ಶಶಿ ತರೂರ್‌ ನೇತೃತ್ವದ ಐಟಿ ಸಂಸದೀಯ ಸ್ಥಾಯಿ ಸಮಿತಿ ಸಭೆಯಿಂದ ಹೊರನಡೆದ ಬಿಜೆಪಿ ಸದಸ್ಯರು

Update: 2021-07-28 10:29 GMT

ಹೊಸದಿಲ್ಲಿ : ಹಿರಿಯ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ನೇತೃತ್ವದ ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ಸಭೆಯಿಂದ ಮಂಗಳವಾರ ಬಿಜೆಪಿ ಸದಸ್ಯರು ಹೊರನಡೆದ ಘಟನೆ  ವರದಿಯಾಗಿದೆ. ಸಂಸತ್ ಅಧಿವೇಶನ ನಡೆಯುತ್ತಿರುವಾಗ ಸ್ಥಾಯಿ ಸಮಿತಿ ಸಭೆಗಳನ್ನು ನಡೆಸಲು ಅನುಮತಿಯಿಲ್ಲ ಎಂದು ಬಿಜೆಪಿ ಸದಸ್ಯರು ಹೇಳಿದ್ದಾರೆ. ಪೆಗಾಸಸ್ ಸ್ಪೈವೇರ್ ಹಗರಣಕ್ಕೆ ಸಂಬಂಧಿಸಿದ ಚರ್ಚೆಯನ್ನು ಸಮಿತಿ ಇಂದು ನಡೆಸುವ ಉದ್ದೇಶ ಹೊಂದಿರುವುದರಿಂದ ಮಂಗಳವಾರ ಬಿಜೆಪಿ ಸದಸ್ಯರ ಈ ಪ್ರತಿಭಟನೆ ಸಾಕಷ್ಟು ಚರ್ಚೆಗೀಡಾಗಿದೆ.

ಮಂಗಳವಾರ ಸ್ಥಾಯಿ ಸಮಿತಿ ಸಭೆ ಸೇರುವ ಕೆಲವೇ ಗಂಟೆಗಳಿಗೆ ಮುನ್ನ ಕೇಂದ್ರ ಪರಿಸರ ಮತ್ತು ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಆವರು ಈ ಸಮಿತಿಯ ಬಿಜೆಪಿ ಸದಸ್ಯರ ಅನೌಪಚಾರಿಕ ಸಭೆ ನಡೆಸಿದ್ದರು.

ಸಂಜೆ 4 ಗಂಟೆಗೆ ಸಭೆಯನ್ನು  ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಚರ್ಚೆಗಾಗಿ ಕರೆಯಲಾಗಿತ್ತು.

ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಆಕ್ಷೇಪವೆತ್ತಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಸಂಸತ್ ಅಧಿವೇಶನದ ಸಮಯ ಈ ಸಮಿತಿ ಸಭೆ ನಡೆಸಲಾಗುವುದು ಸರಿಯಲ್ಲ ಎಂದು ಹೇಳಲಾರಂಭಿಸಿದರು. ಆದರೆ ಮಂಗಳವಾರದಂದೇ ಐದು ಇತರ ಸ್ಥಾಯಿ ಸಮಿತಿಗಳ ಸಭೆ ನಡೆದಿರುವ ಬಗ್ಗೆ ಅವರ ಗಮನ ಸೆಳೆಯಲಾಯಿತು. ಆಗ ಅವರು ತಮಗೆ ಸಭೆಯ ಕುರಿತು ಸೂಕ್ತ ಸಮಯದಲ್ಲಿ ತಿಳಿಸಲಾಗಿರಲಿಲ್ಲ ಎಂದು ತಗಾದೆಯೆತ್ತಿದ್ದರು, ಕೊನೆಗೆ ಐದು ಮಂದಿ ಇತರ ಬಿಜೆಪಿ ಸಂಸದರ ಜತೆ ಸೇರಿ ಅವರು ಸಭೆಯಿಂದ ಹೊರನಡೆದಿದ್ದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ದುಬೆ, ತಮಗೆ ಸಭೆಯ ಅಜೆಂಡಾ ದೊರಕಿರಲಿಲ್ಲ. ಸಂಸತ್ ಅಧಿವೇಶನ ಇರುವಾಗ ಅದರಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯ, ಈ ಸಂದರ್ಭ ಈ ಸಭೆ ಸರಿಯಲ್ಲ, ಅಧ್ಯಕ್ಷರು ತಮ್ಮ ಮನಬಂದಂತೆ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಬೆಳವಣಿಗೆ ಕುರಿತು ಮಾತನಾಡಿದ ಸಿಪಿಎಂ ಸದಸ್ಯ ಪಿ ಆರ್ ನಟರಾಜನ್, ಸಚಿವ  ಯಾದವ್ ಕರೆದ  ಅನೌಪಚಾರಿಕ ಸಭೆಗೆ ತಮಗೂ ಆಹ್ವಾನ ಬಂದಿತ್ತು. ಅಲ್ಲಿಗೆ ತೆರಳಿದಾಗ ತಪ್ಪಿ ತಮ್ಮನ್ನು ಆಹ್ವಾನಿಸಲಾಗಿತ್ತು ಎಂದು ತಿಳಿಸಲಾಗಿತ್ತು ಎಂದರಲ್ಲದೆ  ಸ್ಥಾಯಿ ಸಮಿತಿ ಸಭೆಯಿಂದ ಹೊರನಡೆಯಲು ಸೂಚಿಸಲೆಂದೇ ಈ ಸಭೆ ಕರೆಯಲಾಗಿತ್ತು ಎಂದಿದ್ದಾರೆ.

ಇಂದು ನಡೆಯುವ "ನಾಗರಿಕರ ಡಾಟಾ ಸುರಕ್ಷತೆ ಮತ್ತು ಗೌಪ್ಯತೆ" ವಿಚಾರದ ಚರ್ಚೆಯಲ್ಲಿ ಪೆಗಾಸಸ್ ಕೂಡ ಚರ್ಚೆಗೆ ಬರುವುದರಿಂದ ಮಂಗಳವಾರದ ಬಿಜೆಪಿ ಸದಸ್ಯರ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News