ಯಡಿಯೂರಪ್ಪ ಪರ್ವ: ಏಳು-ಬೀಳು; ಮುಖ್ಯಮಂತ್ರಿಯಾಗಿ

Update: 2021-07-27 04:25 GMT

ಬೂಕನಕೆರೆಯ ಸಾಮಾನ್ಯ ವ್ಯಕ್ತಿಯೊಬ್ಬ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟು, ಸಂಘಟನೆ, ಹೋರಾಟ, ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡು, ಅಲ್ಲಿಂದ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿ ಹಂತ ಹಂತವಾಗಿ ಬೆಳೆಯುತ್ತ ಬಂದು ಈ ರಾಜ್ಯದ ಅತ್ಯುನ್ನತ ಪದವಿಯಾದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದರು. ಇವರೇ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಇವರ ಈ ಬೆಳವಣಿಗೆ ಪ್ರಜಾಪ್ರಭುತ್ವದ ಆಶಯಕ್ಕೊಂದು ಉತ್ತಮ ಉದಾಹರಣೆ. ಹಾಗೆ ನೋಡಿದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯ ಭಾರತೀಯ ಜನತಾ ಪಾರ್ಟಿಯಲ್ಲಿದ್ದರೂ, ಕೋಮುವಾದಿ ಎನಿಸಿಕೊಂಡವರಲ್ಲ. ಹಿಂದುತ್ವದ ಪ್ರತಿಪಾದಕರಾದರೂ, ಜಾತ್ಯತೀತ ಗುಣಗಳನ್ನು ಬಿಟ್ಟುಕೊಟ್ಟವರಲ್ಲ. ಇಂತಹ ಯಡಿಯೂರಪ್ಪನವರು ಬೆಳೆದು ಬಂದ ಬಗೆಯನ್ನು, ಸವೆಸಿದ ಹಾದಿಯನ್ನು, ಸಹಿಸಿದ ಸಂಕಟಗಳನ್ನು, ಅನುಭವಿಸಿದ ಅಧಿಕಾರವನ್ನು, ಆ ಅಧಿಕಾರ ತಂದಿಟ್ಟ ಅನಾಹುತವನ್ನು... ಅಧಿಕಾರದಿಂದ ಕೆಳಗಿಳಿಯುತ್ತಿರುವ ಈ ಹೊತ್ತಿನಲ್ಲಿ ಹಿಂದಿರುಗಿ ನೋಡುವ ಒಂದು ಪುಟ್ಟ ಪ್ರಯತ್ನವಿದು.


2006ರಲ್ಲಿ ಧರಂಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಜೆಡಿಎಸ್ ಹಿಂಪಡೆಯಿತು. ನಂತರ ರಚನೆಗೊಂಡ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರು. ಮೊದಲ 20 ತಿಂಗಳು ಕುಮಾರಸ್ವಾಮಿ ಮುಖ್ಯಮಂತ್ರಿ ಮತ್ತು ನಂತರದ 20 ತಿಂಗಳು ಯಡಿಯೂರಪ್ಪ ಮುಖ್ಯಮಂತ್ರಿ ಎಂದು ಸರಕಾರ ರಚನೆ ಸಂದರ್ಭದಲ್ಲಿ ಉಭಯ ಪಕ್ಷಗಳ ನಡುವೆ ಒಪ್ಪಂದವಾಗಿತ್ತು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಉಪಮುಖ್ಯಮಂತ್ರಿ ಯಡಿಯೂರಪ್ಪ ಹಣಕಾಸು ಖಾತೆಗೂ ಸಚಿವರಾಗಿದ್ದರು. ಒಪ್ಪಂದದಂತೆ 2007ರ ಅಕ್ಟೋಬರ್‌ನಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗ ಬೇಕಾದಾಗ, ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲು ನಿರಾಕರಿಸಿದರು. ಜೆಡಿಎಸ್ ನಡೆ ವಿರೋಧಿಸಿ ಯಡಿಯೂರಪ್ಪ ಮತ್ತು ಬಿಜೆಪಿಯ ಎಲ್ಲ ಸಚಿವರು ರಾಜೀನಾಮೆ ನೀಡಿದರು. ಸಮ್ಮಿಶ್ರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಅಕ್ಟೋಬರ್ 5ರಂದು ಬಿಜೆಪಿ ಹಿಂಪಡೆಯಿತು. ನಂತರ ರಾಷ್ಟ್ರಪತಿ ಆಡಳಿತ ಆರಂಭವಾಯಿತು. ನವೆಂಬರ್ 7ರಂದು ಬಿಜೆಪಿ ಮತ್ತು ಜೆಡಿಎಸ್ ನಡುವಿನ ಭಿನ್ನಮತ ಶಮನಗೊಂಡು ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಂಡಿತು.

