ಅಭಿನಯ ಶಾರದೆಯ ಸಿನಿ ಪಯಣ

Update: 2021-07-27 08:03 GMT

ನಟಿ ಜಯಂತಿಯವರ ನಿಧನ ಅನಿರೀಕ್ಷಿತ. ಅವರು ಭಾರತೀಯ ಚಿತ್ರರಂಗದ ಪ್ರಮುಖ ನಟಿಯರಲ್ಲೊಬ್ಬರು. ದಕ್ಷಿಣ ಭಾರತದ ಭಾಷೆಗಳಲ್ಲದೆ ಹಿಂದೀ ಚಿತ್ರರಂಗದಲ್ಲಿಯೂ ಅವರು ಅಭಿನಯಿಸಿದವರು. ತಮ್ಮ ಕಾಲದ ಬಹುದೊಡ್ಡ ಕಲಾವಿದರಿಗೆ ಅಂದರೆ ರಾಜ್ ಕುಮಾರ್, ಎನ್ ಟಿ ಆರ್, ಉದಯಕುಮಾರ್, ಶಿವಾಜಿಗಣೇಶನ್, ಎ ಎನ್ ಆರ್., ರಾಜೇಶ್, ದಾರಾಸಿಂಗ್ ಅವರಲ್ಲದೆ ಮುಂದಿನ ತಲೆಮಾರಿನ ಶ್ರೀನಾಥ್ , ಗಂಗಾಧರ್, ವಿಷ್ಣುವರ್ಧನ್, ಅನಂತನಾಗ್, ಅಲ್ಲದೆ ಅನೇಕ ಯುವ ಕಲಾವಿದರಿಗೂ ನಾಯಕಿಯಾಗಿ ನಟಿಸಿದ ಹೆಗ್ಗಳಿಕೆ ಅವರದು. ಅವರ ಅಭಿನಯದ ವ್ಯಾಪ್ತಿ ಕೂಡ ದೊಡ್ಡದೆ. ಅವರು ಕನ್ನಡದ ಅಪರೂಪದ ನಟಿಯೆಂದು ಸಕಾರಣವಾಗಿಯೇ ನಾನು ನನ್ನ ಸಿನಿಮಾಯಾನ ಕೃತಿಯಲ್ಲಿ ಕನ್ನಡದ ನಟಿಯರ ಬಗ್ಗೆ ಬರೆದ ಲೇಖನದಲ್ಲಿ ಜಯಂತಿಯವರ ಬಗ್ಗೆ ದೀರ್ಘವಾಗಿ ಬರೆದು ಕಲ್ಪನಾ ಆರತಿಯಂಥ ನಟಿಯರಿಗೆ ಅಷ್ಟು ಸ್ಪೇಸ್ ಕೊಡದೇ ಹೋದದ್ದು ಕೆಲವರಿಗೆ ಇಷ್ಟವಾಗಲಿಲ್ಲ. ಅದಾದ ನಂತರ ರಾಜ್ಯ ಮಹಿಳಾ ವಿ.ವಿ. ಯು ನಟಿ ಜಯಮಾಲ ಅವರ ಸಂಪಾದಕತ್ವದಲ್ಲಿ ಕನ್ನಡ ಚಲನಚಿತ್ರರಂಗದ ಸಾಧಕಿಯರು ಕೃತಿ ರೂಪಿಸುವ ಯೋಜನೆ ಸಿದ್ಧವಾಯ್ತು. ಅದರಲ್ಲಿ ಜಯಂತಿಯವರ ಚಿತ್ರರಂಗದ ಸಾಧನೆಯ ಬಗ್ಗೆ ಲೇಖನ ಬರೆದುಕೊಡುವಂತೆ ಶ್ರೀಮತಿ ಜಯಮಾಲಾ ಅವರ ಕೋರಿಕೆಯ ಮೇರೆಗೆ ಸುದೀರ್ಘ ಲೇಖನ ಬರೆದು ಕಳಿಸಿದ್ದೆ. ಸಿನಿಮಾಯಾನದ ಬಗೆಗಿನ ಟೀಕೆಗೆ ಇಲ್ಲಿ ಸ್ವಲ್ಪ ಉತ್ತರ ದೊರಕೀತೆಂದು ಭಾವಿಸಿದ್ದೆ.  ಆ ಕೃತಿ ಮುದ್ರಣವಾಯ್ತೆಂದು ಸಂಪಾದಕರು ಹೇಳಿದರು. ಮಹಿಳಾ ವಿವಿ ಸಹ ಮೂರುಸಾವಿರ ರೂ. ಸಂಭಾವನೆ ಕಳುಹಿಸಿಕೊಟ್ಟಿತು. ಆದರೆ ಪುಸ್ತಕದ ಗೌರವ ಪ್ರತಿ ಬರಲಿಲ್ಲ. ಆ ಬಗ್ಗೆ ಬರೆದ ಪತ್ರಕ್ಕೂ ಉತ್ತರವಿಲ್ಲ. ಜಯಮಾಲಾ ಅವರು ಒಮ್ಮೆ ಸಿಕ್ಕಾಗ ತಮ್ಮ ಬಳಿ ಇರುವ ಪ್ರತಿಗಳಲ್ಲಿ ಒಂದನ್ನು ಕಳುಹಿಸಿಕೊಡುತ್ತೇನೆಂದು ಹೇಳಿದರು. ಆದರೆ ಆರು ವರ್ಷ ಕಳೆದರೂ ನನಗೆ ಸಿಗಲೇ ಇಲ್ಲ. ನನ್ನ ಲೇಖನ ನೋಡುವುದಕ್ಕಿಂತ ಕನ್ನಡ ಚಲನಚಿತ್ರರಂಗದ ಉಳಿದ ಸಾಧಕಿಯರ ಬಗ್ಗೆ ತಿಳಿಯುವ ಕುತೂಹಲ ತಣಿಯಲೇ ಇಲ್ಲ. ಇದರ ಬಗ್ಗೆ ನಾನೇನೂ ಹೇಳಲಾರೆ.

