ಕಾಶ್ಮೀರದಲ್ಲಿ ಮೇಘಸ್ಫೋಟ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

Update: 2021-07-28 16:11 GMT
ಸಾಂದರ್ಭಿಕ ಚಿತ್ರ, photo: India Tv,

ಶ್ರೀನಗರ, ಜು. 28: ಜಮ್ಮು ಹಾಗೂ ಕಾಶ್ಮೀರದ ಕಿಸ್ತ್ವಾರ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಮೇಘ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ ಕನಿಷ್ಠ 7ಕ್ಕೆ ಏರಿಕೆಯಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಮೇಘ ಸ್ಫೋಟದಿಂದ ಸಂಭವಿಸಿದ ಪ್ರವಾಹದಿಂದ ಇದುವರೆಗೆ 17 ಮಂದಿಯನ್ನು ರಕ್ಷಿಸಲಾಗಿದೆ. ಇವರಲ್ಲಿ ಐವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಸುಮಾರು 40ರಿಂದ 50 ಮಂದಿ ನಾಪತ್ತೆಯಾಗಿದ್ದಾರೆ. ಈಗ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. 

ಜಮ್ಮು ಹಾಗೂ ಕಾಶ್ಮೀರದ ಕಿಸ್ತ್ವಾರ್ ಜಿಲ್ಲೆಯ ಡೆಕ್ಕನ್ ತೆಹ್ಸೀಲ್ ಪ್ರಾಂತ್ಯದ ಹೊಂಝಾರ್ ಎಂಬ ಕುಗ್ರಾಮದಲ್ಲಿ ಮೇಘ ಸ್ಫೋಟ ಸಂಭವಿಸಿದ್ದು, ಹಲವು ಮನೆಗಳು ಕೊಚ್ಚಿಕೊಂಡು ಹೋಗಿವೆ ಎಂದು ಮೂಲಗಳು ತಿಳಿಸಿವೆ. ‘‘ಮೇಘ ಸ್ಫೋಟದಿಂದ ಉಂಟಾದ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿದೆ. ಪೊಲೀಸರು, ಸೇನೆ ಹಾಗೂ ಎಸ್ಡಿಆರ್ಎಫ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ’’ ಎಂದು ಕಿಸ್ತ್ವಾರದ ಉಪ ಆಯುಕ್ತ ಅಶೋಕ್ ಕುಮಾರ್ ಶರ್ಮಾ ಹೇಳಿದ್ದಾರೆ. 

ಈ ನಡುವೆ ಹವಾಮಾನ ಇಲಾಖೆ, ‘‘ಪ್ರಸಕ್ತ ಜಮ್ಮು ಹಾಗೂ ಕಾಶ್ಮೀರದ ಹೆಚ್ಚಿನ ಪ್ರದೇಶಗಳಲ್ಲಿ ಮೋಡ ಕಂಡು ಬಂದಿದೆ. ಪೂಂಚ್ ಹಾಗೂ ರಾಜೌರಿ, ರೆಸಾಯಿ ಹಾಗೂ ನೆರೆಯ ಕೆಲವು ಪ್ರದೇಶಗಳಲಿ ಗುಡುಗು ಹಾಗೂ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ’’ ಎಂದು ತಿಳಿಸಿದೆ. ನದಿಯಲ್ಲಿ ನೀರು ಏರಿಕೆಯಾಗುವ ಸಾಧ್ಯತೆ ಇದೆ ಎಂದು ನಿವಾಸಿಗಳಿಗೆ ಸೂಚಿಸಲಾಗಿದೆ. ಬೆಟ್ಟ, ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳಿಗೆ ತೆರಳದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News