2007ರ ನವೆಂಬರ್ 12ರಂದು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ, ಸಚಿವರಿಗೆ ಖಾತೆ ಹಂಚಿಕೆ ವೇಳೆ ಭಿನ್ನಮತ ಉಲ್ಬಣಗೊಂಡಿತು. ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸಮ್ಮಿಶ್ರ ಸರಕಾರ ಅಂತ್ಯಗೊಂಡು, ಯಡಿಯೂರಪ್ಪ 2007ರ ನ.19ಕ್ಕೆ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದರು. 2008ರ ಮೇ 30ರಂದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 2011ರ ಜುಲೈ 31 ರವರೆಗೆ 3 ವರ್ಷ 62 ದಿನಗಳ ಕಾಲ ಅವರು ಸಿಎಂ ಆಗಿದ್ದರು.

ಹಳ್ಳಿಯ ಬಡಕುಟುಂಬ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೂಕನಕೆರೆ ಎಂಬ ಪುಟ್ಟ ಗ್ರಾಮದ ಸಿದ್ದಲಿಂಗಪ್ಪ-ಪುಟ್ಟಮ್ಮ ದಂಪತಿಗೆ ಫೆಬ್ರವರಿ 27, 1943ರಂದು ಎರಡನೇ ಮಗನಾಗಿ ಜನಿಸಿದ ಯಡಿಯೂರಪ್ಪನವರದು ಅಕ್ಷರಶಃ ಬಡ ಕುಟುಂಬ. ಜಾತಿಯಲ್ಲಿ ಲಿಂಗಾಯತರು. ಯಡಿಯೂರು ಸಿದ್ದಲಿಂಗೇಶ್ವರನ ಭಕ್ತರು. ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳ ಸಾತ್ವಿಕ ಕುಟುಂಬ. ಈ ಕುಟುಂಬಕ್ಕೆ ಬೂಕನಕೆರೆಯಲ್ಲಿ ವಾಸಿಸಲು ಚಿಕ್ಕ ಮನೆ, ಜೊತೆಗೊಂದಿಷ್ಟು ಜಮೀನಿತ್ತು. ಜಮೀನು ಕಡಿಮೆ ಇದ್ದ ಕಾರಣಕ್ಕೆ ಬೇಸಾಯ ಮಾಡಿ ಹೊಟ್ಟೆ ತುಂಬಿಸುವುದು ಕಷ್ಟದ ಕೆಲಸವಾಗಿತ್ತು. ಹಾಗಾಗಿ ಬೇಸಾಯದ ಜೊತೆಗೆ ಸಣ್ಣ ಪ್ರಮಾಣದ ವ್ಯಾಪಾರವನ್ನೂ ಅವಲಂಬಿಸಿತ್ತು.

ಹಳ್ಳಿ ಕಡೆ ಹೋಗುವುದು, ರೈತರು ಬೆಳೆದ ಕಾಳು ಕಡಿಯನ್ನು ಕಡಿಮೆ ಬೆಲೆಗೆ ಖರೀದಿಸುವುದು, ಅದನ್ನು ತಂದು ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರುವುದು ಸಿದ್ದಲಿಂಗಪ್ಪನವರ ಕುಟುಂಬದ ಕಾಯಕವಾಗಿತ್ತು. ಹತ್ತಿರದ ಚಿನಕುರುಳಿ, ತಟ್ಟೆಕೆರೆ, ಪಾಂಡವಪುರ ಇವರು ವ್ಯಾಪಾರ ಮಾಡುತ್ತಿದ್ದ ಮುಖ್ಯ ಸಂತೆಗಳಾಗಿದ್ದವು. ಇದಲ್ಲದೆ ಸೀಸನ್‌ನಲ್ಲಿ ಸಿಗುವ ಬಾಳೆಹಣ್ಣು, ನಿಂಬೆಹಣ್ಣನ್ನು ಕೂಡ ಮಾರುತ್ತಿದ್ದರು. ಬಡತನದ ಕಾರಣಕ್ಕೆ ಎರಡೆರಡು ಉದ್ಯೋಗದಲ್ಲಿ ನಿರತವಾಗಿದ್ದ ಸಿದ್ದಲಿಂಗಪ್ಪನವರು, ಮಡದಿಯ ಅಕಾಲಿಕ ಮರಣದ ನಂತರ, ತಮ್ಮ ಎರಡನೇ ಪುತ್ರನಾದ ಯಡಿಯೂರಪ್ಪನ ಭವಿಷ್ಯದ ಬದುಕು ನಮ್ಮಂಥಾಗುವುದು ಬೇಡ ಎಂಬ ಕಾರಣಕ್ಕೆ, ಊರಲ್ಲೇ ಉಳಿದರೆ ಉದ್ಧಾರವಾಗುವುದಿಲ್ಲವೆಂದು ಭಾವಿಸಿ ಮಾಧ್ಯಮಿಕ ಶಾಲೆಯ ನಂತರ ಮಂಡ್ಯದ ಸಂಬಂಧಿಕರ ಮನೆಗೆ, ಹೈಸ್ಕೂಲ್ ಓದಲಿಕ್ಕೆ ಕಳುಹಿಸಿಕೊಟ್ಟರು.