(Photo source: thenewsminute.com)

ಜಯಂತಿಯವರು ಅಪರೂಪದ ನಟಿಯಾದಂತೆಯೇ ವಿಶಿಷ್ಟ ವ್ಯಕ್ತಿತ್ವದವರು. ಒಮ್ಮೆ Savvy ಪತ್ರಿಕೆಯು ಅವರ ಬದುಕಿನಲ್ಲಿ ಬಂದು ಹೋದ ಗಂಡಸರ ಬಗ್ಗೆ ಜಯಂತಿಯವರು ಹೇಳಿದ ಮಾತುಗಳನ್ನು ಓದಿ ತಲ್ಲಣಿಸಿದ್ದೆ. ತನಗಾದ ಅನ್ಯಾಯಗಳನ್ನು ನುಂಗಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಆಕೆಯ ಗಟ್ಟಿತನ, ದೃಢಚಿತ್ತ ಬೆರಗು ಮೂಡಿಸಿತ್ತು. ಗೆಳೆಯ ಎನ್ ಎಸ್ ಶಂಕರ್ ಆ ಲೇಖನವನ್ನು ಓದುಗರು ತಲ್ಲಣಿಸುವಂತೆ ಅನುವಾದಿಸಿದ್ದ. ಮಹಿಳಾ ವಿವಿ ಗೆ ಬರೆದ ಲೇಖನ ನನಗೇ ಓದಲು ಸಿಗಲಿಲ್ಲವೆಂದಾದ ಮೇಲೆ ಬೇರೆಯವರು ಓದಿರುವ ಬಗ್ಗೆ ನಂಬಿಕೆ ಕಡಿಮೆ. ಹಾಗಾಗಿ ಎರಡು ಕಂತುಗಳಲ್ಲಿ ಅದನ್ನಿಲ್ಲಿ ಕೊಡುತ್ತಿದ್ದೇನೆ.

