ಇದು ನಾಚಿಕೆಗೇಡು

Update: 2021-07-27 18:10 GMT

ಮಾನ್ಯರೇ,

ಮೈಸೂರು ಪ್ರಾಂತದ ಎಚ್.ಡಿ. ಕೋಟೆ ಗ್ರಾಮೀಣ ಆಡುಭಾಷೆಯಲ್ಲಿ ಉನ್ನತ ಶಿಕ್ಷಣ ಪಡೆದಿರುವಂತಹ ಸುಶಿಕ್ಷಿತರೇ ನಾಚುವ ಮಟ್ಟಕ್ಕೆ ಖಾಸಗಿ ವಾಹಿನಿಯೊಂದರಲ್ಲಿ ಸರಕಾರವನ್ನು ಪ್ರಶ್ನಿಸಿದ್ದ ಯುವತಿ ಶಶಿರೇಖಾರ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ಸ್ವರೂಪಗಳಲ್ಲಿ ಟ್ರೋಲ್ ಮಾಡುವ ಮೂಲಕ ತಮಾಷೆಯಾಗಿ ಕಾಣುತ್ತಿರುವುದು ನಾಚಿಕೆಗೇಡು.! ಈ ಯುವತಿ ಸಮಸ್ತ ಆಡಳಿತ ವರ್ಗವನ್ನು ಪ್ರಶ್ನೆ ಮಾಡುವ ಮೂಲಕ ಅಸಂಖ್ಯಾತ ಜನರ ಬವಣೆಯ ಬದುಕನ್ನು ತಾನು ಪ್ರತಿನಿಧಿಸಿ ನಿರ್ಭೀತಿಯಿಂದ ಮಾತನಾಡಿದ್ದ ರೀತಿ ನಿಜಕ್ಕೂ ಶ್ಲಾಘನೀಯ. ಮಂದಗತಿಯಲ್ಲಿ ಸಾಗುತ್ತಿರುವ ಸರಕಾರಕ್ಕೆ ತಮ್ಮ ಬವಣೆಗಳ ಬಗ್ಗೆ ಕರಾರುವಾಕ್ ಮಾತುಗಳಿಂದ ಪ್ರಶ್ನೆ ಮಾಡಿದ್ದು ತಪ್ಪೇ..? ಇಂತಹ ಅಸಹಾಯಕ ಯುವತಿಯನ್ನು ನಾಡಿನ ಸಮಸ್ತ ಯುವಸಮೂಹ ಹಾಗೂ ಸಮಾಜ ಗೌರವಿಸಬೇಕು. ಇಂತಹ ಪ್ರಶ್ನೆ ಮಾಡುವಂತಹ ದಿಟ್ಟ ಸತ್ಪ್ರಜೆಗಳು ಸಮಾಜದಲ್ಲಿ ಎಲ್ಲ ಕಡೆ ಹೆಚ್ಚಾಗಬೇಕಿದೆ. ಆಗಲೇ ಸರಕಾರಗಳು ಎಚ್ಚೆತ್ತುಕೊಂಡಾವು. ಕನಿಷ್ಠ ಜ್ಞಾನವಿಲ್ಲದ ಕೆಲವರು ಇವರು ಹೇಳಿದ ಕೆಲವು ಮಾತಿನ ತುಣುಕನ್ನು ವಾಕರಿಕೆ ಬರುವ ಮಟ್ಟಕ್ಕೆ ಬದಲಾಯಿಸಿ ಚಿತ್ರ-ವಿಚಿತ್ರ ಭಂಗಿಯಲ್ಲಿ ಆಡಿಕೊಳ್ಳುವುದು ತಪ್ಪಲ್ಲವೇ..! ಆಕೆ ಹೇಳಿದ್ದರಲ್ಲಿ ತಪ್ಪೇನಿದೆ? ಇದು ಮಾನವೀಯತೆಯೇ..? ಇಷ್ಟೆಲ್ಲಾ ವ್ಯಂಗ್ಯ ಮಾಡುವವರು ಸಾಧ್ಯವಾದರೆ ಈ ಯುವತಿಗೆ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ನೀಡಲು ಮುಂದೆ ಬರಲಿ. ಈ ನೊಂದ ಮಹಿಳೆಗೆ ಸರಕಾರದ ಮಟ್ಟದಲ್ಲಿ ಸಂಬಂಧಪಟ್ಟವರಿಂದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಪ್ರಯತ್ನಮಾಡಲಿ.

Writer - -ಅನಿಲ್ ಕುಮಾರ್, ನಂಜನಗೂಡು

contributor

Editor - -ಅನಿಲ್ ಕುಮಾರ್, ನಂಜನಗೂಡು

contributor

Similar News