ಮಂಡ್ಯದಲ್ಲಿ ನಿಂಬೆಹಣ್ಣು ಮಾರಾಟ

ಬೂಕನಕೆರೆ ಬಿಟ್ಟು ಮಂಡ್ಯಕ್ಕೆ ಬಂದಾಗ, ಸಂಬಂಧಿಕರ ಮನೆಯಲ್ಲಿ ಹೊಂದಿಕೊಂಡು ಬದುಕಬೇಕಾದ ಅನಿವಾರ್ಯ ಸ್ಥಿತಿ ಎದುರಾಯಿತು. ಅನಾಥಭಾವ ಕಾಡಿತು. ಮಂಡ್ಯದಲ್ಲಿ ಯಡಿಯೂರಪ್ಪನವರನ್ನು ಕಂಡವರು ಕೆಲವರಲ್ಲೇ ಕೆಲವರು. ಅವರ ಪ್ರಕಾರ, ‘‘ನಮಗೆ ಗೊತ್ತಿರುವಂತೆ ಯಡಿಯೂರಪ್ಪ ಸೈಕಲ್ ಮೇಲೆ ಚೀಲ ಇಟ್ಟುಕೊಂಡು ನಿಂಬೆಹಣ್ಣು ಮಾರುತ್ತಿದ್ದರು. ಬಸ್ ಸ್ಟಾಂಡ್‌ನಲ್ಲಿ ಐದು ಬೆರಳಿಗೂ ಐದು ನಿಂಬೆಹಣ್ಣು ಸಿಕ್ಕಿಸಿಕೊಂಡು, ಬಸ್ ಕಿಟಕಿಗಳ ಬಳಿ ಬಂದು ಕೂಗಿ ಮಾರುತ್ತಿದ್ದರು’’ ಎನ್ನುವ ಉತ್ತರ ಸಿಗುತ್ತದೆ.

ಸಚಿವಾಲಯದಲ್ಲಿ ಗುಮಾಸ್ತ

ಯಡಿಯೂರಪ್ಪನವರ ಸ್ವವಿವರದ ಪ್ರಕಾರ ಬಿ.ಎ. ಪದವಿ ಪಡೆದಿದ್ದರು ಎನ್ನಲಾಗುತ್ತದೆ. ಆದರೆ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ತಮ್ಮ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ ಯಡಿಯೂರಪ್ಪ, 1965ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆಯ ಗುಮಾಸ್ತರಾಗಿ ವೃತ್ತಿಜೀವನ ಆರಂಭಿಸಿದರು ಎಂಬ ಮಾಹಿತಿಯೂ ಇದೆ. ಈ ಕೆಲಸ ಬಿಟ್ಟ ನಂತರ ಅವರು ಬೆಂಗಳೂರಿನ ಶೇಷಾದ್ರಿಪುರಂನಲ್ಲಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(್ಕಖಖ)ದ ವಿಸ್ತಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ಸಮಯದಲ್ಲಿ ವಿಧಾನಸಭೆಯ ಸಚಿವಾಲಯದಲ್ಲಿ ಪಾರ್ಟ್ ಟೈಂ ಗುಮಾಸ್ತನಾಗಿಯೂ ಕೆಲಸ ಮಾಡುತ್ತಿದ್ದರು ಎನ್ನುವುದು ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಬೆಂಗಳೂರಿನ ಆರೆಸ್ಸೆಸ್ ಆಫೀಸಿಗೆ ಆಗಾಗ ಬಂದುಹೋಗುತ್ತಿದ್ದ ಶಿಕಾರಿಪುರದ ವೀರಭದ್ರಶಾಸ್ತ್ರಿಗಳಿಗೆ ಯಡಿಯೂರಪ್ಪನವರ ಬುದ್ಧಿವಂತಿಕೆ, ಚುರುಕುತನ ಇಷ್ಟವಾಯಿತು. ‘‘ಊರಲ್ಲಿ ನಮ್ಮದೊಂದು ರೈಸ್ ಮಿಲ್ ಇದೆ, ಅಲ್ಲೊಂದು ಕೆಲಸ ಖಾಲಿಯಿದೆ, ಸಂಬಳ ಜಾಸ್ತಿ ಕೊಡ್ತೀನಿ ಬರ್ತಿಯಾ’’ ಎಂದು ಕೇಳಿದರು. ಅದಕ್ಕೆ ಒಪ್ಪಿದ ಯಡಿಯೂರಪ್ಪನವರು ಬೆಂಗಳೂರು ಬಿಟ್ಟು ಶಿಕಾರಿಪುರದತ್ತ ಮುಖ ಮಾಡಿದರು.

