ಭಾರತದಲ್ಲಿ ಕೋವಿಡ್‌ನಿಂದ ಸಾವಿಗೀಡಾದವರು 27- 33 ಲಕ್ಷ: ಟೊರೊಂಟೊ ವಿವಿ

Update: 2021-07-27 04:02 GMT

ಹೊಸದಿಲ್ಲಿ, ಜು.27: ಭಾರತದಲ್ಲಿ ಕೋವಿಡ್-19 ಸೋಂಕಿನ ಎರಡು ಅಲೆಗಳಿಂದಾಗಿ ಕನಿಷ್ಠ 27 ಲಕ್ಷದಿಂದ 33 ಲಕ್ಷ ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಟೊರೊಂಟೊ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನ ಬಹಿರಂಗಪಡಿಸಿದೆ.

ಟೊರೊಂಟೊ ವಿವಿಯ ಸೆಂಟರ್ ಫಾರ್ ಗ್ಲೋಬಲ್ ಹೆಲ್ತ್ ರೀಸರ್ಚ್‌ನ ಡಾ.ಪ್ರಭಾತ್ ಝಾ ಹಾಗೂ ಡರ್ಟ್ಮೌತ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಡಾ.ಪಾಲ್ ನೊವೊಸಾದ್ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ಈ ಅಂಶ ಬಹಿರಂಗಪಡಿಸಲಾಗಿದೆ. ಆದರೆ ಭಾರತದಲ್ಲಿ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ ಮೃತಪಟ್ಟವರ ಸಂಖ್ಯೆ 4.21 ಲಕ್ಷ!

2020 ಮತ್ತು 2021ರ ಜೂನ್ ನಡುವೆ ಎಂಟು ರಾಜ್ಯಗಳು ಹಾಗೂ ಏಳು ನಗರಗಳಲ್ಲಿ ದಾಖಲಾದ ಮರಣ ಪ್ರಮಾಣ ಲೆಕ್ಕಾಚಾರದ ಆಧಾರದಲ್ಲಿ ಕೋವಿಡ್-19 ಸೋಂಕಿತರ ಸಾವಿನ ಸಂಖ್ಯೆಯನ್ನು ಅಂದಾಜಿಸಲಾಗಿದೆ.

ಭಾರತದಲ್ಲಿ ಕೋವಿಡ್-19 ಸೋಂಕಿನ ಮೊದಲ ಅವಧಿಯ ವೇಳೆ 2020ರಲ್ಲಿ ದಾಖಲಾದ ಸರಾಸರಿ ಹೆಚ್ಚುವರಿ ಮರಣ ಪ್ರಮಾಣ ಶೇಕಡ 22ರಷ್ಟಾಗಿದ್ದು, ಆಂಧ್ರ ಪ್ರದೇಶದಲ್ಲಿ ಮರಣ ಪ್ರಮಾಣ ಶೇಕಡ 63ರಷ್ಟು ಹೆಚ್ಚಾಗಿದ್ದರೆ, ಕೇರಳದಲ್ಲಿ ಈ ಪ್ರಮಾಣ ಶೇಕಡ 6ರಷ್ಟು ಮಾತ್ರ ಅಧಿಕವಾಗಿದೆ. ಆದರೆ 2021ರ ಎಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಅಂದರೆ ಎರಡನೇ ಅಲೆ ಅವಧಿಯಲ್ಲಿ ಸಾವಿನ ಪ್ರಮಾಣದಲ್ಲಿ ಶೇಕಡ 46ರಷ್ಟು ಹೆಚ್ಚಳ ಕಂಡುಬಂದಿದೆ. ಮಧ್ಯಪ್ರದೇಶದಲ್ಲಂತಲೂ ಮರಣ ಪ್ರಮಾಣ ಹೆಚ್ಚಳ ಅತ್ಯಧಿಕ ಅಂದರೆ 198% ಆಗಿದೆ.

ಅಧಿಕ ಮರಣ ಪ್ರಮಾಣ ಎಂದರೆ 2020 ಮತ್ತು 2021ರಲ್ಲಿ ಯಾವುದೇ ಕಾರಣದಿಂದ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆಯನ್ನು ಹಿಂದಿನ ವರ್ಷಗಳ ಜತೆ ಹೋಲಿಕೆ ಮಾಡಿದಾಗ ಅಧಿಕವಾಗಿ ಕಂಡುಬರುವ ಸಂಖ್ಯೆಯಾಗಿದೆ. ಈ ಹೆಚ್ಚುವರಿ ಸಾವುಗಳು ಬಹುತೇಕ ಕೋವಿಡ್-19ನಿಂದ ಸಂಭವಿಸಿವೆ ಎನ್ನುವುದು ಸಂಶೋಧಕರ ಅಭಿಪ್ರಾಯ. ಆದರೆ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಹೆಚ್ಚುವರಿ ಸಾವನ್ನು ಅಧ್ಯಯನದಲ್ಲಿ ಪರಿಗಣಿಸಿಲ್ಲ. ಏಕೆಂದರೆ ಇದು ಕೋವಿಡ್ ಸಾವು ಆಗಿರುವ ಸಾಧ್ಯತೆ ಇಲ್ಲ ಎಂದು ಅಧ್ಯಯನ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News