ಅಭಿನಯ ಶಾರದೆಯ ಸಿನಿ ಪಯಣ

ನಟಿ ಜಯಂತಿಯವರ ನೆನೆಪು

ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದಂತಹ ಅಪರೂಪದ ವಿದ್ಯಮಾನಗಳಲ್ಲಿ ಜಯಂತಿ ಎಂಬ ನಟಿಯ ಅಭಿನಯವೂ ಒಂದು. ಕನ್ನಡ ಚಿತ್ರರಂಗದ ಅತ್ಯದ್ಭುತ ಸಾಧನೆಯೆಂದು ಜಯಂತಿಯವರ ಕಲಾ ಬದುಕು ದಾಖಲಾಗದಿದ್ದರೂ, ಒಂದು ಚರಿತ್ರೆ ಪಡೆದುಕೊಳ್ಳುವ ಕಾಲವಿನ್ಯಾಸದಲ್ಲಿ ಅವರ ಅಭಿನಯ ಕೌಶಲ್ಯವೂ ಹೆಣೆದುಕೊಂಡಿರುವುದು ಸುಳ್ಳೇನಲ್ಲ. ವೈಯಕ್ತಿಕ ಬದುಕಿನಲ್ಲಿ ಹಲವರಿಗೆ ಅರ್ಥವಾಗದ ಜಯಂತಿಯವರ ವ್ಯಕ್ತಿತ್ವ ವೃತ್ತಿ ಬದುಕಿನಲ್ಲೂ ಅಭಿನಯಕ್ಕೆ ತಕ್ಕಂತೆ ಉಜ್ವಲವಾಗಿ ಪ್ರಕಾಶಿಸಲಿಲ್ಲ. ಕನ್ನಡ ನಾಡಿನ ಎಲ್ಲ ಪ್ರದೇಶದ, ವಯೋತಾರತಮ್ಯ ದಾಟಿದ ಪುರುಷ-ಮಹಿಳೆಯರ ಮನದ ಮೂಲೆಯನ್ನು ತಮ್ಮ ಮಾದಕತೆಯಿಂದ ಉದ್ದೀಪನಗೊಳಿಸಿ, ಅಭಿನಯ ಕೌಶಲ್ಯದಿಂದ ಪಾತ್ರಗಳಿಗೆ ಜೀವ ತುಂಬಿದ ಜಯಂತಿಯವರು ನಮ್ಮ ಕಣ್ಣ ಮುಂದೆಯೇ ಹೆಚ್ಚು ನಿಗೂಢವಾಗಿ ಉಳಿದಿದ್ದಾರೆ. ಅವರ ವೃತ್ತಿ ಬದುಕು ಮತ್ತು ಕಲಾಸಾಧನೆಯನ್ನು ಅವಲೋಕಿಸಿದಾಗ ನನಗೆ ಹಾಲಿವುಡ್ನ ಎರಡು ಲೆಜೆಂಡ್ಗಳಾದ ಮರ್ಲಿನ್ ಮನ್ರೋ ಮತ್ತು ಗ್ರೆಟಾ ಗಾರ್ಬೊ ಒಟ್ಟಿಗೇ ನೆನಪಾಗುತ್ತಾರೆ. ಈ ಹೋಲಿಕೆ ಸರಿಯಲ್ಲವೆಂದು ಅನೇಕರ ಅಭಿಪ್ರಾಯವಿರಬಹುದು. ಈ ಅಭಿಪ್ರಾಯಕ್ಕೆ ವಾಣಿಜ್ಯ ಚಿತ್ರಗಳ ಬಗ್ಗೆ ನಮಗಿರುವ ಉದಾಸೀನ ಮತ್ತು ಹೆಣ್ಣು ಪಾತ್ರಗಳ ಬಗ್ಗೆ ನಮಗಿರುವ ಅತಿರಂಜಿತ ಕಲ್ಪನೆ ಮತ್ತು ಅಸಡ್ಡೆಯ ಫಲವಾಗಿರಬಹುದೇ? ಈ ಅಸಡ್ಡೆಯ ತೆರೆಯನ್ನು ಸರಿಸಿ ಜಯಂತಿಯವರ ಸಹಜ ಪ್ರತಿಭೆಯ ಹಲವಾರು ರೂಹುಗಳನ್ನು ತೆರೆದಿಡುವುದೇ ಈ ಲೇಖನದ ಹಿಂದಿನ ಉದ್ದೇಶ.

