಿದ್ದರೆ ಕಲಾಪಗಳನ್ನು ನಡೆಸಲು ನಾವೇಕೆ ಅವಕಾಶ ನೀಡಬೇಕು? ಬೆಲೆ ಏರಿಕೆ ಮತ್ತು ವಿವಾದಾತ್ಮಕ ಕೃಷಿ ಕಾಯ್ದೆಗಳಂತಹ ವಿಷಯಗಳೂ ಪ್ರತಿಪಕ್ಷಗಳಿಗೆ ಮಹತ್ವದ್ದಾಗಿವೆ,ಆದರೆ ಪೆಗಾಸಸ್ ವಿವಾದವು ಆದ್ಯತೆಯದಾಗಿದೆ ’ಎಂದು ಹೇಳಿದರು.

ಪೆಗಾಸಸ್ ವಿಷಯದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರು ಸಂಸತ್ತಿನ ಉಭಯ ಸದನಗಳಲ್ಲಿ ನೀಡಿದ ಹೇಳಿಕೆಯನ್ನು ಗೇಲಿ ಮಾಡಿದ ಅವರು,ಅವರು ಪ್ರತಿಪಕ್ಷಗಳ ಅಹವಾಲು ಆಲಿಸದೆ ಕೇವಲ ತನ್ನ ‘ಮನ್ ಕಿ ಬಾತ್ ’ ಅನ್ನು ಹಂಚಿಕೊಂಡಿದ್ದಾರೆ ಎಂದರು. ಬೇಹುಗಾರಿಕೆ ಆರೋಪವು ಭಾರತದ ಹೆಸರು ಕೆಡಿಸುವ ಪ್ರಯತ್ನವಾಗಿದ್ದು,ಅದರಲ್ಲಿ ಯಾವುದೇ ಹುರುಳು ಇಲ್ಲ ಎಂದು ವೈಷ್ಣವ ಬಣ್ಣಿಸಿದ್ದರು.

ತರೂರ್ ನೇತೃತ್ವದ ಮಾಹಿತಿ ಮತ್ತು ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಪೆಗಾಸಸ್ ಬೇಹುಗಾರಿಕೆ ಆರೋಪಗಳ ಕುರಿತಂತೆ ಸದ್ಯವೇ ಗೃಹ ಸಚಿವಾಲಯ ಸೇರಿದಂತೆ ಹಿರಿಯ ಸರಕಾರಿ ಅಧಿಕಾರಿಗಳನ್ನು ಪ್ರಶ್ನಿಸುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

32 ಸದಸ್ಯರ ಸಮಿತಿಯು ಜು.28ರಂದು ಸಭೆ ಸೇರಲಿದ್ದು, ‘ಪ್ರಜೆಗಳ ಡಾಟಾ ಭದ್ರತೆ ಮತ್ತು ಖಾಸಗಿತನ’ ಸಭೆಯ ಅಜೆಂಡಾದಲ್ಲಿ ಸೇರಿದೆ ಎಂದು ಲೋಕಸಭಾ ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News