ಬೆಂಬಿಡದ ಭ್ರಷ್ಟಾಚಾರ

ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರ ಅಧಿಕಾರದ ಅವಧಿಯಲ್ಲಿ ಹಾವೇರಿಯಲ್ಲಿ ರಸಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಡೆಸಿದ ಗೋಲಿಬಾರ್‌ನಲ್ಲಿ ರೈತನೊಬ್ಬ ಮೃತಪಟ್ಟ ಘಟನೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಯಡಿಯೂರಪ್ಪನವರಿಗೆ ಪ್ರತಿಪಕ್ಷಗಳು ‘ರೈತ ವಿರೋಧಿ’ ಹಣೆಪಟ್ಟಿ ಕಟ್ಟಲು ಆ ಘಟನೆ ಕಾರಣವೂ ಆಯಿತು. ಭೂಮಿ ಡಿ-ನೋಟಿಫಿಕೇಷನ್, ಸ್ವಜನಪಕ್ಷಪಾತ, ಲಂಚ ಸ್ವೀಕಾರ ಸಹಿತ ವಿವಿಧ ಹಗರಣಗಳ ಜೊತೆ ಯಡಿಯೂರಪ್ಪ ‘ಸಿಡುಕು’ ಸ್ವಭಾವಕ್ಕೂ ಹೆಸರಾದರು. ಈ ನಡುವೆ ಅಕ್ರಮ ಗಣಿಗಾರಿಕೆ ಸಂಬಂಧದ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೂ ಬಂದಿಯಾಗಿದ್ದರು.

ರೆಸ್ ಮಿಲ್ ರೆಟರ್

ವೀರಭದ್ರ ಶಾಸ್ತ್ರಿಗಳು ಆ ಕಾಲಕ್ಕೆ ಶಿಕಾರಿಪುರದಲ್ಲಿ ರೈಸ್ ಮಿಲ್ ಇಟ್ಟಿದ್ದ ಶ್ರೀಮಂತರು. ಬೆಂಗಳೂರು-ಶಿಕಾರಿಪುರ ನಡುವೆ ಓಡಾಡಿಕೊಂಡಿದ್ದು, ಆರೆಸ್ಸೆಸ್ ಜೊತೆಗೆ ಸಂಪರ್ಕವಿಟ್ಟುಕೊಂಡಿದ್ದವರು. ಇವರ ರೈಸ್ ಮಿಲ್ ನಲ್ಲಿ ಯಡಿಯೂರಪ್ಪನವರು ರೈಟರ್ ಆಗಿ ಕೆಲಸಕ್ಕೆ ಸೇರಿದರು. ರೈಟರ್ ಎಂದರೆ, ರೈಸ್ ಮಿಲ್ ಉಸ್ತುವಾರಿ ನೋಡಿಕೊಳ್ಳುವ ಮ್ಯಾನೇಜರ್. ಶಿಸ್ತಿನ, ಶ್ರದ್ಧೆಯ, ಪ್ರಾಮಾಣಿಕ ಹುಡುಗನಾಗಿದ್ದ ಯಡಿಯೂರಪ್ಪನವರ ಕೆಲಸ ವೀರಭದ್ರ ಶಾಸ್ತ್ರಿಗಳಿಗೆ ಇಷ್ಟವಾಯಿತು. ಈ ಇಷ್ಟ ಮುಂದೆ 1967ರಲ್ಲಿ, ತಮ್ಮ ಮಗಳು ಮೈತ್ರಾದೇವಿಯನ್ನು ಯಡಿಯೂರಪ್ಪನವರಿಗೆ ಕೊಟ್ಟು ವಿವಾಹ ಮಾಡುವ ಮೂಲಕ ಸಂಬಂಧಿಕರೂ ಆದರು. ನಂತರ ಒಬ್ಬಳೇ ಮಗಳಾದ್ದರಿಂದ ಮನೆ ಅಳಿಯನನ್ನಾಗಿ ಮಾಡಿಕೊಂಡು, ಸಕಲ ಆಸ್ತಿಗೆ ಯಡಿಯೂರಪ್ಪನವರನ್ನೇ ಒಡೆಯರನ್ನಾಗಿಸಿದರು.

ಉದ್ಯೋಗ, ಮದುವೆ, ಮನೆ, ನೆಮ್ಮದಿ ಅಂತೆಲ್ಲ ಬದುಕು ಒಂದು ಘಟ್ಟಕ್ಕೆ ಬಂದು ನಿಂತಾಗ, ಯಡಿಯೂರಪ್ಪನವರ ಮನದ ಮೂಲೆಯಲ್ಲಿದ್ದ ಆರೆಸ್ಸೆಸ್ ಜೊತೆಗಿನ ನಂಟು ಮರುಕಳಿಸಿತು. 1970 ರಿಂದ 74ರವರೆಗೆ ಶಿಕಾರಿಪುರ ತಾಲೂಕಿನ ಕಾರ್ಯನಿರ್ವಾಹಕರಾಗಿ ನಿಯುಕ್ತಿಗೊಂಡರು. ಇದೇ ಸಮಯದಲ್ಲಿ ರಾಮಭವನ ಹೊಟೇಲ್ ಅಟ್ಟದ ಮೇಲೆ ಒಂದಷ್ಟು ಗೆಳೆಯರು ಸೇರಿ ‘ರಾಘವೇಂದ್ರ ಫೈನಾನ್ಸ್’ ಎಂಬ ಹಣಕಾಸು ಲೇವಾದೇವಿ ಸಂಸ್ಥೆಯನ್ನು ಹುಟ್ಟುಹಾಕಿದರು.