ಹಾಗೆ ನೋಡಿದರೆ ಜಯಂತಿಯವರಿಗಿಂತ ಹೆಚ್ಚು ಸುಂದರಿಯರಾದ ನಟಿಯರು ಕನ್ನಡ ಚಿತ್ರರಂಗದಲ್ಲಿರಬಹುದು. ಅವರ ಅಭಿನಯದ ಸಾಮರ್ಥ್ಯವನ್ನು ಮೀರಿದ ಪ್ರತಿಭಾವಂತರೂ ಇರಬಹುದು. ಜಯಂತಿಯವರಿಗಿಂತ ಪ್ರೇಕ್ಷಕರ ಮೇಲೆ ಹೆಚ್ಚು ಮೋಡಿ ಹಾಕಿ ಥಿಯೇಟರ್ಗೆ ಸೆಳೆವಂತಹ ಅನೇಕ ನಟಿಯರೂ ಬಂದು ಹೋಗಿರುವುದು ಸುಳ್ಳಲ್ಲ. ಹಾಗೆಂದ ಮಾತ್ರಕ್ಕೆ ಅವರ ಸಾಧನೆಯೇನೂ ಕಡಿಮೆಯಲ್ಲ. ಜಯಂತಿಯವರು ಕನ್ನಡ ಚಿತ್ರರಂಗಕ್ಕೆ ಬಂದ ಕಾಲಘಟ್ಟ, ಅವರು ಬೆಳೆಯುತ್ತಿದ್ದಂತೆ ಸಂಭವಿಸಿದ ಪಲ್ಲಟಗಳು ಮತ್ತು ಬಹುದೀರ್ಘಕಾಲ ವೃತ್ತಿ ಜೀವನದಲ್ಲಿ ಬದುಕಿ ಉಳಿಯಲು ಅವರು ಎದುರಿಸಿದ ಸವಾಲುಗಳ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಅವಲೋಕಿಸಿದರೆ ಅವರ ನಿಜವಾದ ಸಾಮರ್ಥ್ಯ ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಇತಿಹಾಸ ಕುಲುಮೆಯಲ್ಲಿ ಜಯಂತಿಯೆಂಬ ಅಪರಂಜಿಯಂಥ ಕಲಾವಿದೆ ಪುಟಗೊಂಡ ಕಥಾನಕವೊಂದು ದೊರೆಯುತ್ತದೆ. ಪ್ರಮುಖವಾಗಿ ಕನ್ನಡ ಚಿತ್ರರಂಗದ ಇತಿಹಾಸವನ್ನು ಮಹಿಳಾ ಕಲಾವಿದರ ಹಿನ್ನೆಲೆಯಲ್ಲಿ ಕೆದಕಿದರೆ ಜಯಂತಿಯವರ ನಿಜ ಸಾಮರ್ಥ್ಯ ಬೆಳಕು ಕಾಣುತ್ತದೆ.

