ಲೋಕಸಭೆ: ದಿವಾಳಿತನ ಕಾಯ್ದೆಗೆ ತಿದ್ದುಪಡಿ ಮಸೂದೆ ಮಂಡನೆ

Update: 2021-07-26 17:14 GMT

ಹೊಸದಿಲ್ಲಿ, ಜು.26:ಕೇಂದ್ರ ವಿತ್ತ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ವಿವಿಧ ವಿಷಯಗಳಿಗೆ ಸಂಬಂಧಿಸಿ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಕೋಲಾಹಲದ ನಡುವೆಯೇ ದಿವಾಳಿತನ ಕಾಯ್ದೆಗೆ ತಿದ್ದುಪಡಿಯನ್ನು ತಂದಿದ್ದ ಅಧ್ಯಾದೇಶದ ಬದಲಿಗೆ ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ,2021 ಅನ್ನು ಮಂಡಿಸಿದರು.

ಎ.4ರಂದು ಅಧ್ಯಾದೇಶದ ಮೂಲಕ ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆ (ಐಬಿಸಿ)ಗೆ ತಿದ್ದುಪಡಿಯನ್ನು ತರಲಾಗಿತ್ತು. ತನ್ಮೂಲಕ ಈ ಸಂಹಿತೆಯಡಿ ಒತ್ತಡದಲ್ಲಿರುವ ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗಾಗಿ ಪೂರ್ವ ಪ್ಯಾಕೇಜ್ ಪರಿಹಾರ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗಿತ್ತು.
ಸಾಮಾನ್ಯವಾಗಿ ಪೂರ್ವ ಪ್ಯಾಕೇಜ್ ಪರಿಹಾರದಡಿ ರಾಷ್ಟ್ರಿಯ ಕಂಪನಿ ಕಾಯ್ದೆ ನ್ಯಾಯಾಧಿಕರಣ (ಎನ್ಸಿಎಲ್ಟಿ)ಕ್ಕೆ ಹೋಗುವ ಮುನ್ನ ಸಾಲದಾತರು ಮತ್ತು ಶೇರುದಾರರಂತಹ ಕಂಪನಿಯ ಪ್ರಮುಖ ಪಾಲುದಾರರು ಸಂಭಾವ್ಯ ಖರೀದಿದಾರರನ್ನು ಗುರುತಿಸಲು ಮತ್ತು ಪರಿಹಾರ ಯೋಜನೆಯ ಬಗ್ಗೆ ಚರ್ಚಿಸಲು ಒಟ್ಟಿಗೆ ಸೇರುತ್ತಾರೆ.

ಐಬಿಸಿಯಡಿ ಎಲ್ಲ ಪರಿಹಾರ ಯೋಜನೆಗಳು ಎನ್ಸಿಎಲ್ಟಿಯ ಅನುಮತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News