ಬಿಜೆಪಿಯಿಂದ ಕೆಜೆಪಿಗೆ

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಲೋಕಾಯುಕ್ತ ನೀಡಿದ ತನಿಖಾ ವರದಿಯಲ್ಲಿ ಯಡಿಯೂರಪ್ಪನವರ ಹೆಸರಿತ್ತು. ಆದುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿಯ ಹೈಕಮಾಂಡ್ ಯಡಿಯೂರಪ್ಪರಿಗೆ ಸೂಚಿಸಿತು. ನಂತರ 2011ರ ನವೆಂಬರ್ 30ರಂದು ಶಾಸಕ ಸ್ಥಾನ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದರು. 2011ರ ಎಪ್ರಿಲ್‌ನಲ್ಲಿ ಕರ್ನಾಟಕ ಜನತಾ ಪಕ್ಷ ಎಂಬ ನೂತನ ಪಕ್ಷವನ್ನು ನೋಂದಾಯಿಸಿದರು. 2012ರಲ್ಲಿ ಕೆಜೆಪಿಗೆ ಅಧಿಕೃತವಾಗಿ ಚಾಲನೆ ನೀಡಿದರು. 2013ರ ಮೇ ನಲ್ಲಿ ಕರ್ನಾಟಕ ಜನತಾ ಪಕ್ಷದಿಂದ ಶಿಕಾರಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದರು.

ಕೆಜೆಪಿಯಿಂದ ಬಿಜೆಪಿಗೆ ಮರಳಿದ ಬಳಿಕ ಬಿ.ಎಸ್.ಯಡಿಯೂರಪ್ಪ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕೆ ಇಳಿದು ಜಯ ಗಳಿಸಿದರು. ರಾಷ್ಟ್ರ ರಾಜಕಾರಣದಲ್ಲಿ ಮಿಂಚುವ ಅವಕಾಶ ಸಿಕ್ಕರೂ, ರಾಜ್ಯಕ್ಕೆ ಮರಳಿದರು. ಶಿವಮೊಗ್ಗದ ಸಂಸದರಾದ ನಂತರ ಬಿಜೆಪಿಯ ರಾಜ್ಯಾಧ್ಯಕ್ಷರಾದರು. ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಮೇ 18, 2018ರಂದು ಪ್ರಮಾಣ ವಚನ ಸ್ವೀಕರಿಸಿ ಕೇವಲ 55 ಗಂಟೆಗಳ ಕಾಲ ಸಿಎಂ ಆಗಿ ಅಲ್ಪಾವಧಿ ಸರಕಾರದ ದೊರೆ ಎನಿಸಿಕೊಂಡರು.

ಪುರಸಭಾ ಸದಸ್ಯ

ದೇಶಕ್ಕೆ 27ರ ಸ್ವಾತಂತ್ರ ಸಂಭ್ರಮ. ಹಾಗೆಯೇ ಯಡಿಯೂರಪ್ಪನವರ ರೈತಪರ ಹೋರಾಟ, ಸಂಘಟನೆಗಳಿಗೂ ಒಂದು ಪರ್ವಕಾಲ. ಅದು 1975ರ ಆಗಸ್ಟ್ 16. ಯಡಿಯೂರಪ್ಪನವರು ಮೊಟ್ಟ ಮೊದಲ ಬಾರಿಗೆ ಶಿಕಾರಿಪುರ ಪುರಸಭಾ ಚುನಾವಣೆಗೆ ಸ್ಪರ್ಧಿಸಿ, ಸದಸ್ಯರಾಗಿ ಆಯ್ಕೆಯಾದರು. 1977ರಲ್ಲಿ ಶಿಕಾರಿಪುರ ಪುರಸಭಾ ಅಧ್ಯಕ್ಷರೂ ಆದರು. ಆ ಮೂಲಕ ರಾಜಕೀಯರಂಗದಲ್ಲಿ ನೆಲೆಯೂರಿ ಹಂತಹಂತವಾಗಿ ಬೆಳೆಯತೊಡಗಿದರು.