ನಟಿಯರ ದೃಷ್ಟಿಯಿಂದ ಕನ್ನಡ ಚಿತ್ರರಂಗದ ಇತಿಹಾಸ ಒಂದು ವಿಧದಲ್ಲಿ ಭಿನ್ನವಾಗಿ ಕಾಣುತ್ತದೆ. ೧೯೩೪ರಲ್ಲಿ ತೆರೆಕಂಡ ’ಸತಿ ಸುಲೋಚನಾ’ ವಾಕ್ಚಿತ್ರದಿಂದ ಆರಂಭಿಸಿ ಸುಮಾರು ಎರಡು ದಶಕಗಳ ಕಾಲ ಕನ್ನಡ ಚಿತ್ರರಂಗದ ನಾಯಕಿಯರ ಪಾತ್ರವನ್ನು ವಹಿಸಿದವರು ಕನ್ನಡ ರಂಗಭೂಮಿಯ ಅಭಿನೇತ್ರಿಯರು. ಲಕ್ಷ್ಮಿಬಾಯಿ, ಎಂ.ವಿ. ರಾಜಮ್ಮ, ಬಿ. ಜಯಮ್ಮ, ಮಳವಳ್ಳಿ ಸುಂದರಮ್ಮ, ಅಮೀರ್ಬಾಯ್ ಕರ್ನಾಟಕಿ, ತ್ರಿಪುರಾಂಬ, ಬಳ್ಳಾರಿ ಲಲಿತ, ಕಮಲಾಬಾಯಿ, ಜಯಶ್ರೀ, ಹರಿಣಿ, ಫಂಡರೀಬಾಯಿ, ಪ್ರತಿಮಾದೇವಿ ಮುಂತಾದ ರಂಗಪ್ರತಿಭೆಗಳೇ ಕನ್ನಡ ಚಿತ್ರಗಳಲ್ಲಿ ನಾಯಕಿಯ ಪಟ್ಟವನ್ನಲಂಕರಿಸಿದ್ದವು. ಕನ್ನಡ ಮೂಲದ ಹಿಂದೀ-ಮರಾಠೀ ಚಿತ್ರಗಳ ನಟಿ ಶಾಂತಾ ಹುಬ್ಳೀಕರ್ ಮತ್ತು ತೆಲುಗಿನ ಸೂರ್ಯಕುಮಾರಿಯಂಥವರು ಅಪರೂಪಕ್ಕೆ ಅಭಿನಯಿಸಿದ ಅಪವಾದಗಳನ್ನು ಹೊರತುಪಡಿಸಿದರೆ, ಆಗ ಕನ್ನಡ ಚಿತ್ರರಂಗದ ಮಹಿಳಾ ಪಾತ್ರಗಳನ್ನು ರಂಗಭೂಮಿಯ ಅಪ್ರತಿಮ ಕಲಾವಿದರೇ ನಿರ್ವಹಿಸಿದರು.

ಕನ್ನಡ ಚಿತ್ರರಂಗದ ಎರಡು ದಶಕಗಳ ಅಸ್ತಿತ್ವದ ನಂತರ ಪರಭಾಷಾ ಚಿತ್ರತಾರೆಯರ ಆರಂಭ ಪ್ರಾಯಶಃ ’ಜಲದುರ್ಗ’ (೧೯೫೪)ದಿಂದ ಆರಂಭವಾಯಿತೆನ್ನಬಹುದು. ತೆಲುಗಿನ ಕೃಷ್ಣಕುಮಾರಿಯವರು ಈ ಚಿತ್ರದ ಮೂಲಕ ಪರಭಾಷಾ ತಾರೆಯರ ಆಮದು ಪರಂಪರೆಯನ್ನು ಉದ್ಘಾಟಿಸಿದರು. ಅವರನ್ನು ಅನುಸರಿಸಿ ಅವರ ಸೋದರಿ ಸಾಹುಕಾರ್ ಜಾನಕಿ, ಸೂರ್ಯಕಲಾ, ಜಮುನಾ, ಭಾನುಮತಿ, ರಾಜಶ್ರೀ ಮುಂತಾದವರು ಕನ್ನಡ ಚಿತ್ರರಂಗಕ್ಕೆ ಆಗಮಿಸಿದರು. ಈ ಅವಧಿಯಲ್ಲೇ ಕನ್ನಡದ ಬಿ. ಸರೋಜಾದೇವಿಯಂಥ ನಟಿಯರೂ ಆಗಮಿಸಿ ನಂತರ ತಮಿಳು-ತೆಲುಗು ಚಿತ್ರರಂಗದಲ್ಲಿ ಪ್ರಖ್ಯಾತಗೊಂಡ ವಿದ್ಯಮಾನವೂ ಸಂಭವಿಸಿತು.

