ಕಾರ್ಗಿಲ್ ವಿಜಯೋತ್ಸವ: ದೇಶಾದ್ಯಂತ ಯೋಧರಿಗೆ ಗೌರವ ಸಲ್ಲಿಕೆ

Update: 2021-07-26 17:26 GMT
Photo: witter.com/rashtrapatibhvn

ಹೊಸದಿಲ್ಲಿ, ಜು. 26: ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದ 22ನೇ ವರ್ಷಾಚರಣೆಯ ಅಂಗವಾಗಿ ಸೋಮವಾರ ಹುತಾತ್ಮ ಯೋಧರಿಗೆ ದೇಶಾದ್ಯಂತ ಗೌರವ ಸಲ್ಲಿಸಲಾಯಿತು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸೇನಾ ವರಿಷ್ಠರು ರಾಜಕೀಯ ಮುಖಂಡರು, ಗಣ್ಯರು, ನಾಗರಿಕರು ಯೋಧರನ್ನು ಸ್ಮರಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.

ಕೋವಿಂದ್ ಅವರು ಲಡಾಕ್ ನ ದ್ರಾಸ್ನಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ, ಹವಾಮಾನ ವೈಪರಿತ್ಯದ ಕಾರಣಕ್ಕೆ ಅವರು ಭೇಟಿಯನ್ನು ರದ್ದುಪಡಿಸಿದ್ದರು. ಅದಕ್ಕೆ ಬದಲಾಗಿ ಬಾರಮುಲ್ಲಾದಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಈ ಸ್ಮಾರಕ ದೇಶದ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಶೂರ ಯೋಧರಿಗೆ ಗೌರವ ಸಲ್ಲಿಸುವಂತೆ ಪ್ರೇರೇಪಿಸುತ್ತದೆ ಎಂದರು. ಹುತಾತ್ಮ ಯೋಧರನ್ನು ಸ್ಮರಿಸಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹುತಾತ್ಮರಾಗಿರುವ ಯೋಧರು ನಮಗೆ ಪ್ರೇರಣೆಯಾಗಿದ್ದಾರೆ. ಯೋಧರ ತ್ಯಾಗ ಹಾಗೂ ಶೌರ್ಯವನ್ನು ದೇಶ ಸ್ಮರಿಸುತ್ತದೆ ಎಂದಿದ್ದಾರೆ.

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಯೋಧರ ತ್ಯಾಗವನ್ನು ದೇಶ ಯಾವಾಗಲೂ ನೆನಪಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ನಮ್ಮ ತ್ರಿವರ್ಣ ಧ್ವಜದ ಗೌರವ, ಘನತೆಯನ್ನು ಎತ್ತಿ ಹಿಡಿಯಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಪ್ರತಿಯೊಬ್ಬ ಯೋಧರಿಗೂ ಹೃದಯ ಪೂರ್ವಕ ಶ್ರದ್ಧಾಂಜಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕಾರ್ಗಿಲ್ ವಿಜಯ ದಿವಸವಾದ ಇದು ನಮ್ಮ ದೇಶವನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಯೋಧರಿಗೆ ವಂದಿಸುತ್ತೇನೆ. ಶೂರ ಯೋಧರಿಗೆ ಭಾರತ ಯಾವತ್ತೂ ಚಿರಋಣಿ ಎಂದು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News