ಪ್ರಧಾನಮಂತ್ರಿ ಇಂದಿರಾಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದು, ಅಭಿವ್ಯಕ್ತಿ ಸ್ವಾತಂತ್ರದ ಹರಣ ಮಾಡಿದ್ದು, ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಉಗ್ರ ಪ್ರತಿಭಟನೆಯಾಗಿದ್ದು... ಒಟ್ಟಾರೆ ದೇಶದಾದ್ಯಂತ ಕಾಂಗ್ರೆಸ್ ವಿರುದ್ಧದ ಅಲೆ ಬೀಸುತ್ತಿದ್ದ ಕಾಲ. ಇದೇ ಸಮಯದಲ್ಲಿ ಯಡಿಯೂರಪ್ಪನವರು ಕೂಡ ಜನಸಂಘದ ಭಾಗವೇ ಆಗಿದ್ದರಿಂದ ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಿ, 45 ದಿನಗಳ ಕಾಲ ಬಳ್ಳಾರಿ ಮತ್ತು ಶಿವಮೊಗ್ಗ ಜೈಲಿನಲ್ಲಿ ಬಂದಿಯಾಗಿದ್ದರು. ಇದು ಜನರ ನಡುವೆ ನಿಂತು ಜನನಾಯಕರಾಗಿ ರೂಪಗೊಳ್ಳಲು ಸಹಕಾರಿಯಾಯಿತು.

ಮತ್ತೆ ಮುಖ್ಯಮಂತ್ರಿ

ಆ ಬಳಿಕ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಪತನಗೊಳಿಸಿ ಕಾಂಗ್ರೆಸ್-ಜೆಡಿಎಸ್‌ನ 17 ಮಂದಿ ಶಾಸಕರನ್ನು ಸೆಳೆದುಕೊಂಡು ಸರಕಾರ ರಚನೆ ಮಾಡಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ 2019ರ ಜುಲೈ 26ರಂದು ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪನವರು, ತಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿಯೇ ಆಡಳಿತ ನಡೆಸಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಜನಪರ ಯೋಜನೆಗಳಾದ ರೈತರ ಸಾಲಮನ್ನಾ, ಸಾರಾಯಿ ಮತ್ತು ಲಾಟರಿ ನಿಷೇಧ, ರೈತರಿಗೆ ಶೇ.4ರ ಬಡ್ಡಿದರದಲ್ಲಿ ಸಾಲ, ಬಿಪಿಎಲ್ ಕುಟುಂಬಗಳ ಹೆಣ್ಣುಮಕ್ಕಳ ಸಬಲೀಕರಣಕ್ಕೆ ‘ಭಾಗ್ಯಲಕ್ಷ್ಮಿ’ ಯೋಜನೆ, ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ, ನಿರುದ್ಯೋಗ ನಿವಾರಣೆಗೆ ಸುವರ್ಣ ಕಾಯಕ ಉದ್ಯೋಗ ತರಬೇತಿ, ಹಿರಿಯ ನಾಗರಿಕರ ಸಾಮಾಜಿಕ ಭದ್ರತೆಗೆ ಸಂಧ್ಯಾ ಸುರಕ್ಷಾ ಸಹಿತ ಕ್ರಾಂತಿಕಾರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದ್ದಾರೆ. ಅಲ್ಲದೆ, ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ, ಇತರರಿಗಿಂತ ಭಿನ್ನ ಎಂಬ ಛಾಪು ಒತ್ತಿದ್ದಾರೆ.

ಇಷ್ಟೆಲ್ಲ ಸಾಧನೆಗೈದ ಯಡಿಯೂರಪ್ಪನವರನ್ನು ವಯಸ್ಸಿನ ಕಾರಣ ಮುಂದೊಡ್ಡಿ ಈಗ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನ ತೆರವು ಮಾಡಲು ಸೂಚಿಸಿದೆ. ಹೈಕಮಾಂಡಿನ ಸೂಚನೆಯ ಮೇರೆಗೆ ರಾಜೀನಾಮೆ ನೀಡಿ, ಕೇವಲ 2 ವರ್ಷಗಳಿಗೆ ತಮ್ಮ ಅಧಿಕಾರಾ ವಧಿಯನ್ನು ಮೊಟಕುಗೊಳಿಸಿ ಹೊರ ನಡೆಯುತ್ತಿರುವ ಯಡಿಯೂರಪ್ಪನವರನ್ನು ಈ ನಾಡು ಹಲವು ಉತ್ತಮ ಕೆಲಸಗಳಿಗೂ, ಕೆಲವು ಕೆಟ್ಟ ಅಸಾಂವಿಧಾನಿಕ ನಡೆಗಳಿಗೂ ನೆನಪು ಮಾಡಿಕೊಳ್ಳದೇ ಇರದು. ಹೋಗಿ ಬನ್ನಿ ಯಡಿಯೂರಪ್ಪನವರೇ?

ಶಿವಮೊಗ್ಗ ಜಿಲ್ಲೆಯ ಮುಖ್ಯಮಂತ್ರಿಗಳಿಗೆ ಸಿಗಲಿಲ್ಲ ಪೂರ್ಣಾವಧಿ ಅಧಿಕಾರ ಭಾಗ್ಯ

ಯಾರೆಲ್ಲ ಎಷ್ಟು ದಿನ ಅಧಿಕಾರದಲ್ಲಿದ್ದರು?