ಜಯಂತಿಯವರು ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದು ನಟಿಯರ ದೃಷ್ಟಿಯಿಂದ ಸ್ಥಿತ್ಯಂತರದಲ್ಲಿದ್ದ ಆ ಘಟ್ಟದಲ್ಲಿ.

ಹಾಗೆ ನೋಡಿದರೆ ಜಯಂತಿಯವರು ರಂಗಭೂಮಿಯ ಅನುಭವ ಪಡೆದು ಚಿತ್ರರಂಗಕ್ಕೆ ಬಂದವರಲ್ಲ. ರಂಗಭೂಮಿ-ಸಿನಿಮಾ ಕ್ಷೇತ್ರದ ನಂಟಿದ್ದ ಕುಟುಂಬದಿಂದಲೂ ಬಂದವರಲ್ಲ. ಚಿತ್ರರಂಗವು ಅವರ ಆಯ್ಕೆಯಾಗಿತ್ತು ಎಂಬುದಕ್ಕೆ ಅವರ ಬಾಲ್ಯಕಾಲದ ಲಭ್ಯ ಮಾಹಿತಿಯನ್ನು ಅವಲೋಕಿಸಿದರೆ ಪುರಾವೆ ಸಿಗದು. ಅವರ ಸಿನಿಮಾ ಜಗತ್ತಿನ ಪ್ರವೇಶ ’ಅಚಾನಕ’ ಎನ್ನುವ ರೀತಿಯಲ್ಲೇ ಸಂಭವಿಸಿದಂತೆ ಕಾಣುತ್ತದೆ.

ಜಯಂತಿಯವರ ಮೂಲ ಹೆಸರು ಕಮಲಕುಮಾರಿ. ಚಿತ್ರರಂಗಕ್ಕೆ ಬಂದ ನಂತರ ಅವರ ಹೆಸರು ಬದಲಾಯಿತು. ತಾಯಿ ಸಂತಾನಲಕ್ಷ್ಮಿಯವರು ಬಳ್ಳಾರಿಯವರು. ತಂದೆ ಬಾಲಸುಬ್ರಮಣ್ಯಂ ತಮಿಳು ಭಾಷಿಕರು. ಹುಟ್ಟಿ-ಬೆಳೆದದ್ದು ಬಳ್ಳಾರಿಯಾದರೂ ಜಯಂತಿಯವರಿಗೆ ಕನ್ನಡ ಭಾಷೆ ಸ್ವಲ್ಪ ಮಟ್ಟಿಗೆ ಅಪರಿಚಿತವೇ ಆಗಿತ್ತು! ತಂದೆ ಮದರಾಸಿನ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದವರು. ಹಾಗಾಗಿ ಸುಶಿಕ್ಷಿತ ಕುಟುಂಬದ ಹಿನ್ನೆಲೆಯ ಜಯಂತಿಯವರು ಚಿತ್ರರಂಗ ಪ್ರವೇಶಕ್ಕೆ ತಾಯಿಯವರ ಒತ್ತಾಸೆ ಕಾರಣವೆಂದು ಹೇಳಲಾಗುತ್ತದೆ. ಹಾಗಾಗಿ ಅವರ ಒತ್ತಾಯದಿಂದ ನೃತ್ಯ ತರಬೇತಿಗೆ ಸೇರಿದರು. ಬಾಲ್ಯದಿಂದಲೂ ಸ್ವಲ್ಪ ಸ್ಥೂಲದೇಹಿಯಾದ ಜಯಂತಿಯವರು ನೃತ್ಯ ಶಾಲೆಯ ವಿದ್ಯಾರ್ಥಿಗಳ ಅಪಹಾಸ್ಯದಿಂದ ನೃತ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಆ ಅಪಹಾಸ್ಯ, ತಿರಸ್ಕಾರಗಳೇ ಅವರು ಕಲಾವಿದರಾಗಿ ಗಟ್ಟಿಯಾಗಲು ಬೀಜ ಬಿತ್ತಿದವು ಎಂದು ಕಾಣುತ್ತದೆ.