ಶಿವಮೊಗ್ಗ, ಜು.26: ಅಧಿಕ ಸಂಖ್ಯೆಯ ಮುಖ್ಯಮಂತ್ರಿ ಗಳನ್ನು ರಾಜ್ಯಕ್ಕೆ ನೀಡಿದ ಹೆಮ್ಮೆ ಶಿವಮೊಗ್ಗ ಜಿಲ್ಲೆಯದ್ದು. ಆದರೆ ಈ ಜಿಲ್ಲೆಯಿಂದ ಆಯ್ಕೆಯಾಗಿ ಹೋಗಿ, ಸಿಎಂ ಆದವರು ಪೂರ್ಣಾವಧಿ ಅಧಿಕಾರ ನಡೆಸಲು ಆಗಲಿಲ್ಲ. ಸೋಮವಾರ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮತ್ತೊಮ್ಮೆ ಅರ್ಧಕ್ಕೆ ಸಿಎಂ ಸ್ಥಾನ ಮೊಟಕಾದಂತಾಗಿದೆ. 73 ದಿನಕ್ಕಷ್ಟೇ ಸಿಎಂ: ಮೈಸೂರು ರಾಜ್ಯವಾಗಿದ್ದ ಸಂದರ್ಭ, ತೀರ್ಥಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಡಿದಾಳು ಮಂಜಪ್ಪಅವರು ಮುಖ್ಯಮಂತ್ರಿ ಗಾದಿಗೆ ಏರಿದರು. 1956ರ ಆಗಸ್ಟ್ 19ರಂದು ಸಿಎಂ ಪದವಿಗೇರಿದ ಅವರು 1956ರ ಅಕ್ಟೋಬರ್ 31ಕ್ಕೆ ಅಧಿಕಾರ ಕಳೆದುಕೊಂಡರು. ಕೇವಲ 73 ದಿನ ಸಿಎಂ ಆಗಿದ್ದರು. ಬಂಗಾರಪ್ಪಗೆ ಸಿಗದ ಪೂರ್ಣಾವಧಿ ಅಧಿಕಾರ: ಸೊರಬ ಶಾಸಕರಾಗಿದ್ದ ಎಸ್.ಬಂಗಾರಪ್ಪ ಅವರು 1990ರ ಅಕ್ಟೋಬರ್ 17ರಂದು ಮುಖ್ಯಮಂತ್ರಿಯಾದರು. 1992ರ ನವೆಂಬರ್ 19ರಂದು ರಾಜೀನಾಮೆ ಸಲ್ಲಿಸಿದರು. 2 ವರ್ಷ 33 ದಿನಗಳಷ್ಟೇ ಬಂಗಾರಪ್ಪ ಅವರು ಸಿಎಂ ಗಾದಿಯಲ್ಲಿದ್ದರು. ಕ್ಲಾಸಿಕ್ ಕಂಪ್ಯೂಟರ್ ಹಗರಣದಲ್ಲಿ ಹೆಸರು ಕೇಳಿ ಬಂದಿದ್ದರಿಂದ ಬಂಗಾರಪ್ಪ ಅವರು ಅಧಿಕಾರ ತ್ಯಜಿಸಬೇಕಾಯಿತು. ಬಂಗಾರಪ್ಪ ನಿಧನರಾಗುವ ಸ್ವಲ್ಪ ದಿನ ಮುಂಚೆ, ಹಗರಣದ ಆರೋಪದಿಂದ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು. ಜೆ.ಎಚ್.ಪಟೇಲ್ ಅವರಿಗೂ ಸಿಗಲಿಲ್ಲ ಪೂರ್ಣಾವಧಿ: ವರ್ಣರಂಜಿತ ರಾಜಕಾರಣಿ ಅನಿಸಿಕೊಂಡಿದ್ದ ಜೆ.ಎಚ್.ಪಟೇಲ್ ಅವರು ಚನ್ನಗಿರಿ ಕ್ಷೇತ್ರದಿಂದ ಶಾಸಕರಾಗಿದ್ದರು. ಆಗಿನ್ನೂ ಚನ್ನಗಿರಿ ತಾಲೂಕು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿತ್ತು. 1996ರ ಮೇ 31ರಂದು ಜೆ.ಎಚ್.ಪಟೇಲ್ ಅವರು ಸಿಎಂ ಆಗಿ ಅಧಿಕಾರ ಆರಂಭಿಸಿದರು. 3 ವರ್ಷ 129 ದಿನ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಅವರು 7 ಅಕ್ಟೋಬರ್ 1999ರಂದು ಪದತ್ಯಾಗ ಮಾಡಬೇಕಾಯಿತು. ನಾಲ್ಕು ಬಾರಿ ಸಿಎಂ ಗಾದಿಗೇರಿದ್ದ ಯಡಿಯೂರಪ್ಪ: ಅತ್ಯಧಿಕ ಬಾರಿ ಸಿಎಂ ಗದ್ದುಗೆ ಮೇಲೆ ಕುಳಿತ ಹಿರಿಮೆ ಬಿ.ಎಸ್. ಯಡಿಯೂರಪ್ಪ ಅವರದ್ದು. 2007ರ ನವೆಂಬರ್ 12ರಿಂದ 2007ರ ನವೆಂಬರ್ 19ರವರೆಗೆ ಏಳು ದಿನ ಸಿಎಂ ಆಗಿದ್ದರು. ಜೆಡಿಎಸ್ ಪಕ್ಷ ಬೆಂಬಲ ಹಿಂಪಡೆದಿದ್ದರಿಂದ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡಿದ್ದರು. 2008ರಲ್ಲಿ ಬಿಜೆಪಿಗೆ ಬಹುಮತ ಲಬಿಸಿ, ಯಡಿಯೂರಪ್ಪ ಅವರು ಸಿಎಂ. 2008ರ ಮೇ 30ರಿಂದ ಮೂರು ವರ್ಷ 66 ದಿನ ಯಡಿಯೂರಪ್ಪ ಅಧಿಕಾರದಲ್ಲಿದ್ದರು. ಆದರೆ ಭ್ರಷ್ಟಾಚಾರ ಆರೋಪ ಸಂಬಂಧ 2011ರ ಆಗಸ್ಟ್ 4ರಂದು ರಾಜೀನಾಮೆ ಸಲ್ಲಿಸ ಬೇಕಾಯಿತು. 2018ರ ಮೇ 17ರಂದು ಮತ್ತೆ ಸಿಎಂ ಆದ ಯಡಿಯೂರಪ್ಪ ಅವರು ಬಹುಮತ ಇಲ್ಲದೆ ಆರು ದಿನದಲ್ಲಿ, ಅಂದರೆ, 2018ರ ಮೇ 23ರಂದು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. 2019ರ ಜುಲೈ 26ರಂದು ಮತ್ತೆ ಅಧಿಕಾರಕ್ಕೇರಿದ ಯಡಿಯೂರಪ್ಪ ಅವರು 2021ರ ಜುಲೈ 26ರಂದು ಪದತ್ಯಾಗ ಮಾಡಬೇಕಾಯಿತು. ಈ ಮೂಲಕ ರಾಜ್ಯಕ್ಕೆ ಅತ್ಯಧಿಕ ಸಿಎಂಗಳನ್ನು ಕೊಟ್ಟರೂ, ಶಿವಮೊಗ್ಗ ಜಿಲ್ಲೆಯವರು ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ.

ಸಿಎಂ ರಾಜೀನಾಮೆ: ಶಿಕಾರಿಪುರ ಪಟ್ಟಣ ಬಂದ್

ಬಿಜೆಪಿ ಕಾರ್ಯಕರ್ತರಿಂದ ಹೈಕಮಾಂಡ್ ವಿರುದ್ಧ ಘೋಷಣೆ

ಶಿವಮೊಗ್ಗ, ಜು.26: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ತವರು ಕ್ಷೇತ್ರ ಶಿಕಾರಿಪುರದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಶಿಕಾರಿಪುರದ ಹೃದಯಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿ ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿದರು.

ಶಿಕಾರಿಪುರ ಪಟ್ಟಣದ ಬಸ್ ನಿಲ್ದಾಣ ಸುತ್ತಮುತ್ತ, ಪೆಟ್ರೋಲ್ ಬಂಕ್ ರಸ್ತೆ, ಶಿಶುವಿಹಾರ ರಸ್ತೆ, ಎಸ್.ಎಚ್.ರಸ್ತೆ, ತಾಲೂಕು ಆಫೀಸ್ ರಸ್ತೆ, ಮಾಸೂರು ರಸ್ತೆಯಲ್ಲಿ ಅಂಗಡಿಗಳನ್ನು ಸೋಮವಾರ ಬಂದ್ ಮಾಡಲಾಯಿತು.

ರಾಜೀನಾಮೆ ಘೋಷಣೆ ಮಾಡುತ್ತಿದ್ದಂತೆ ಪಟ್ಟಣದಲ್ಲಿ ವರ್ತಕರು ನಿರ್ಧಾರ ಮಾಡಿ, ಅಂಗಡಿಗಳನ್ನು ಬಂದ್ ಮಾಡಿದರು. ಪ್ರತಿಭಟನೆ ವೇಳೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ಬಿಜೆಪಿ ಹೈಕಮಾಂಡ್ ನಿರ್ಧಾರ ಭವಿಷ್ಯದಲ್ಲಿ ಬಿಜೆಪಿಯ ಸರ್ವನಾಶಕ್ಕೆ ಮುನ್ನುಡಿ ಬರೆಯಲಿದೆ. ಯಡಿಯೂರಪ್ಪರಿಗೆ ಮಾಡಿದ ಅನ್ಯಾಯವಲ್ಲ. ಇದು ಜನಸಾಮಾನ್ಯರಿಗೆ ಮಾಡಿದ ಅನ್ಯಾಯವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News