ತಾಯಿಯ ಒತ್ತಾಸೆಯಿಂದ ಸ್ಟುಡಿಯೋಗೆ ಎಡತಾಕಿದರೂ ಚಿಕ್ಕ ವಯಸ್ಸು ಎಂಬ ಕಾರಣಕ್ಕೆ ಅವರಿಗೆ ಅವಕಾಶ ಸಿಗಲಿಲ್ಲ. ತೆಲುಗಿನಲ್ಲಿ ಅತ್ಯಂತ ಯಶಸ್ವಿಯಾಗಿ ಕನ್ನಡಕ್ಕೂ ಡಬ್ ಆದ ’ಜಗದೇಕವೀರುನಿ ಕಥಾ’(1961) ಚಿತ್ರದಲ್ಲಿ ಅವರು ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದ ದೃಷ್ಟಿಯಿಂದ ಕನ್ನಡಕ್ಕೆ ಡಬ್ ಆದ ’ಜಗದೇಕವೀರನ ಕತೆ’’ ಚಿತ್ರಕ್ಕೆ ಅದರದೇ ಆದ ವಿಶಿಷ್ಟತೆಯಿದೆ. ತೆಲುಗಿನ ಎನ್.ಟಿ.ಆರ್. ಅವರು ನಾಯಕರಾಗಿದ್ದ ಈ ಚಿತ್ರದಲ್ಲಿ ನಾಲ್ವರು ನಾಯಕಿಯರು. ಅದರಲ್ಲಿ ಪ್ರಧಾನ ಭೂಮಿಕೆ ಬಿ. ಸರೋಜಾದೇವಿಯವರ ಪಾಲಿಗೆ. ಅದು ಅವರಿಗೆ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಗಳಿಸಿಕೊಟ್ಟಿತು. ಅದೇ ಚಿತ್ರದ ’ತಿಳಿ ನೀರಾಟಗಳು ಕಲಕಲ ಪಾಟಗಳು’ ಎಂದು ಸರೋಜಾದೇವಿಯವರು ಕೊಳದಲ್ಲಿ ಮಿಂದು ಹಾಡುವ ಸನ್ನಿವೇಶದಲ್ಲಿ ಜಯಂತಿಯವರೂ ಸಹಕಲಾವಿದೆಯಾಗಿ ಅಭಿನಯಿಸಿದ್ದರು. ’ಶಿವಶಂಕರಿ ಶಿವಾನಂದ ಲಹರಿ’ ಹಾಡಿನಿಂದ ಪ್ರಖ್ಯಾತವಾಗಿದ್ದ ಈ ಚಿತ್ರವು ಅಂದಿನ ’ಡಬ್ಬಿಂಗ್ ವಿರೋಧಿ ಕನ್ನಡ ಕಟ್ಟಾಳು’ಗಳ ಕೆಂಗಣ್ಣಿಗೂ ಗುರಿಯಾಗಿತ್ತು. ಆದರೂ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಎರಡು ವಿಭಿನ್ನ ಪ್ರತಿಭೆಯ ಜಯಂತಿ ಮತ್�

Writer - ಡಾ. ಕೆ. ಪುಟ್ಟಸ್ವಾಮಿ

contributor

Editor - ಡಾ. ಕೆ. ಪುಟ್ಟಸ್ವಾಮಿ

contributor

Similar News